More

    ವದಂತಿಗಳಿಗೆ ಕಿವಿಗೊಡಬೇಡಿ

    ಮುಂಡಗೋಡ: ಕರೊನಾ ವೈರಸ್ ಬಗ್ಗೆ ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಒಂದು ವೇಳೆ ಯಾರಾದರೂ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿರುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ಎಚ್ಚರಿಕೆ ನೀಡಿದರು.

    ಪಟ್ಟಣದ ತಾಲೂಕು ಆಸ್ಪತ್ರೆ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಬೆಟಿಯನ್ ಕಾಲನಿಯಲ್ಲಿ ಶನಿವಾರ ರಾತ್ರಿ ಬಾಲಕ ಲಾಮಾ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕರೊನಾ ವೈರಸ್​ನಿಂದ ಮೃತಪಟ್ಟಿದ್ದಾನೆ ಎಂದು ಸುಳ್ಳು ವದಂತಿ ಹಬ್ಬಿಸಲಾಗಿದೆ. ಆದರೆ, ಆ ಬಾಲಕ ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿಬೆಟಿಯನ್ ಕಾಲನಿಯ ಡಿಟಿಆರ್ ಆಸ್ಪತ್ರೆ ಮತ್ತು ಸೆಟ್ಲ್​ಮೆಂಟ್ ಅಧಿಕಾರಿಗಳ ಜತೆಗೆ ಸತತ ಸಂಪರ್ಕದಲ್ಲಿದ್ದೇವೆ. ಇಟಲಿಯಿಂದ ಬಂದ ವ್ಯಕ್ತಿಯನ್ನು ಮನೆಯಲ್ಲಿಸರಿಸಿ ನಿಗಾ ಇಡಲಾಗಿದೆ. ಟಿಬೆಟಿಯನ್ನರು ಪಟ್ಟಣಕ್ಕೆ ಅನವಶ್ಯವಾಗಿ ಬರುವುದನ್ನು ಬಿಡಬೇಕು ಎಂದು ಅವರಿಗೆ ತಿಳಿಸಲಾಗಿದೆ ಎಂದರು.

    ರಾಜ್ಯ ಸರ್ಕಾರದ ಆದೇಶದಂತೆ ಜಾತ್ರೆ, ಸಮಾರಂಭ ಹಾಗೂ ಇತರ ಜನಸಂದಣಿ ಇರುವ ಕಾರ್ಯಕ್ರಮಗಳನ್ನು ತಡೆ ಹಿಡಿಯಲಾಗಿದೆ. ಪಟ್ಟಣದ ವಾರದ ಸಂತೆ ಇರುತ್ತಿದ್ದು, ಜನರು ಅವಶ್ಯವಿರುವ ಸಾಮಗ್ರಿಗಳನ್ನು ಖರೀದಿಸಿ ಆದಷ್ಟು ಬೇಗ ತಮ್ಮ ಮನೆಗಳಿಗೆ ತೆರಳಬೇಕು. ಈ ಬಗ್ಗೆ ಪ.ಪಂ. ಮತ್ತು ಪೊಲೀಸ್ ಇಲಾಖೆ ಸಾರ್ವಜನಿಕವಾಗಿ ಪ್ರಚಾರ ಮಾಡುತ್ತಾರೆ. ಕರೊನಾ ವೈರಸ್ ಶಂಕಿತ ವ್ಯಕ್ತಿಯನ್ನು ತಾಲೂಕು ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿರಿಸಿ, ದೃಢಪಟ್ಟರೆ, ಕೂಡಲೆ ಆ ವ್ಯಕ್ತಿಯನ್ನು ಕಾರವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಪ್ರತ್ಯೇಕ ಆಂಬುಲೆನ್ಸ್, ತರಬೇತಿ ಪಡೆದ ಚಾಲಕ ಮತ್ತು ಸಿಬ್ಬಂದಿ ಇದ್ದಾರೆ ಎಂದರು.

    ತಾಲೂಕಾಡಳಿತ ವೈದ್ಯಾಧಿಕಾರಿ ಎಚ್.ಎಫ್. ಇಂಗಳೆ ಮಾತನಾಡಿ, ಫೆ. 24ರಿಂದ ಇಲ್ಲಿಯವರೆಗೆ 40 ಜನ ಬೇರೆ ಕಡೆಯಿಂದ ಬಂದಿದ್ದಾರೆ. ಅದರಲ್ಲಿ 6 ಜನರು ಚೆನ್ನೈ ಮತ್ತು ಹಿಮಾಚಲಪ್ರದೇಶ ಹಾಗೂ ಇತರ ರಾಜ್ಯಗಳಿಂದ ಬಂದಿದ್ದಾರೆ. 9 ಜನರು ಭಾರತೀಯರು. 25 ಜನ ಬೇರೆ ದೇಶದಿಂದ ಬಂದಿದ್ದಾರೆ. ಅದರಲ್ಲಿ 6 ಜನರನ್ನು ಮನೆಯಲ್ಲಿರಿಸಲಾಗಿದೆ. 14ರಿಂದ 20 ದಿನಗಳವರೆಗೆ ಅವರ ಮೇಲೆ ನಿಗಾ ಇಡಲಾಗುವುದು ಎಂದರು.

    ಈ ವೇಳೆ ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯ, ಡಿಟಿಆರ್ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ನವಾಂಗ್ ತುಪ್ಟೇನ್, ಟಿಬೆಟಿಯನ್ ಸೆಟ್ಲಮೆಂಟ್ ಕಾರ್ಯದರ್ಶಿ ತೇಂಜಿನ್ ನೊರ್ಜಿಂಗ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts