More

    ವಚನ ಸ್ವತ್ತಿಗೆ ಎಲ್ಲರೂ ವಾರಸುದಾರರು – ಡಾ. ನೀಲಮ್ಮ ತಾಯಿ ಅಸುಂಡಿ – ಕದಳಿಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ 

    ದಾವಣಗೆರೆ: ಬಸವಾದಿ ಶಿವಶರಣರ ವಚನ ಸಂಪತ್ತಿಗೆ ಪ್ರತಿಯೊಬ್ಬರೂ ವಾರಸುದಾರರಾಗಬೇಕು. ಅದನ್ನು ಪ್ರಸಾರ ಮಾಡುವ ಸಂಘಗಳೂ ಗಟ್ಟಿಮುಟ್ಟಾಗಿರಬೇಕು ಎಂದು ಗದಗ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮ ತಾಯಿ ಅಸುಂಡಿ ಆಶಿಸಿದರು.
    ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣಮಂಟಪದಲ್ಲಿ ಕದಳಿ ಮಹಿಳಾ ವೇದಿಕೆಯ 15ನೇ ವಾರ್ಷಿಕೋತ್ಸವ, ಕದಳಿಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ನಾಡಿನ ವಿವಿಧೆಡೆ ರಚನೆಯಾಗಿದ್ದ ಅನೇಕ ಅಕ್ಕನ ಬಳಗಗಳು ಉಳಿದಿಲ್ಲ. ವೈಮನಸ್ಸು, ಭಿನ್ನಾಭಿಪ್ರಾಯದಿಂದಾಗಿ ಕೆಲವು ಸಂಘಟನೆಗಳು ವಿಘಟನೆಯಾಗಿವೆ. ವಿಚಾರವಾದಿ ಸದಸ್ಯರೇ ಇರುವ ಕದಳಿ ಮಹಿಳಾ ವೇದಿಕೆ ಸಂಘಟನೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.
    ವಚನಗಳು ಜಗತ್ತಿನ ಅನುಭಾವ ಸಾಹಿತ್ಯವಾಗಿವೆ. ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿ ಎಲ್ಲ ಕ್ಷೇತ್ರದಲ್ಲೂ ಇರಬೇಕಾದ ಮೌಲ್ಯಗಳನ್ನು ವಚನ ಸಾಹಿತ್ಯದಲ್ಲಿ ತುಂಬಿದ್ದಾರೆ. ಕಹಿ ಮಾತುಗಳಿಂದ ಮನಸ್ಸು ಹಾಗೂ ಮನೆ ಒಡೆಯಲಿದೆ. ದೇಹಕ್ಕೆ ಅನ್ನ-ಬಟ್ಟೆಯಷ್ಟೇ ತಲೆಯನ್ನು ಸ್ವಚ್ಛವಾಗಿಡಲು ಶರಣರು ನೀಡಿದ ಒಳ್ಳೆಯ ವಿಚಾರಗಳೂ ಅತ್ಯವಶ್ಯ ಎಂದು ಹೇಳಿದರು.
    12ನೇ ಶತಮಾನ ಸುವರ್ಣ ಮತ್ತು ಆದರ್ಶದ ಯುಗವಾಗಿದೆ. ನಿಶ್ಯಬ್ದದ ಅನುಭವವನ್ನು ಶಬ್ದ ರೂಪದಲ್ಲಿ ಸಿಡಿಸಿದವರು ಅಂದಿನ ವಚನಕಾರರು. ಅವರ ಮಾತುಗಳೇ ವಚನಗಳಾದವು. ಅವರ ಹೃದಯಗಳಿಂದ ಬಂದ ಸಾಹಿತ್ಯ ಶಾಶ್ವತವಾಗಿದೆ. ಅಕ್ಕಮಹಾದೇವಿ ಗತಿಸಿ 900 ವರ್ಷ ಕಳೆದರೂ ಆಕೆಯ ಹೆಸರು ಅಚ್ಚ ಅಳಿಯದೇ ಉಳಿದಿದೆ ಎಂದು ತಿಳಿಸಿದರು.
    ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ ಭಾರತದಲ್ಲಿ ಆಡಳಿತಾತ್ಮಕ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಆದರೆ ಬಸವಾದಿ ಶಿವಶರಣರು ನೀಡಿದ ನೀತಿ ಸೂತ್ರ ಒಳಗೊಂಡ ಮಾನವ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.
    ವಚನ ಸಾಹಿತ್ಯ ಎಲ್ಲ ಸಾಹಿತ್ಯಗಳ ಕಳಶಪ್ರಾಯವಾಗಿದೆ. ಇವು ಕಥಾನಕಗಳಲ್ಲ, ಅಕ್ಷರಗಳ ಚೆಲ್ಲಾಟವೂ ಅಲ್ಲ. ಪಾಂಡಿತ್ಯ ಪ್ರದರ್ಶನಕ್ಕಾಗಿ ಅಥವಾ ರಾಜರನ್ನು ಮೆಚ್ಚಿಸಲು ರಚಿತವಾದವೂ ಅಲ್ಲ. ಅವು ಎಲ್ಲರ ಅಂತರಂಗದ ಜ್ಞಾನಸುಧೆ, ಬದುಕಿನ ಭಾವಗೀತೆ ಎಂದು ಬಣ್ಣಿಸಿದರು.
    ಜನಸಾಮಾನ್ಯರ ನೋವು-ನಲಿವು, ಸ್ತ್ರೀ ಶೋಷಣೆಯ ಅಕ್ರಂದನ, ಮಹಿಳೆ-ಪುರುಷರ ನಡುವಿನ ಅಸಮಾನತೆಯ ಶಿವಶರಣರು ಸಾಹಿತ್ಯ ಬರೆದರು. ಅವು ಪ್ರಗತಿಪರ, ಜನಪರವೂ ಆಗಿವೆ. ವಚನಕಾರು ಇತರರಂತೆ ಭಿಕ್ಷೆ ಬೇಡಲಿಲ್ಲ, ಸತ್ಯಶುದ್ಧ ಕಾಯಕ ನಡೆಸಿದರು ಎಂದು ಹೇಳಿದರು.
    ಅಕ್ಕಮಹಾದೇವಿ ಹೆಸರಿನ ಕದಳಿ ಮಹಿಳಾ ವೇದಿಕೆಯಡಿ ಮಹಿಳೆೆಯರು ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಶರಣ ಸಂಸ್ಕೃತಿ ಕಾಪಾಡುವ ಹೊಣೆಗಾರಿಕೆ ಈ ವೇದಿಕೆಯ ಮಹಿಳೆಯರ ಮೇಲಿದೆ. ಯುವಕರು, ಮಕ್ಕಳಿಗೆ ವಚನ ಕಲಿಸುವ ಆಂದೋಲನ ಮಾಡಬೇಕು. ದಾವಣಗೆರೆ ಭಾಗದಲ್ಲಿ ಗರಿಷ್ಠ 5 ಸಾವಿರ ಸದಸ್ಯತ್ವ ಮಾಡಬೇಕು ಎಂದು ಆಶಿಸಿದರು.
    ಕಾರ್ಯಕ್ರಮದಲ್ಲಿ ಸಿರಿಗೆರೆ ಎಂಬಿಆರ್ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಪ್ರೊ.ಟಿ.ನೀಲಾಂಬಿಕೆ ಅವರಿಗೆ ಕದಳಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದತ್ತಿ ದಾನಿಗಳಾದ ಸಾವಿತ್ರಮ್ಮ ಸಿದ್ದಪ್ಪ, ಯಶಾ ದಿನೇಶ್, ಕದಳಿ ಮಹಿಳಾ ವೇದಿಕೆ ರಾಜ್ಯ ಸಮಿತಿ ಉಪಸಂಚಾಲಕಿ ಪ್ರಮೀಳಾ ನಟರಾಜ್, ಸಲಹಾ ಸಮಿತಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ದಾವಣಗೆರೆ ಜಿಲ್ಲಾಧ್ಯಕ್ಷೆ ವಿನೋದಾ ಅಜಗಣ್ಣನವರ್, ತಾಲೂಕು ಅಧ್ಯಕ್ಷೆ ಗಾಯತ್ರಿ ವಸ್ತ್ರದ್, ಪ್ರೊ. ಸುಧಾ ಹುಚ್ಚಣ್ಣನವರ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts