More

    ವಕೀಲ ವೃತ್ತಿಗೆ ಅಗೌರವ ತೋರಬೇಡಿ

    ಚಿತ್ರದುರ್ಗ: ವೃತ್ತಿಗೆ ಅಗೌರವ ತರುವ ಕೆಲಸ ವಕೀಲರು ಎಂದಿಗೂ ಮಾಡಬಾರದು. ಪ್ರಬಲ ಪ್ರಕರಣ ಬೇಧಿಸಿದಾಗ ಉನ್ನತ ಸ್ಥಾನಕ್ಕೇರುವ ಹಾದಿ ಸುಗಮವಾಗಲಿದೆ. ಹೀಗಾಗಿ ಆಯ್ಕೆ ಮಾಡಿಕೊಳ್ಳುವಾಗಲೂ ಜಾಣ್ಮೆ ಮೆರೆಯಬೇಕು. ಬಹುಮುಖ್ಯವಾಗಿ ನೊಂದ ಕ್ಷಕಿದಾರರಿಗೆ ನ್ಯಾಯ ಕೊಡಿಸಬೇಕು ಎಂದು ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ ಸಲಹೆ ನೀಡಿದರು.

    ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಸೋಮವಾರ ರಾತ್ರಿ ನಡೆದ ವಕೀಲರ ದಿನಾಚರಣೆ, ವೃತ್ತಿಯಲ್ಲಿ 25
    ಮತ್ತು 50 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಹಿರಿಯ ವಕೀಲರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ
    ಮಾತನಾಡಿದರು.

    ದೇಶಕ್ಕೆ ವಕೀಲರ ಕೊಡುಗೆ ಅಪಾರ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಅನೇಕರು ಹೋರಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ನ್ಯಾಯಾಧೀಶರಿಗೆ ತವರು ಮನೆಯಾದರೆ, ವಕೀಲರಿಗೆ ಆಧಾರ ಸ್ತಂಭವಾಗಿದೆ. ತ್ಯಾಗ ಮನೋಭಾವ ಕೂಡ ಸಮಾಜದಲ್ಲಿ ಗೌರವಯುತ ಹುದ್ದೆಗೆ ಕೊಂಡೊಯ್ಯುತ್ತದೆ ಎಂದು ಕಿವಿಮಾತು ಹೇಳಿದರು.

    ವೃತ್ತಿಯಲ್ಲಿ ಕೆಲವೊಮ್ಮೆ ಏರುಪೇರು ಸಹಜ. ಎಂತಹ ಪರಿಸ್ಥಿತಿ ಎದುರಾದರೂ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿಯುವುದು ಸೂಕ್ತವಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ವೃತ್ತಿಯ ಪಾವಿತ್ರೃತೆ ಕಾಪಾಡುವುದೇ ಅತಿ ಮುಖ್ಯವಾದುದು ಎಂದು ತಿಳಿಸಿದರು.

    ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಬಿ.ಗೀತಾ ಮಾತನಾಡಿ, ನ್ಯಾಯಾಧೀಶರು, ವಕೀಲರು ಒಂದೇ ರಥದ ಎರಡು ಚಕ್ರಗಳಾಗಿದ್ದು, ಒಟ್ಟಿಗೆ ಚಲಿಸಬೇಕು. ಇಲ್ಲದಿದ್ದರೆ, ಏರಿಳಿತವಾಗುತ್ತದೆ. ಆದ್ದರಿಂದ ಇಬ್ಬರ ನಡುವೆ ಉತ್ತಮ ಸೌಹಾರ್ದತೆ ಇರಬೇಕು. ಜತೆಗೆ ಅತ್ಯುತ್ತಮ ವಾಗ್ಮಿ, ತೀಕ್ಷ್ಣಮತಿಗಳಾದಾಗ ಮಾತ್ರ ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸಲು ಸಾಧ್ಯ ಎಂದು ಸಲಹೆ ನೀಡಿದರು.

    ಡಿ. 9ರಂದು ಈ ವರ್ಷದ ಕೊನೆಯ ಮೆಗಾ ಲೋಕ ಅದಾಲತ್ ನಡೆಯಲಿದೆ. ಇದಕ್ಕೆ ವಕೀಲರು ಸಹಕಾರ ನೀಡಬೇಕು. ಕಕ್ಷಿದಾರರು ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

    ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಕಾನೂನು ಪದವಿ ಪಡೆದ ಮಾತ್ರಕ್ಕೆ ವಕೀಲರಾಗಲು ಸಾಧ್ಯವಿಲ್ಲ. ವಕಾಲತ್ತು ಮತ್ತು ಸಂವಹನ ಕೌಶಲ ಹೆಚ್ಚಿಸಿಕೊಂಡಾಗ ಮಾತ್ರ ಪರಿಪೂರ್ಣರಾಗಿ ಮುನ್ನಡೆಯಲು ಸಾಧ್ಯ. ಆದ್ದರಿಂದ ಆಧುನಿಕತೆಗೆ ತಕ್ಕಂತೆ ನಿತ್ಯ ಅಪ್‌ಡೇಟ್ ಆಗದಿದ್ದರೆ, ಔಟ್‌ಡೇಟ್ ಆಗಬೇಕಾಗುತ್ತದೆ ಎಂದು ಸಲಹೆ ನೀಡಿದರು.

    ನ್ಯಾಯಾಧೀಶರಿಗೆ ಮನವರಿಕೆ ಮಾಡುವ ಚಾಕಚಕ್ಯತೆ ವಕೀಲರಲ್ಲಿ ಇರಬೇಕು. ಸಂವಿಧಾನದಲ್ಲಿ ಅಡಕವಾಗಿರುವ ಕಾನೂನಿನ ಅಂಶಗಳನ್ನು ಆಳವಾಗಿ ಅಭ್ಯಾಸಿಸಿರಬೇಕು. ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ವಾದ-ಪ್ರತಿವಾದ ಮಂಡಿಸುವಾಗ ಇಂಗ್ಲಿಷ್ ಭಾಷೆಯ ಮೇಲೂ ಹಿಡಿತ ಸಾಧಿಸಿರಬೇಕು. ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರು ನ್ಯಾಯ ಪಡೆಯಲು ನಿಮ್ಮ ಅಗತ್ಯ ತುಂಬಾ ಇದೆ ಎಂದರು.

    ವಕೀಲರಿಗೆ ಸನ್ಮಾನ: ಇದೇ ವೇಳೆ ವಕೀಲ ವೃತ್ತಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ನೋಟರಿ ಎಂ.ಚಲ್ಮೇಶ್, ದೊಡ್ಡರಂಗೇಗೌಡ, ಮುದ್ದಣ್ಣ, ಎಚ್.ಶಿವಕುಮಾರ್, ಸಿ.ಜೆ.ಲಕ್ಷ್ಮಿನಾರಾಯಣ, ಕೆ.ಇ.ಮಲ್ಲಿಕಾರ್ಜುನ್, ಹೇಮಾ, ಎಸ್.ವಿಜಯ ಸೇರಿ 20 ವಕೀಲರನ್ನು ಸನ್ಮಾನಿಸಲಾಯಿತು.

    ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ, ಬಿ.ಕೆ.ಕೋಮಲಾ, ಕೆಂಪರಾಜು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಸಹ ಕಾರ್ಯದರ್ಶಿ ಗಿರೀಶ್ ಬಿ.ಮಲ್ಲಾಪುರ, ಖಜಾಂಚಿ ಬಿ.ಇ.ಪ್ರದೀಪ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts