More

    ಲೌಕ್​ಡೌನ್ ಸಡಿಲ, ಮೆಣಸಿನಕಾಯಿಗೆ ಆಶಾದಾಯಕ ದರ

    ಮುಂಡಗೋಡ: ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆಗಾರರಿಗೆ ಲಾಕ್​ಡೌನ್ ಸಡಿಲಿಕೆ ಕೊಂಚ ಸಮಾಧಾನ ತಂದಿದೆ. ತಾವು ಬೆಳೆದ ಫಸಲು ಕಟಾವು ಮಾಡಿ ಮಾರಾಟಕ್ಕೆ ಬೇರೆಡೆ ಕಳುಹಿಸಲು ಮುಂದಾಗಿದ್ದಾರೆ.

    ತಾಲೂಕಿನಲ್ಲಿ ಅಂದಾಜು ನಾಲ್ಕೈದು ವರ್ಷಗಳಿಂದ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಹುನಗುಂದ, ಅಗಡಿ, ನಂದಿಕಟ್ಟಾ, ಇಂದೂರ, ಬಾಚಣಕಿ, ಅರಶಿಣಗೇರಿ ಮತ್ತು ನ್ಯಾಸರ್ಗಿ ಗ್ರಾಮಗಳಲ್ಲಿ ಹೆಚ್ಚಾಗಿ ಮೆಣಸಿನಕಾಯಿ ಬೆಳೆಯುತ್ತಾರೆ. 4-1, 4-1-ಜಿ, 5-1-5, ಜಿ- 4-10, ಒ- 4-10… ಹೀಗೆ ವಿವಿಧ ತಳಿಯ ಮೆಣಸಿನಕಾಯಿ ಇಲ್ಲಿ ಬೆಳೆಯಲಾಗುತ್ತದೆ. ಪ್ರತಿವರ್ಷ ಫೆಬ್ರವರಿ ತಿಂಗಳ ನಂತರ ಗಿಡಗಳನ್ನು ನಾಟಿ ಮಾಡುತ್ತಾರೆ. ತಾಲೂಕಿನಲ್ಲಿ ಈಗ ಒಟ್ಟು 125 ಎಕರೆ ಪ್ರದೇಶದಲ್ಲಿ ಇದನ್ನು ಬೆಳೆಯಲಾಗಿದೆ. ಈ ಮೊದಲೇ ಕಟಾವು ಆರಂಭವಾಗಿದ್ದು, ಈಗ ಮೂರನೇ ಬಾರಿಯ ಕಟಾವು ಮಾಡುತ್ತಿದ್ದಾರೆ.

    ಮೊದಲ ಬಾರಿ ಕಟಾವು ಮಾಡುವಾಗ ಲಾಕ್​ಡೌನ್ ಆದೇಶ ಜಾರಿಗೆ ಬಂತು. ಆಗ ಸ್ವಲ್ಪ ಕಷ್ಟವಾಯಿತು. ಒಂದು ಬಾರಿ ಕಟಾವು ಮಾಡಿದ ನಂತರ ಮತ್ತೆ 15 ದಿನ ಬಿಟ್ಟು ಕಟಾವು ಮಾಡಲಾಗುತ್ತದೆ.

    ಸಾಮಾನ್ಯವಾಗಿ ಎಕರೆಗೆ 60 ಕ್ವಿಂಟಾಲ್ ಮೆಣಸಿನಕಾಯಿ ಬೆಳೆಯಬಹುದು. ಆದರೆ, ಮಳೆ ಸುರಿದಿದ್ದರಿಂದ ಇಳುವರಿ ಕಡಿಮೆಯಾಗಿದೆ. ಸದ್ಯಕ್ಕೆ ದರ ಕ್ವಿಂಟಾಲ್​ಗೆ 2,250 ರೂ. ಇದೆ. ಲಾಕ್​ಡೌನ್ ಸಡಿಲಿಕೆಯಾದ ಕಾರಣ ಮತ್ತೆ ದರ ಹೆಚ್ಚಾಗಬಹುದಾಗಿದೆ. ತಾಲೂಕಿನಿಂದ ಪ್ರತಿ ದಿನ 4-5 ಟನ್ ಮೆಣಸಿನಕಾಯಿಯನ್ನು ಮಹಾರಾಷ್ಟ್ರ, ಹೈದರಾಬಾದ್ ಮತ್ತು ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಚಿಲ್ಲಿ ಸಾಸ್ ಮಾಡಲು ಇದನ್ನು ಬಳಸಲಾಗುತ್ತದೆ.

    ನಾನು ಬೆಳೆದ ಮೊದಲ ಮೆಣಸಿನಕಾಯಿ ಬೆಳೆಯ ಮೊದಲ ಕಟಾವು ಮುಗಿದಿದ್ದು, 1.5 ಕ್ವಿಂಟಾಲ್ ಆಗಿದೆ. ಇನ್ನೂ 3-4 ಬಾರಿ ಕಟಾವು ಆಗುತ್ತದೆ. ಲಾಕ್​ಡೌನ್​ನಿಂದ ದರ ಸಿಗಲಿಲ್ಲ. ಆದರೆ, ಈ ವಾರ ದರ ಹೆಚ್ಚಾಗಿದೆ. ಮುಂದೆ ಮಾರುಕಟ್ಟೆ ಯಥಾಸ್ಥಿತಿಗೆ ಬಂದರೆ ಅಂದಾಜು ಕ್ವಿಂಟಾಲ್​ಗೆ 3000 ರೂ. ದರ ಸಿಕ್ಕರೆ ನನಗೆ ಲಾಭವಾಗುವುದು.
    ವೀರಭದ್ರಪ್ಪ ಶೆಲವಡಿ ಬಾಚಣಕಿ, ಮೆಣಸಿನಕಾಯಿ ಬೆಳೆಗಾರ

    ಸಾಮಾನ್ಯವಾಗಿ ಕ್ವಿಂಟಾಲ್​ಗೆ 2,500-3,000 ರೂ. ಒಳ್ಳೆಯ ದರ. ಆದರೆ, ಈಗ ಮಾರಾಟವಾಗದೇ ಉಳಿಯುವುದೆಂದು ಖರೀದಿಗೆ ಹಿಂಜರಿಯುತ್ತಿದ್ದಾರೆ. ಖರೀದಿದಾರರನ್ನು ರೈತರಿಗೆ ನೇರ ಸಂಪರ್ಕ ಮಾಡಿಸಿ ಹೊಂದಾಣಿಕೆಯಿಂದ ಮಾರಾಟ ಮಾಡಲಾಗುತ್ತಿದೆ. ಕಳೆದ ವಾರ ದರ ಕ್ವಿಂಟಾಲ್​ಗೆ 1200-1300 ಇತ್ತು. ಈ ವಾರ 2300 ಆಗಿದೆ.
    | ಎಸ್.ಎಫ್. ಪಾಟೀಲ, ಸಹಾಯಕ ತೋಟಗಾರಿಕೆ ಅಧಿಕಾರಿ

    ಕಳೆದ ಕೆಲವು ವರ್ಷಗಳಿಂದ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಮೆಣಸಿನಕಾಯಿ ಲೋಡ್ ತುಂಬಿಕೊಂಡು ಹೋಗುತ್ತಿದ್ದೇನೆ. ಮುಂಬೈಯಲ್ಲಿ ಪ್ಯಾಕ್ ಆಗಿ ಅಲ್ಲಿಂದ ಹೊರ ದೇಶಗಳಿಗೆ ರಫ್ತಾಗುತ್ತದೆ. ಮೊದಲು ಸಾಗಾಣಿಕೆಗೆ ಸಮಸ್ಯೆ ಇತ್ತು. ಈಗ ಜಿಲ್ಲಾಧಿಕಾರಿಗಳ ಅನುಮತಿ ದೊರೆತ ನಂತರ ಸಮಸ್ಯೆ ಇಲ್ಲ.
    | ಆಸಿಫ್ ವಲಿಅಹ್ಮದ್ಎಂ.ಬಿ. ಗ್ಲೋಬಲ್ ಎಕ್ಸ್​ಪೋರ್ಟರ್ ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts