More

    ಲೋಕಸಭಾ ಫಲಿತಾಂಶ ವಿಶ್ವದಲ್ಲಿ ಚರ್ಚೆಯಾಗಲಿದೆ

    ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಪಡೆಯುವ ಸ್ಥಾನಗಳ ಕುರಿತು ವಿಶ್ವದಲ್ಲಿ ಚರ್ಚೆಯಾಗಲಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

    ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಚಿತ್ರದುರ್ಗ ಲೋಕಸಭಾ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

    ದೇಶದಲ್ಲಿ 400ರ ಗುರಿ ದಾಟೋಣ. ರಾಜ್ಯದಲ್ಲಿ 28 ಸ್ಥಾನ ಪಡೆಯುವಲ್ಲಿ ಕಾರ್ಯಪ್ರವೃತ್ತರಾಗೋಣ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಬಿಜೆಪಿ ಸಂಕಲ್ಪವಾಗಿದೆ. 10 ದಿನದೊಳಗೆ ಚುನಾವಣೆ ಘೋಷಣೆಯಾಗಲಿದ್ದು, ಮತದಾನ ದಿನದವರೆಗೂ ಹಗಲಿರುಳು ಶ್ರಮಿಸೋಣ ಎಂದು ಮುಖಂಡರು, ಕಾರ್ಯಕರ್ತರಿಗೆ ಸಲಹೆ ನೀಡಿದರು.

    ಅನ್ಯ ಪಕ್ಷದವರನ್ನು ಟೀಕಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಈವರೆಗಿನ ಸಾಧನೆ ಎಲ್ಲರಿಗೂ ತಿಳಿಸುವ ಕೆಲಸ ನಾವೆಲ್ಲ ಸೇರಿ ಮಾಡೋಣ. ಬಿಜೆಪಿಗೆ ಬಲ ತುಂಬಿದರೆ, ದೇಶದ ಅಭಿವೃದ್ಧಿಗೂ ಶಕ್ತಿ ತುಂಬಿದಂತೆ ಎಂಬುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

    ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ನಾಯಕತ್ವ ವಿಶ್ವ ಮೆಚ್ಚಿದೆ. ದೇಶದೆಲ್ಲ್ಲಾ ಕಡೆ ಬಿಜೆಪಿ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಅಭೂತಪೂರ್ವ ಜನಾಶೀರ್ವಾದ ಗಳಿಸಲು ಮನೆ-ಮನೆಗೆ ಭೇಟಿ ನೀಡೋಣ. ರಾಷ್ಟ್ರಕ್ಕೆ ನೀಡಿದ ಕೊಡುಗೆಗಳ ಕುರಿತು ತಿಳಿಸೋಣ ಎಂದು ಸಲಹೆ ನೀಡಿದರು.

    ಬಿಜೆಪಿ ಮುಖಂಡ ಲಿಂಗಮೂರ್ತಿ ಮಾತನಾಡಿ, ಬಿಜೆಪಿಗರಿಗೆ ದೇಶ ಸೇವೆ ಅತ್ಯಂತ ಮುಖ್ಯವಾದುದು. ಹೀಗಾಗಿ ಪಕ್ಷದ ಮೇಲೆ ಭರವಸೆ ಹೆಚ್ಚಿದೆ. ಮೋದಿ ಅವರಿಂದ ಪ್ರಗತಿ ಸಾಧ್ಯವೆಂಬುದು ಜನರಿಗೆ ಮನವರಿಕೆ ಆಗಿದೆ. ಆದ್ದರಿಂದ ಸಂಘಟನಾತ್ಮಕವಾಗಿ ಸಾಗೋಣ ಎಂದರು.

    ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಕಮಲವೇ ನಮ್ಮ ಅಭ್ಯರ್ಥಿಯೆಂದು ರಾಜ್ಯದೆಲ್ಲ ಕ್ಷೇತ್ರಗಳಲ್ಲೂ ದುಡಿದಾಗ ಮಾತ್ರ ಕಾಂಗ್ರೆಸ್ ಸೋಲಿಸಲು ಸಾಧ್ಯ. ಕಾರ್ಯಕರ್ತರು ವೈಯಕ್ತಿಕ ಕಾರ್ಯ ಬೇರೆಯವರಿಗೆ ವರ್ಗಾಯಿಸಿ, ಚುನಾವಣಾ ಕೆಲಸದಲ್ಲಿ ಸಕ್ರಿಯರಾಗಿ ಎಂದು ಸಲಹೆ ನೀಡಿದರು.

    ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ, ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅವರಷ್ಟೇ ಉತ್ಸಾಹದಿಂದ ನಾವೆಲ್ಲರೂ ಶ್ರಮಿಸಬೇಕಿದೆ. ರಾಮನ ಅಸ್ತಿತ್ವ ಪ್ರಶ್ನಿಸುವ ಕಾಂಗ್ರೆಸ್ಸಿಗರು, ಮಾಂಸ ಸೇವಿಸಿ ದೇಗುಲಕ್ಕೆ ಹೋಗುತ್ತಾರೆ. ಆದರೆ, ದೇಶ ಒಗ್ಗೂಡಿಸಿರುವ ರಾಮಮಂದಿರದಿಂದ ಬಿಜೆಪಿ ಶಕ್ತಿ ಹೆಚ್ಚಾಗಿದೆ ಎಂದರು.

    ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಶಾಸಕ ರಾಜೇಶ್ ಗೌಡ, ಜಿಲ್ಲಾ ಸಹ ಪ್ರಭಾರಿ ಪ್ರೇಮ್‌ಕುಮಾರ್, ಮುಖಂಡರಾದ ಶಂಕ್ರಣ್ಣ, ಮಾಧುರಿ ಗಿರೀಶ್, ಸಂಪತ್, ಸುರೇಶ್ ಸಿದ್ಧಾಪುರ, ಭಾರ್ಗವಿ ದ್ರಾವಿಡ್, ಜಿ.ಎಚ್.ಮೋಹನ್, ಶೈಲಜಾರೆಡ್ಡಿ, ಮಂಜುನಾಥ್, ಡಾ.ಸಿದ್ಧಾರ್ಥ ಗುಂಡಾರ್ಪಿ, ದಗ್ಗೆ ಶಿವಪ್ರಕಾಶ್, ಡಿ.ಕೆ.ಜಯಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts