More

    ಲಿಂ. ಸಿದ್ಧೇಶ್ವರ ಶ್ರೀಗಳು ರಚಿಸಿದ ಸಂಪುಟಗಳ ಲೋಕಾರ್ಪಣೆ, ಸಹೋದರಿ ವೀಣಾ ಬನ್ನಂಜೆ ಅಭಿಮತ, ಅಪ್ಪಾವ್ರ ಆಧ್ಯಾತ್ಮಿಕ ಘನ ಸಂಪತ್ತು ಕಾಯ್ದುಕೊಳ್ಳೋಣ

    ವಿಜಯಪುರ: ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪ್ರವಚನಗಳ ಸಾರವನ್ನಾಧರಿಸಿ ಜ್ಞಾನಯೋಗಿ ಲಿಂ. ಸಿದ್ಧೇಶ್ವರ ಶ್ರೀಗಳು ರಚಿಸಿದ ಆರು ಸಾಹಿತ್ಯ ಸಂಪುಟಗಳನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು.

    ನಗರದ ಜ್ಞಾನ ಯೋಗಾಶ್ರಮದಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಈಶಾವಾಶ್ಯೋಪನಿಷತ್, ಕೇನೋಪನಿಷತ್, ಕಠೋಪನಿಷತ್, ಮುಂಡಕೋಪನಿಷತ್, ಮಾಂಡೂಕ್ಯೋಪನಿಷತ್, ಶ್ವೇತಾಶ್ವತರೋಪನಿಷತ್, ಪಾತಂಜಲಿ ಯೋಗಸೂತ್ರ, ಶ್ರೀಮದ್ ಭಗವದ್ಗೀತೆ, ಸಿದ್ಧಾಂತ ಶಿಖಾಮಣಿ, ಅಲ್ಲಮಪ್ರಭುದೇವರ ವಚನ ನಿರ್ವಚನ ಸಾರ ಒಳಗೊಂಡ ಒಟ್ಟು ಆರು ಸಂಪುಟಗಳನ್ನು ಬಿಡುಗಡೆಗೊಳಿಸಲಾಯಿತು. ಇನ್ನೂ ಹೆಚ್ಚಿನ ಸಂಪುಟಗಳು ಬಿಡುಗಡೆಗೊಳ್ಳಲು ಸಿದ್ಧಗೊಂಡಿದ್ದಾಗಿ ಜ್ಞಾನಯೋಗಾಶ್ರಮದ ಪೂಜ್ಯರುಗಳು ತಿಳಿಸಿದರು.

    ಸಂಪುಟಗಳ ವಿಶೇಷತೆ:

    ಗ್ರಂಥಗಳನ್ನು ಪರಿಚಯಿಸಿದ ವೀಣಾ ಬನ್ನಂಜೆ ಅವರು, ಸಿದ್ಧೇಶ್ವರ ಅಪ್ಪಾವ್ರ ವ್ಯಕ್ತಿತ್ವ ಎಷ್ಟು ಘನವೋ ಅವರ ವಾಕ್ ಕೂಡ ಅಷ್ಟೇ ಘನ. ಅವರು ರಚಿಸಿದ ಈ ಸಂಪುಟಗಳಲ್ಲಿ ಆಳ, ವಿಸ್ತಾರವುಳ್ಳ ಅಧ್ಯಾಯಗಳಿವೆ. ವರ್ಷಗಟ್ಟಲೆ ಓದಿ ತಿಳಿದುಕೊಳ್ಳುವಂಥ ಸಂಪುಟಗಳು ಇವಾಗಿದ್ದು, ಯಾವುದೇ ಪೂರ್ವಗ್ರಹಗಳಿಲ್ಲದೇ ಬರೆದಂಥವುಗಳು.
    ವೇದಾಂತ ಕೇಸರಿ ಜ್ಞಾನ ಮಲ್ಲಿಕಾರ್ಜುನ ಶ್ರೀಗಳು ಜ್ಞಾನ ಪ್ರಸಾರ ಕಾರ್ಯ ಕೈಗೊಂಡ ಸಂದರ್ಭ ಸಿದ್ಧೇಶ್ವರ ಅಪ್ಪಾವ್ರ ಖುದ್ದಾಗಿ ಆಲಿಸಿ ಬರೆದ ಪ್ರವಚನಗಳ ಸಾರಗಳಿವು. ವೀರಶೈವರಿಗೆ ಉಪನಿಷತ್ತಿನಿಂದಲೇ ಮುಕ್ತಿ ಎನ್ನುವಷ್ಟರ ಮಟ್ಟಿಗೆ ಅಪ್ಪಾವ್ರ ಈ ಗ್ರಂಥಗಳಲ್ಲಿ ಬರೆದಿದ್ದಾರೆ. ಅಪ್ಪಾವ್ರ ಈ ಘನ ಸಂಪತ್ತು ಕಾಯ್ದುಕೊಳ್ಳಬೇಕಿದೆ. ಅದನ್ನು ಜೋಪಾನವಾಗಿ ನಮ್ಮ ಕೈಗೆ ಇರಿಸಿದ್ದು ನಾವೆಲ್ಲರೂ ಕಾಯ್ದುಕೊಳ್ಳೋಣ. ನಾವು ಮಾಡುವ ಕೃತಜ್ಞತಾ ಕಾರ್ಯ ಎಂದರೆ ಈ ಪುಸ್ತಕ ಮನೆಯಲ್ಲಿ ಇರಿಸಿ ಪೂಜಿಸುವುದಲ್ಲ ಓದಿ ತಿಳಿದುಕೊಳ್ಳುವುದು ಎಂದರು.

    ವೇದ ವ್ಯಾಸರು ಮಹಾಭಾರತ ಬರೆಯುವಾಗ ಗಣಪತಿಯನ್ನನ್ನು ಲಿಪಿಕಾರನಾಗಿ ಬಳಿಸಿಕೊಂಡರಂತೆ. ಆದರೆ ಗಣಪತಿ ಬರೆಯುವ ಮುಂಚೆ ಎಲ್ಲಿಯೂ ನಿಲ್ಲಿಸದಂತೆ ಹೇಳಬೇಕೆಂದು ನಿಯಮ ಹಾಕಿದರಂತೆ. ಆಗ ವೇದವ್ಯಾಸರು ಆಯಿತು ನಾನು ಹೇಳುತ್ತೇನೆ ಆದರೆ, ಅದನ್ನು ನೀನು ತಿಳಿದುಕೊಂಡು ಬರೆಯಿರಿ ಎಂದರಂತೆ. ಹಾಗೆಯೇ ಸಿದ್ಧೇಶ್ವರ ಅಪ್ಪಾವ್ರ ಮಲ್ಲಿಕಾರ್ಜುನ ಶ್ರೀಗಳು ಹೇಳಿದ್ದನ್ನು ಅರಿತು ಬರೆದರು. ಪತಂಜಲಿ ಯೋಗಸೂತ್ರ ಅಷ್ಟಾಂಗ ಯೋಗ ವಿವರಿಸುವಂಥದ್ದು. ಈಶ್ವರನನ್ನು ಒಪ್ಪಿಕೊಂಡ ಯೋಗ ಸೂತ್ರ ಇದು. ಮುಕ್ಕಾಲು ಭಾಗ ಮಲ್ಲಿಕಾರ್ಜುನ ಶ್ರೀಗಳು ಹೇಳಿದ್ದನ್ನು ಬರೆದಿದ್ದು, ಇನ್ನುಳಿದ ಭಾಗ ಅಪ್ಪಾವ್ರೆ ಬರೆದಿದ್ದಾರೆ ಎನ್ನಿಸುತ್ತದೆ. ಸಿದ್ದಾಂತ ಶಿಖಾಮಣಿ, ಅಲ್ಲಮನ ವಚನ ನಿರ್ವಚನ ಹೀಗೆ ಪ್ರತಿಯೊಂದು ಅರ್ಥಪೂರ್ಣವಾಗಿ ಮೂಡಿ ಬಂದಿವೆ ಎಂದರು.

    ಪೂಜ್ಯರ ಆಶಯ ಅನುಷ್ಟಾನಗೊಳ್ಳಲಿ:

    ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳು ಅವರ ಆದರ್ಶ, ಚಿಂತನೆಗಳಲ್ಲಿ ನಾವು ಕಾಣಬೇಕು. ಅವರು ಬದುಕಿರು ಕಾಲಘಟ್ಟದಲ್ಲಿ ನಾವು ಬದುಕಿರುವುದೇ ನಮ್ಮ ಪುಣ್ಯ ಎಂದು ಜನ ವೇದಿಕೆ ಮೇಲೆಲ್ಲಾ ಹೇಳುತ್ತಿದ್ದಾಗ ನನಗೆ ಅತೀಶಯೋಕ್ತಿ ಎನ್ನಿಸುತ್ತಿತ್ತು. ಆದರೆ, ಅವರು ಅಗಲಿದಾಗ ಅವರ ಜೊತೆ ಸಂಪರ್ಕ ಹೊಂದಿದವರು ಎಷ್ಟು ಭಾಗ್ಯವಂತರು ಎಂಬುದು ಅರಿವಿಗೆ ಬಂತು. ಆಗ ನನ್ನ ಭಾವನೆಯೇ ತಪ್ಪು ಎಂಬುದರ ಅರಿವಾಯಿತು ಎಂದರು.
    ಸನ್ಯಾಸಿಗಳು ಎಲ್ಲರಿಗೂ ಸೇರಿದವರು. ಯಾವುದೇ ಜಾತಿ, ಮತ, ಪಂಥಗಳಿಗೆ ಸೇರಿದವರಲ್ಲ ಎಂಬ ಮಾತನ್ನು ಚಾಚೂ ತಪ್ಪದೆ ಅನುಷ್ಟಾನಕ್ಕೆ ತಂದವರು ಸಿದ್ಧೇಶ್ವರ ಶ್ರೀಗಳು. ಮೆಚ್ಚಬೇಕಾದದ್ದನ್ನು ಮೆಚ್ಚಿದರು. ಅವರಲ್ಲಿ ಖಂಡನೆ ಮಾತು ಬರಲೇ ಇಲ್ಲ. ಪ್ರತಿಯೊಂದನ್ನೂ ಹೇಳಿದರಾದರೂ ದ್ವೇಷ ಬಗ್ಗೆ ಅವರ ಬಾಯಿಯಿಂದ ಬರಲೇ ಇಲ್ಲ. ನನಗೆ ಬಹಳ ಹಿಡಿಸಿದ್ದು ಈಶ್ಯಾವಾಸ್ಯ ಉಪನಿಷತ್ತಿನ ಧರ್ಮ ಎಂದು ಸಿದ್ಧೇಶ್ವರ ಶ್ರೀಗಳು ಹೇಳಿದ್ದರು. ಜೀವನದಲ್ಲಿ ದಿವ್ಯತೆ ಕಾಣಬೇಕು ಎಂಬುದೇ ಅವರ ಸಂದೇಶ. ಸ್ವಾಮಿ ವಿವೇಕಾನಂದರ ಸಂದೇಶ ಕೂಡ ಅದೇ ಆಗಿತ್ತು. ಪ್ರಕೃತಿಯನ್ನು ಮೈಗೂಡಿಸಿಕೊಂಡು ಪ್ರಕೃತಿಯಲ್ಲಿ ಲೀನವಾದವರು ಸಿದ್ಧೇಶ್ವರ ಸ್ವಾಮೀಜಿ. ಪೂಜ್ಯರೇ ಹೇಳಿದ ಹಾಗೆ ಈವರೆಗೆ ಹೇಳಿದ್ದೆಲ್ಲ ಹೇಳಿಯಾಗಿದೆ ಇನ್ನೇನಿದ್ದರೂ ಆಚರಣೆಗೆ ತರಬೇಕಿದೆ. ಅವರಂತೆ ಒಂದು ಹೆಜ್ಜೆ ಯಾದರೂ ಹಾಕಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು.
    ಅಧ್ಯಕ್ಷತೆ ವಹಿಸಿದ್ದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪೂಜ್ಯರ ಒಡನಾಟ ಹಾಗೂ ಸಂಪುಟಗಳ ವಿಶೇಷತೆಗಳ ಕುರಿತು ವಿವರಿಸುತ್ತಾ ಮುಂದಿನ ಒಂದು ಸಂಪುಟ ತಯಾರಿಕೆಯ ಸಂಪೂರ್ಣ ಖರ್ಚು-ವೆಚ್ಚ ತಾವೇ ಭರಿಸುವುದಾಗಿ ತಿಳಿಸಿದರು.
    ಪೂಜ್ಯ ಬಸವಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು, ಅಭಿನವ ಸದಾಶಿವಾನಂದ ಮಹಾಸ್ವಾಮಿಗಳು, ಶ್ರದ್ಧಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts