More

    ಲಿಂಬೆ ಬೆಳೆಗಾರರಿಗೆ ಕರೊನಾ ಗೋಳು

    ಲಕ್ಷ್ಮೇಶ್ವರ: ಲಿಂಬೆ ಹಣ್ಣು ಬೆಳೆಗಾರರಿಗೂ ಕರೊನಾ ಎಫೆಕ್ಟ್ ತಟ್ಟಿದೆ. ಮಾರುಕಟ್ಟೆ ಮತ್ತು ಉತ್ತಮ ಬೆಲೆ ಸಿಗದಿರುವುದರಿಂದ ಲಿಂಬೆ ಹಣ್ಣು ತೋಟದ ಗಿಡಗಳ ಬುಡದಲ್ಲೇ ಕೊಳೆಯುವಂತಾಗಿದೆ.

    ತಾಲೂಕಿನ ಯಳವತ್ತಿ ಗ್ರಾಮದ ಪ್ರಗತಿಪರ ರೈತ ವಿಶ್ವನಾಥ ಚಿಂಚಲಿ ಅವರು ಕೃಷಿಯಲ್ಲಿ ಸದಾ ಹೊಸತನ್ನು ರೂಢಿಸಿಕೊಂಡವರು. ತಮ್ಮ 7 ಎಕರೆ ಜಮೀನಿನಲ್ಲಿ 3 ವರ್ಷದ ಹಿಂದೆ 700 ನೆಲ್ಲೂರ (ಎನ್-1) ತಳಿಯ ಲಿಂಬೆ ಬೆಳೆಸಿದ್ದಾರೆ. ಸಸಿ ನೆಟ್ಟ ಮೂರು ವರ್ಷದ ನಂತರ ಕಳೆದ ಮಾರ್ಚ್​ನಲ್ಲಿ ಲಿಂಬೆ ಗಿಡ ಫಲ ಕೊಡಲು ಪ್ರಾರಂಭಿಸಿತು. ಈ ವೇಳೆಗೆ ಕರೊನಾ ಮಹಾಮಾರಿ ಹಾವಳಿ ಹೆಚ್ಚಿ ಲಾಕ್​ಡೌನ್ ಆಗಿದ್ದರಿಂದ ಮಾರುಕಟ್ಟೆ ದೊರೆಯದೆ ಲಕ್ಷಾಂತರ ರೂ. ಫಲ ಹಾನಿಗೊಳಗಾಗಿದೆ.

    ಹನಿ ನೀರಾವರಿ, ಸಾವಯವ ಕೃಷಿ ಪದ್ಧತಿ, ಡಿ-ಕಂಪೋಜ್ ಬಳಕೆಯಿಂದ ಸಮೃದ್ಧವಾಗಿ ಬೆಳೆದ ಪ್ರತಿಯೊಂದು ಲಿಂಬೆ ಗಿಡದಲ್ಲಿ 300ಕ್ಕೂ ಹೆಚ್ಚು ಹಣ್ಣುಗಳು ಬಿಟ್ಟಿವೆ. ಆದರೆ, ಮಾರುಕಟ್ಟೆ ಮತ್ತು ಬೆಲೆಯೂ ಇಲ್ಲದ್ದರಿಂದ ಪ್ರತಿ ಗಿಡದ ಕೆಳಗೆ ನೂರಾರು ಲಿಂಬೆ ಹಣ್ಣುಗಳು ಬಿದ್ದು ಕೊಳೆಯುತ್ತಿವೆ. ಪ್ರತಿವರ್ಷ ಫಲ ಬರುವ ವೇಳೆಗೆ ಸಾವಿರ ಹಣ್ಣಿಗೆ 2 ರಿಂದ 3 ಸಾವಿರ ರೂ. ದರ ಇರುತ್ತಿತ್ತು. ಉತ್ತಮ ಗುಣಮಟ್ಟದ, ದೊಡ್ಡಗಾತ್ರದ ಈ ಹಣ್ಣಿನಿಂದ ಪ್ರತಿ ತಿಂಗಳು ಲಕ್ಷ ರೂ. ಆದಾಯವನ್ನು ವಿಶ್ವನಾಥ ನಿರೀಕ್ಷಿಸಿದ್ದರು.

    ಆದರೆ, ಕರೊನಾ ಹಾವಳಿ ಮತ್ತು ಸದ್ಯ ಮಾರ್ಕೆಟ್​ಗೆ ವಿಜಯಪುರ ಭಾಗದ ಲಿಂಬೆ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು ಸಾವಿರ ಹಣ್ಣಿಗೆ (1 ಡಾಗ್) 200 ರಿಂದ 300 ರೂ.ವರೆಗೆ ಮಾರಾಟವಾಗುತ್ತಿದೆ. ಕರೊನಾ ಎಫೆಕ್ಟ್​ನಿಂದಾಗಿ ಹೋಟೆಲ್, ಹಾಸ್ಟೆಲ್, ಸಭೆ, ಸಮಾರಂಭ, ಮದುವೆ, ಅನ್ನಪ್ರಸಾದ ಎಲ್ಲವೂ ಬಂದ್ ಆಗಿದ್ದರಿಂದ ಮಾರ್ಕೆಟ್​ನಲ್ಲಿ ಲಿಂಬೆ ಹಣ್ಣನ್ನು ಕೇಳುವವರಿಲ್ಲದೆ ಚಿಲ್ಲರೆ ಮಾರ್ಕೆಟ್​ನಲ್ಲಿಯೂ 10 ರೂ.ಗೆ 20ಕ್ಕಿಂತಲೂ ಹೆಚ್ಚು ಹಣ್ಣು ಕೊಡುವಂತಾಗಿದೆ. ಕೆಲ ಬಾರಿ ಮಾರಾಟವಾಗದೆ ಚರಂಡಿಗೆ ಚೆಲ್ಲುತ್ತಿದ್ದಾರೆ.

    ನಾನು ನಂಬಿದ ಭೂಮಿತಾಯಿ, ಕೃಷಿ ನನ್ನ ಕೈ ಹಿಡಿಯುತ್ತದೆ ಎಂಬ ಆಶಾಭಾವನೆ ಹೊಂದಿದ್ದೇನೆ. ನನ್ನಂತೆ ಅನೇಕ ಬಡ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ಸರ್ಕಾರ ತೋಟಗಾರಿಕೆ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಬೇಕು. ಹಣ್ಣು, ತರಕಾರಿ ಬೆಳೆದ ಎಲ್ಲ ರೈತರಿಗೂ ಸಹಾಯಧನ ಕೊಡಬೇಕು.

    | ವಿಶ್ವನಾಥ ಚಿಂಚಲಿ, ಯಳವತ್ತಿ ಪ್ರಗತಿಪರ ರೈತ

    ರೈತ ವಿಶ್ವನಾಥ ಚಿಂಚಲಿ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಗುಣಮಟ್ಟದ ಹಣ್ಣನ್ನು ಖರೀದಿಸುವಂತೆ ಪ್ರಸಿದ್ಧ ಉಪ್ಪಿನಕಾಯಿ ಕಂಪನಿ ಜತೆ ಮಾತನಾಡಿದ್ದೇನೆ. ಸರ್ಕಾರವು ಹೂವು ಬೆಳೆಗಾರರಿಗೆ ಕೊಡುವಂತೆ ಹಣ್ಣು ಬೆಳೆಗಾರರಿಗೂ ಪರಿಹಾರಧನ ಕೊಡಲು ಮುಂದಾಗಬೇಕು ಎಂಬ ರೈತರ ಮನವಿ ಹಿನ್ನೆಲೆಯಲ್ಲಿ ಬೆಳೆ ಹಾನಿ ಅಂದಾಜು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಸಿಗುವ ಸಹಾಯ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

    | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts