More

    ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಿ

    ಚಿತ್ರದುರ್ಗ: ದಾವಣಗೆರೆಯಲ್ಲಿ ಡಿ. 23, 24ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದರು.

    ಅಧಿವೇಶನದ ಅಂಗವಾಗಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 108 ಉಪ ಪಂಗಡ ಹೊಂದಿರುವ ವೀರಶೈವ ಲಿಂಗಾಯತ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

    ಜನಗಣತಿ ಮಾಹಿತಿ ಸರಿ ಇಲ್ಲ. ಹೀಗಾಗಿ ಪುನರ್ ಪರಿಶೀಲಿಸಿ, ಸರಿಯಾದ ವರದಿ ಬಿಡುಗಡೆಗಾಗಿಯೂ ಇದೇ ವೇಳೆ ಸರ್ಕಾರಕ್ಕೆ ಆಗ್ರಹಿಸಲಾಗುವುದು. ದಾವಣಗೆರೆ ಶಾಸಕ, ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮುಂದಾಳತ್ವದಲ್ಲಿ ಅಧಿವೇಶನ ನಡೆಯಲಿದೆ ಎಂದು ಹೇಳಿದರು.

    ಅಧಿವೇಶನದಲ್ಲಿ ರಾಜ್ಯ ಅಷ್ಟೇ ಅಲ್ಲದೆ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಂದಲೂ ಸಮುದಾಯದ 2 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. 23ರಂದು ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, 24ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಕಾಂಗ್ರೆಸ್‌ನ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ವೀರಶೈವ ಲಿಂಗಾಯತ ಸಮುದಾಯದಲ್ಲೂ ಬಡವರಿದ್ದಾರೆ. ಸಮಾಜಕ್ಕೆ ಅನೇಕ ವರ್ಷಗಳಿಂದ ಅನ್ಯಾಯವಾಗಿದೆ. ಹೀಗಾಗಿ ಅಧಿವೇಶನದ ಮೂಲಕ ಸರ್ಕಾರದ ಗಮನ ಸೆಳೆಯಲು ಮಹಾಸಭಾ ಮುಂದಾಗಿದೆ. ಬಹು ಮುಖ್ಯವಾಗಿ ಸುತ್ತೂರು, ಸಿದ್ಧಗಂಗಾ, ಸಿರಿಗೆರೆ, ಶ್ರೀಶೈಲ ಪೀಠ ಸೇರಿ ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.

    ವಿವಿಧ ಗೋಷ್ಠಿ ಏರ್ಪಡಿಸಲಾಗಿದೆ. ದೂರದಿಂದ ಬರುವವರಿಗಾಗಿ ವಸತಿ ಸೌಕರ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ಅಧಿವೇಶನಕ್ಕಾಗಿ ಕೆಲವರು ವೈಯಕ್ತಿಕವಾಗಿ ಉಚಿತ ಬಸ್ ಸೌಲಭ್ಯಕ್ಕೆ ಮುಂದಾಗಿದ್ದಾರೆ. ಸಮಾಜವನ್ನು ಒಗ್ಗೂಡಿಸುವಲ್ಲೂ ಮಹಾಸಭಾ ಅವಿರತ ಶ್ರಮಿಸುತ್ತಿದೆ ಎಂದು ಹೇಳಿದರು.

    ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ವೀರೇಶ್, ಕಾರ್ಯದರ್ಶಿ ಮಹೇಶ್, ಪದಾಧಿಕಾರಿಗಳಾದ ಓಂಕಾರಪ್ಪ, ಪ್ರಸನ್ನಕುಮಾರ್, ಆನಂದ್, ರೀನಾ ವೀರಭದ್ರಪ್ಪ, ವೀಣಾ ಸುರೇಶ್, ಲಿಂಗರಾಜು, ದಿವಾಕರ, ಕೆ.ಸಿ.ರುದ್ರೇಶ್, ನಾಗರಾಜ್ ಸಂಗಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts