More

    ಲಾಠಿ ಬೀಸಿದ ಪೊಲೀಸರು!

    ಶಿರಹಟ್ಟಿ: ಮತ ಎಣಿಕೆ ಕೇಂದ್ರದ ಆವರಣದೊಳಗೆ ವಿಜಯೋತ್ಸವ ಆಚರಿಸಲು ಮುಂದಾದ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರಿಗೆ ಪೊಲೀಸರು ಲಾಠಿ ಬೀಸಿದ ಘಟನೆ ಪಟ್ಟಣದ ಎಫ್.ಎಂ. ಡಬಾಲಿ ಕಾಲೇಜ್ ಆವರಣದಲ್ಲಿ ಜರುಗಿತು.

    ಗ್ರಾಪಂ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟಪ್ಪಣೆ ವಿಧಿಸಿದೆ. ಆದರೂ, ಗೆಲುವು ಸಾಧಿಸಿದ ಅಭ್ಯರ್ಥಿಯನ್ನು ಮತ ಎಣಿಕೆ ಕೇಂದ್ರದ ಆವರಣದಲ್ಲಿಯೇ ಅವರ ಏಜೆಂಟರು ಹಾಗೂ ಬೆಂಬಲಿಗರು ಹೆಗಲ ಮೇಲೆ ಕೂರಿಸಿಕೊಂಡು ಕುಣಿದಾಡಲಾರಂಭಿಸಿದರು. ಇದನ್ನು ಕಂಡ ಪೊಲೀಸರು ಲಾಠಿ ಬೀಸಲಾರಂಭಿಸಿದರು. ಆಗ ಕೆಲಕಾಲ ಗೊಂದಲ ಉಂಟಾಗಿ ಎಲ್ಲರೂ ಮತ ಕೇಂದ್ರದಿಂದ ಹೊರಗೆ ಓಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ‘ಗೆದ್ದ ಅಭ್ಯರ್ಥಿ ಯಾರು ಎಂಬುದು ಗೊತ್ತಾಗಲಿಲ್ಲ. ಆದರೆ, ಆವರಣದೊಳಗೆ ವಿಜಯೋತ್ಸವ ಮಾಡುತ್ತಿದ್ದರಿಂದ ಪೊಲೀಸರು ಲಾಠಿ ಬೀಸಿದ್ದಾರೆ’ ಎಂದು ತಿಳಿಸಿದ್ದಾರೆ.

    ಲಾಟರಿಯಲ್ಲಿ ಕುಲಾಯಿಸಿದ ಅದೃಷ್ಟ

    ಶಿರಹಟ್ಟಿ: ಒಂದೇ ವಾರ್ಡ್​ನ ಇಬ್ಬರಿಗೆ ಸಮಬಲದ ಮತ ದೊರೆತಿದ್ದರಿಂದ, ಲಾಟರಿ ಎತ್ತುವ ಮೂಲಕ ವಿಜಯಶಾಲಿಯ ಹೆಸರು ಘೊಷಣೆ ಮಾಡಿದ ಘಟನೆ ಪಟ್ಟಣದ ಮತ ಎಣಿಕೆ ಕೇಂದ್ರ ಎಫ್.ಎಂ. ಡಬಾಲಿ ಕಾಲೇಜ್​ನಲ್ಲಿ ನಡೆಯಿತು. ತಾಲೂಕಿನ ಕೊಂಚಿಗೇರಿ ಗ್ರಾಪಂ ವ್ಯಾಪ್ತಿಯ ಕೊಕ್ಕರಗುಂದಿ ಗ್ರಾಮದ ವಾರ್ಡ್​ಗೆ ಸ್ಪರ್ಧಿಸಿದ್ದ ಶಾಂತಪ್ಪ ಕಟ್ಟಿಮನಿ ಮತ್ತು ಕೋಟೆಪ್ಪ ಹರಿಜನ ಅವರಿಗೆ ತಲಾ 314 ಮತ ಬಂದಿದ್ದವು. ಮತ್ತೊಮ್ಮೆ ಮತ ಎಣಿಕೆ ಮಾಡಬೇಕು ಎಂದು ಇಬ್ಬರೂ ಅಭ್ಯರ್ಥಿಗಳು ಆಗ್ರಹಿಸಿದ್ದರಿಂದ ಮರು ಎಣಿಕೆಯಲ್ಲೂ ಮತ್ತೆ ತಲಾ 314 ಮತಗಳು ಬಂದವು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರು ಇಬ್ಬರ ಹೆಸರು ಬರೆದು ಚೀಟಿ ಎತ್ತಿದರು. ಇದರಲ್ಲಿ ಶಾಂತಪ್ಪ ಕಟ್ಟಿಮನಿ ಗೆಲುವು ಸಾಧಿಸಿದರು.

    ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಪಂ ವ್ಯಾಪ್ತಿಯ ಬರದೂರ ಗ್ರಾಮದ 2ನೇ ವಾರ್ಡ್​ನಲ್ಲಿ ಶಾಂತವ್ವ ನಿಂಗಪ್ಪ ನಾಡಗೌಡ ಹಾಗೂ ರಾಜಬೀ ರಾಜಾಸಾಬ್ ಮಾಳೆಕೊಪ್ಪ ಅವರು ತಲಾ 216 ಮತಗಳನ್ನು ಪಡೆದಿದ್ದರು. ಇಬ್ಬರು ಸಮಾನ ಮತ ಪಡೆದುಕೊಂಡ ಹಿನ್ನೆಲೆ ತಹಸೀಲ್ದಾರ್ ಆಶಪ್ಪ ಪೂಜಾರಿ, ಇಒ ಸಂತೋಷ ಪಾಟೀಲ, ಚುನಾವಣೆ ನೋಡಲ್ ಅಧಿಕಾರಿ ವಿ. ರಮೇಶ ಮತ್ತು ಚುನಾವಣೆ ಅಧಿಕಾರಿ ಅವರು ಶಾಂತವ್ವ ಹಾಗೂ ರಾಜಬೀ ಅವರ ಹೆಸರಿನಲ್ಲಿ ಚೀಟಿ ಎತ್ತುವ ಪ್ರಕ್ರಿಯೆ ಮೂಲಕ ಒಬ್ಬರನ್ನು ಆಯ್ಕೆ ಮಾಡಲಾಯಿತು. ಚೀಟಿ ಎತ್ತುವ ಮೂಲಕ ಶಾಂತವ್ವ ನಿಂಗಪ್ಪ ನಾಡಗೌಡ ಅವರು ಆಯ್ಕೆಗೊಂಡರು.

    ಗದಗ ತಾಲೂಕಿನ ಅಂತೂರು-ಬೆಂತೂರು ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಬಸಪ್ಪ ಸಂದಿಮನಿ ಹಾಗೂ ಅಶೋಕ ಬಜಂತ್ರಿ (306)ಸಮಾನ ಮತಗಳನ್ನು ಪಡೆದಿದ್ದರು. ಚೀಟಿ ಎತ್ತುವ ಮೂಲಕ ಅಭ್ಯರ್ಥಿಯ ಗೆಲುವನ್ನು ಆಯ್ಕೆ ಮಾಡಲಾಯಿತು. ಅಶೋಕ ಭಜಂತ್ರಿ ಗೆಲುವು ಸಾಧಿಸಿದರು.

    81ರ ವೃದ್ಧನ ಗೆಲುವು

    ಡಂಬಳ ಗ್ರಾಮದಲ್ಲಿ 81 ವರ್ಷದ ವೃದ್ಧರೊಬ್ಬರು ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. 1ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಗಂಗಾಧರ ಸೊರಟೂರ ಇಳಿ ವಯಸ್ಸಲ್ಲೂ ಗೆದ್ದು ಸಾಧಿಸಿದ್ದಾರೆ. ಗಂಗಾಧರ ಅವರು ಹಲವು ವರ್ಷಗಳ ಹಿಂದೆ ಮೂರು ಬಾರಿ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಗೊಂಡು ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು.

    ನರಗುಂದ ತಾಲೂಕಿನ ಕೊಣ್ಣೂರ ಗ್ರಾಪಂ 2ನೇ ವಾರ್ಡ್ ಅಭ್ಯರ್ಥಿ 81 ವರ್ಷದ ಮಾಬೂಬಿ ಹುಸೇನಸಾಬ್ ಮುದಕವಿ 375 ಮತಗಳನ್ನು ಪಡೆದು 54 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಬಸವ್ವ ಬ್ಯಾಳಿ 321 ಮತ ಪಡೆದು ಪರಾಭವಗೊಂಡರು.

    ಹಿರೇಕೊಪ್ಪ ಗ್ರಾಮದಲ್ಲಿ ಹೊಡೆದಾಟ

    ಗಜೇಂದ್ರಗಡ: ಗ್ರಾಪಂ ಚುನಾವಣೆ ಫಲಿತಾಂಶದ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಉಂಟಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಎರಡೂ ಕಡೆಯವರು ಹೊಡೆದಾಡಿಕೊಂಡ ಘಟನೆ ತಾಲೂಕಿನ ಹಿರೇಕೊಪ್ಪದಲ್ಲಿ ನಡೆದಿದೆ. ಗಾಯಾಳುಗಳನ್ನು ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ ಪಿಎಸ್​ಐ ಗುರುಶಾಂತ ದಾಶ್ಯಾಳ ಪರಿಸ್ಥಿತಿ ಅವಲೋಕಿಸಿದರು.

    ಅತ್ತೆಗೆ ಸೋಲುಣಿಸಿದ ಸೊಸೆ !

    ಶಿರಹಟ್ಟಿ: ಸೊಸೆಯೇ ಅತ್ತೆಗೆ ಸೋಲುಣಿಸಿದ ಘಟನೆ ತಾಲೂಕಿನ ಕೋಗನೂರಿನಲ್ಲಿ ಜರುಗಿದೆ. ಗ್ರಾಪಂ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅತ್ತೆ-ಸೊಸೆಯ ಮಧ್ಯೆ ಏರ್ಪಟ್ಟಿದ್ದ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿತ್ತು. ಮತ ಎಣಿಕೆಯೂ ಸಾಕಷ್ಟು ತುರುಸಿನಿಂದ ಕೂಡಿತ್ತು. ಕೊನೆಘಳಿಗೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೊಸೆ ಪಾರವ್ವ ಬಸಪ್ಪ ಮೇಲಿನಮನಿ 5 ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಜಯದ ನಗೆ ಬೀರಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಅತ್ತೆ ಕಮಲವ್ವ ಫಕೀರಪ್ಪ ಮೇಲಿನಮನಿ ಪರಾಭವಗೊಂಡರು.

    ಒಂದೇ ಮತದ ಅಂತರದಲ್ಲಿ ಗೆದ್ದವರು

    ಗದಗ ತಾಲೂಕಿನ ಕಳಸಾಪುರ ಗ್ರಾಪಂನ 1ನೇ ವಾರ್ಡ್ ಅಭ್ಯರ್ಥಿ ರೇಣವ್ವ ಗಣೇಶ ಚವ್ಹಾಣ ಅವರು 171 ಮತ ಪಡೆದು ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಸಕ್ರವ್ವ ಪರಸಪ್ಪ ಲಮಾಣಿ 170 ಮತಗಳನ್ನು ಪಡೆದು ಪರಾಭವಗೊಂಡರು.

    ರೋಣ ತಾಲೂಕಿನ ಹಿರೇಹಾಳ ಗ್ರಾಪಂ ವ್ಯಾಪ್ತಿಯ ಹಿರೇಹಾಳ ಗ್ರಾಮದ 2ನೇ ವಾರ್ಡ್ ಎಸ್.ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ನಿಂಗವ್ವ ಬೇವಿನಗಿಡದ ಅವರು 108 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಕಾವೇರಿ ಬೇವಿನಗಿಡದ (107) ಅವರನ್ನು ಕೇವಲ ಒಂದು ಮತದಿಂದ ಸೋಲಿಸಿದರು.

    ನರಗುಂದ ತಾಲೂಕಿನ ಬನಹಟ್ಟಿ ಗ್ರಾಪಂ 1ನೇ ವಾರ್ಡ್ ಅಭ್ಯರ್ಥಿ ರುದ್ರಪ್ಪ ಮಲ್ಲಪ್ಪ ಬಂಡಿ ಅವರು 377ಮತಗಳನ್ನು ಪಡೆದು ಕೇವಲ ಬಂದು ಮತದ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಅವರ ಪ್ರತಿಸ್ಪರ್ಧಿ ಗೂಳಪ್ಪ ಹೊನ್ನಪ್ಪ ಛಲವಾದಿ ಅವರಿಗೆ 376 ಮತ ಬಿದ್ದಿವೆ.

    ಶಿಗ್ಲಿ ಬಸ್ಯಾ ಪತ್ನಿಗೆ 2 ಮತಗಳ ಅಂತರದ ಗೆಲುವು

    ಲಕ್ಷೆ್ಮೕಶ್ವರ: ನ್ಯಾಯಾಧೀಶರ ಮನೆ ಸೇರಿ ರಾಜ್ಯಾದ್ಯಂತ ಅನೇಕ ಕಳ್ಳತನ ಪ್ರಕರಣಗಳಡಿ ಜೈಲು ವಾಸ ಅನುಭವಿಸಿ ತನ್ನ ಪರವಾಗಿ ತಾನೇ ನ್ಯಾಯಾಲಯದಲ್ಲಿ ವಾದ ಮಂಡಿಸುವ ಮೂಲಕ ಗೆಲುವು ಸಾಧಿಸಿ ರಾಜ್ಯದ ಗಮನ ಸೆಳೆದ ಶಿಗ್ಲಿ ಬಸ್ಯಾ (ಬಸವರಾಜ ಗಡ್ಡಿ) ಪತ್ನಿ ಗುಲ್ಜಾರಾಬಾನು ಶೇಖ್ ಗ್ರಾಪಂ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.

    ಶಿಗ್ಲಿ ಗ್ರಾಪಂನ 1ನೇ ವಾರ್ಡಿನಿಂದ ‘ಅ’ ವರ್ಗದ ಮೀಸಲಾತಿಯಡಿ ಗುಲ್ಜಾರಾಬಾನು ಕಣಕ್ಕಿಳಿದಿದ್ದರು. ಇವರು ಪ್ರತಿಸ್ಪರ್ಧಿ ವಿರುದ್ಧ 2 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

    ತನ್ನ ಬೇಡಿಕೆಗಳಿಗಾಗಿ ಕೊರಳಿಗೆ ಪಟಾಕಿ ಸರ ಹಾಕಿಕೊಂಡು ಮೊಬೈಲ್ ಟಾವರ್, ಮರ ಏರಿ ಪ್ರತಿಭಟನೆ ಮಾಡುವ ಮತ್ತು ಆತ್ಮಹತ್ಯೆ ಬೆದರಿಕೆ ಹಾಕುವ ಮೂಲಕ ಹೆಸರಾಗಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts