More

    ಲಾಠಿ ಏಟು ಕೊಟ್ಟು ಮರುಗುತ್ತಿದೆ ಖಾಕಿ

    ಬೆಳಗಾವಿ: ‘ರಸ್ತೆಯಲ್ಲಿ ಮೈಕ್ ಕಟ್ಟಿ ಕೂಗಿ ಕೂಗಿ ಹೇಳಿಸಿದ್ದಾಗಿದೆ. ಗಲ್ಲಿಗಳಲ್ಲಿ ಕ್ಯಾಸೆಟ್ ಹಾಕಿ ಹಾಡಿಸಿದ್ದೂ ಆಯ್ತು. ಪ್ರಮುಖ ಸರ್ಕಲ್‌ಗಳಲ್ಲಿ ಗುಲಾಬಿ ಕೊಟ್ಟು ಮನವಿ ಮಾಡಿದ್ದಾಯ್ತು. ಮಾನವ ಸರಪಳಿ, ಮೌನ ಮೆರವಣಿಗೆ, ಪ್ಲೇಕಾರ್ಡ್ ಪ್ರದರ್ಶಿಸಿ ಕೈ ಮುಗಿದಿದ್ದಾಯ್ತು. ಇನ್ನೇನು ಬಾಕಿ ಇದೆ ಹೇಳ್ರೀ…? ಸಮಾಧಾನದಿಂದ ಮಾಡ್ತೀವಿ..’

    ‘ಹೊರ ಜಗತ್ತಿಗೆ ಜನರಿಗೆ ಹೊಡೆದು ಮುರಿದ ಲಾಠಿ ಕಾಣ್ತಿವೆಯೇ ಹೊರತು, ತಂದೆ-ತಾಯಿ, ಮಡದಿ-ಮಕ್ಕಳನ್ನು ಬಿಟ್ಟು ಸೋಂಕಿಗೆ ಎದೆಯೊಡ್ಡಿ ಜನರ ಜೀವರಕ್ಷಣೆಗಾಗಿ ನಾವು ಅನುಭವಿಸುತ್ತಿರುವ ಯಾತನೆಗೆ ಮರುಗಿದ ಮನಸ್ಸುಗಳೇ ಕಾಣುತ್ತಿಲ್ಲ…’
    ಇದು, ಕರೊನಾ ಸೋಂಕು ಹರಡುವಿಕೆ ತಡೆಯಲು ಲಾಕ್‌ಡೌನ್ ನಿಯಮ ಪಾಲನೆಯ ಕರ್ತವ್ಯ ನಿರ್ವಹಿಸುತ್ತಿರುವ ಖಾಕಿ ಪಡೆ ಅಳಲು ತೋಡಿಕೊಂಡ ಪರಿ.

    ನಮಗೇನು ಹುಚ್ಚೇ?: ‘ಬುದ್ಧಿ ಜೀವಿಗಳು, ವಿರೋಧ ಪಕ್ಷ, ಮಾಧ್ಯಮ, ಕೋರ್ಟ್ ಕಟ್ಟಲೆಗಳು, ನೂರೆಂಟು ಆಯೋಗ, ನಕಲಿ ಸಂಘಟನೆಗಳು ಹೀಗೆ ಎಲ್ಲರ ಕೈಯಲ್ಲಿ ತೊಂದರೆ ಅನುಭವಿಸಿ, ಸಸ್ಪೆಂಡ್, ಟ್ರಾನ್ಸ್‌ಫರ್ ಹಾಗೂ ಸಂಬಳ ಖಡಿತ ಹೀಗೆ ಎಲ್ಲವೂ ಮಾಡಿಸಿಕೊಂಡು ಜನರಿಗೆ ಸುಖಾಸುಮ್ಮನೆ ಹೊಡೆಯೋಕೆ ನಮಗೇನು ಹುಚ್ಚೇ? ದಂಡ, ಶಿಕ್ಷೆ ಎನ್ನುವುದು ಈ ಸಮಾಜಕ್ಕೆ ಸುಮ್ಮನೆ ಬಂದ ಬಳುವಳಿಗಳೇ? ನಮ್ಮ ತಪ್ಪಿದ್ದರೆ ನಾಗರಿಕ ಸೇವಾ ಸಿದ್ಧಾಂತ ಬದಲಿಸಿ. ಕಾನೂನಿನ ಮಾತು ಕೇಳುವ ಸಭ್ಯ ಸಮಾಜ ಸೃಷ್ಟಿಸಿ’ ಎಂದು ನೊಂದ ಪೊಲೀಸ್ ಪೇದೆಗಳು ತಮ್ಮನ್ನು ಹೀಗಳೆಯುವವರಿಗೆ ಹೀಗೊಂದು ಸಲಹೆ ನೀಡಿದ್ದಾರೆ. ಅಲ್ಲದೆ, ಈ ಮೂಲಕ ತಮ್ಮ ಅಸಹಾಯಕತೆ ಹಾಗೂ ಲಾಠಿ ಏಟಿನ ಅನಿವಾರ್ಯತೆ ಸಮರ್ಥಿಸಿಕೊಂಡಿದ್ದಾರೆ.

    ಆರಕ್ಷಕರ ಅಳಲೇನು?: ಸರ್ಕಾರ, ಮೇಲಧಿಕಾರಿಗಳ ಆದೇಶ ಪಾಲನೆ ಮಾಡುವ ಪೊಲೀಸರಿಗೆ ಯಾರಿಗೆ ಹೊಡೆಯುತ್ತಿದ್ದೇವೆ ಅಂತ ಗೊತ್ತಿಲ್ಲದಿದ್ದರೂ, ಯಾಕೆ ಹೊಡೆಯುತ್ತಿದ್ದೇವೆ ಎಂಬ ಅರಿವಿದೆ. ಯಾವ ಸಫಲತೆಗಾಗಿ ಎಂಬುದು ಪೊಲೀಸರಿಗಷ್ಟೇ ಅಲ್ಲ, ಸಭ್ಯ ನಾಗರಿಕರಿಗೂ ಗೊತ್ತಿದೆ. ಅವರ ಬೆಂಬಲವೂ ಇದೆ. ಆದರೆ, ಟೀಕಿಸಲೆಂದೇ ವಿಷಯ ಹುಡುಕುವರು ಮಾತ್ರ ಗೊಣಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹೆಸರು ಹೇಳಲಿಚ್ಛಿಸದ ಬೆಳಗಾವಿಯ ಓರ್ವ ಪೊಲೀಸ್ ಪೇದೆ.

    ನಮಗೂ ಮಗುವಿನ ಮನಸ್ಸಿದೆ: ಇಲ್ಲಿ ನಾವು ಲಾಠಿ ಬೀಸುವ ಹಾಗೆಯೇ ಮತ್ತೊಂದೆಡೆ ನಮ್ಮದೇ ಸಹೋದ್ಯೋಗಿಗಳು ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮೇಲೂ ಲಾಠಿ ಬೀಸುತ್ತಾರೆ. ಆದರೆ, ನಮ್ಮವರಿಗೆ ಬಿದ್ದ ಲಾಠಿ ಏಟಿಗೆ ನಮಗೆ ಪಶ್ಚಾತ್ತಾಪ ಇಲ್ಲ. ಈ ಅನಿವಾರ್ಯತೆಯ ಸೃಷ್ಟಿಸಿಕೊಳ್ಳುತ್ತಿರುವ, ಜಾಗೃತಿಗೆ ಕಿವಿಗೊಡದವರ ಬಗ್ಗೆ ಮಮ್ಮಲ ಮರುಗುವ ಮಗುವಿನ ಮನಸ್ಸು ನಮಗೂ ಇದೆ ಎಂದು ಪೇದೆಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

    ಅನಿವಾರ್ಯತೆಗೆ ಬಳಸಿದ ಅಸ್ತ್ರ

    ನಾವು ಯಾರೂ ಅನಗತ್ಯವಾಗಿ ಲಾಠಿ ಬೀಸುತ್ತಿಲ್ಲ. ಯಾಕಾಗಿ ಈ ಅಸ್ತ್ರ ಎಂದು ಒಮ್ಮೆ ನಿಮಗೆ ನೀವೇ ಸಮಾಧಾನದಿಂದ ಕೇಳಿಕೊಳ್ಳಿ. ಕಾನೂನಿನ ಪಾಠಕ್ಕೆ ಬಗ್ಗುವ ಮನಸ್ಥಿತಿ ಇದ್ದರೆ ಕೋರ್ಟ್‌ನಲ್ಲಿ ರಾಶಿಗಟ್ಟಲೆ ಕಡತಗಳಿರುತ್ತಿರಲಿಲ್ಲ. ಖುಲಾಸೆಗೊಂಡವರಲ್ಲಿ ಖುಷಿ ಇರುತ್ತಿರಲಿಲ್ಲ. ಎಲ್ಲ ಕಡೆಯ ಲಾಠಿ ಚಾರ್ಜ್ ಒಪ್ಪವಂತದ್ದೂ ಅಲ್ಲ. ಆದರೆ, ಆ ಸಂದರ್ಭವನ್ನು ಒಪ್ಪದೇ ಬೇರೆ ದಾರಿ ಇಲ್ಲ. ಅರ್ಥ ಮಾಡಿಕೊಳ್ಳಿ. ನಾವು ಆರಕ್ಷಕರು. ನಿಮ್ಮನ್ನು ರಕ್ಷಿಸುವ ಹೆಮ್ಮೆಯ ‘ಕರ್ನಾಟಕ ಪೊಲೀಸ್’. ಹೀಗೆ ಪೊಲೀಸ್ ಪೇದೆಗಳು ಸಾಮಾಜಿಕ ಜಾಲತಾಣಗಳ ಮೂಲಕ ‘ಲಾಠಿ ಏಟಿನ ವಿಚಾರ’ವಾಗಿ ಮಾಡಿಕೊಂಡ ವಿನಂತಿ ಸದ್ಯ ವೈರಲ್ ಆಗುತ್ತಿವೆ.

    ಪೊಲೀಸರಿಗೂ ಕುಟುಂಬ ಇದೆ. ಎಲ್ಲರೂ ಕೆಲಸ ಬಿಟ್ಟು ಮನೆಯಲ್ಲಿ ಸುರಕ್ಷಿತವಾಗಿರುವಾಗ ಪೊಲೀಸರು ಏಕೆ ಹೀಗೆ ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಸಾರ್ವಜನಿಕರು ಅರ್ಥೈಸಿಕೊಳ್ಳಬೇಕು. ಲಾಠಿ ಬೀಸುವ ಅನಿವಾರ್ಯತೆ ಸೃಷ್ಟಿಸಿಕೊಳ್ಳದಂತೆ ಜನರೂ ಜಾಗೃತಿ ವಹಿಸಬೇಕು.
    | ವಿಕ್ರಮ ಅಮ್ಟೆ. ಡಿಸಿಪಿ, ಬೆಳಗಾವಿ

    | ರವಿ ಗೋಸಾವಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts