More

    ಲಾಕ್​ಡೌನ್ ಪ್ರಹಾರ… ಕೈಗಾರಿಕೆ ತತ್ತರ..

    ರಾಣೆಬೆನ್ನೂರ: ಲಾಕ್​ಡೌನ್ ಹಿನ್ನೆಲೆಯಲ್ಲಿ ರಾಣೆಬೆನ್ನೂರ ಸೇರಿ ಜಿಲ್ಲೆಯಲ್ಲಿನ ಕೈಗಾರಿಕಾ ಉದ್ಯಮ ಸಂಪೂರ್ಣ ತತ್ತರಿಸಿದೆ. ಶೇ. 50ರಷ್ಟು ಉದ್ಯಮಗಳು ಮಾತ್ರ ಆರಂಭವಾಗಿದ್ದು, ಸಾವಿರಾರು ನೌಕರರು ಹಾಗೂ ಕಾರ್ವಿುಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

    ಲಿಮಿಟೆಡ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಹಾಗೂ ಕಾರ್ವಿುಕರಿಗೆ ಫ್ಯಾಕ್ಟರಿ ಬಂದ್ ಇದ್ದರೂ ತಿಂಗಳಿಗೆ ಸರಿಯಾಗಿ ಸಂಬಳ ನೀಡಲಾಗಿದೆ. ಅಲ್ಲದೆ, ಬಹುತೇಕವಾಗಿ ಉದ್ಯೋಗದ ಭರವಸೆಯಿರುವ ಕಾರಣ ಚಿಂತೆಯಿಲ್ಲ. ಆದರೆ, ಚಿಕ್ಕಪುಟ್ಟ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಹಾಗೂ ಸಿಬ್ಬಂದಿಗೆ ಲಾಕ್​ಡೌನ್ ಅವಧಿಯಲ್ಲಿ ಸಂಬಳ ನೀಡಿಲ್ಲ. ಮರಳಿ ಉದ್ಯೋಗ ದೊರಕುವ ಭರವಸೆಯೂ ಸಿಕ್ಕಿಲ್ಲ. ಹೀಗಾಗಿ, ಕಾರ್ಖಾನೆ ನಂಬಿ ಬದುಕು ಕಟ್ಟಿಕೊಂಡಿದ್ದ ಕಾರ್ವಿುಕರು ಇದೀಗ ತೀವ್ರ ತೊಂದರೆಯಲ್ಲಿದ್ದಾರೆ.

    ಜಿಲ್ಲೆಯಲ್ಲಿ ಸಿಂಥೆಟಿಕ್, ಗ್ರಾಸಿಂ ಪಾಲಿಫೈಬರ್ ಫ್ಯಾಕ್ಟರಿ, ರಾಮ್ಕೋ, ಅಂಬುಜಾ, ವೆಂಕೋಬಾ ಚಿಕನ್ ಫ್ಯಾಕ್ಟರಿ, ಹೆಂಚು ತಯಾರಿಕೆ ಘಟಕ ಹಾಗೂ ಬೀಜೋತ್ಪಾದನೆ ಕಂಪನಿಗಳು, ಅಕ್ಕಿ ಮಿಲ್, ಕಾಟನ್ ಜಿನ್ನಿಂಗ್, ಗಾರ್ವೆಂಟ್, ಸಕ್ಕರೆ, ಸಿಮೆಂಟ್ ಬ್ರಿಕ್ಸ್, ಪೇವರ್ಸ್, ಸ್ಟೋನ್ ಕ್ರಷರ್, ಪ್ಲಾಸ್ಟಿಕ್, ಮೆಣಸಿನಕಾಯಿ ಪೌಡರ್ ತಯಾರಿಸುವ ಕಾರ್ಖಾನೆ ಸೇರಿ 20ಕ್ಕೂ ಅಧಿಕ ಬೃಹತ್ ಕೈಗಾರಿಕಾ ಘಟಕ ಹಾಗೂ 5 ಸಾವಿರಕ್ಕೂ ಅಧಿಕ ಚಿಕ್ಕಪುಟ್ಟ ಕೈಗಾರಿಕಾ ಘಟಕಗಳಿವೆ.

    ರಾಜ್ಯ ಸರ್ಕಾರ 4.0 ಲಾಕ್​ಡೌನ್​ನಲ್ಲಿ ಸಣ್ಣಪುಟ್ಟ ಕೈಗಾರಿಕೆ ನಡೆಸಲು ಸಡಿಲಿಕೆ ನೀಡಿದೆ. ಆದರೆ, ಕೆಲ ಬೇರೆ ಬೇರೆ ರಾಜ್ಯಗಳಿಂದ ಕಚ್ಚಾ ವಸ್ತು ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಸಾರಿಗೆ ವೆಚ್ಚವೂ ಮೊದಲಿಗಿಂತ ಅಧಿಕವಾಗಿದೆ. ತಯಾರಿಸಿದ ವಸ್ತುಗಳನ್ನು ಬೇರೆಡೆ ಮಾರಾಟ ಮಾಡಲಾಗದೇ ಬಹುತೇಕರು ಉದ್ಯಮ ಆರಂಭಿಸಿಲ್ಲ. ಕೆಲ ಘಟಕಗಳು ಆರಂಭಗೊಂಡರೂ ತುರ್ತು ಅಗತ್ಯವಿದ್ದಷ್ಟು ಕಾರ್ವಿುಕರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಂಡಿದ್ದಾರೆ.

    ಕೆಲಸ ಕಳೆದುಕೊಳ್ಳುವ ಭೀತಿ: ಜಿಲ್ಲೆಯಲ್ಲಿ ವಿವಿಧ ಕಾರ್ಖಾನೆಗಳಲ್ಲಿ 30 ಸಾವಿರಕ್ಕೂ ಅಧಿಕ ಕಾರ್ವಿುಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಆರಂಭವಾಗಿರುವ ಕಾರ್ಖಾನೆಗಳಲ್ಲಿ ಅಗತ್ಯಕ್ಕೆ ಬೇಕಾದಷ್ಟು ಜನರು ಮಾತ್ರ ಕೆಲಸ ಮಾಡುತ್ತಿದ್ದು, ಮುಂದಿನ ದಿನದಲ್ಲಿ ಶೇ. 50ರಷ್ಟು ಜನರಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಆದರೆ, ಇನ್ನುಳಿದವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಲಾಕ್​ಡೌನ್ ನಷ್ಟದಿಂದ ಒಂದು ವೇಳೆ ಕೈಗಾರಿಕಾ ಘಟಕಗಳು ಸಂಪೂರ್ಣ ಬಂದ್ ಆದರೆ ಹಲವಾರು ಕುಟುಂಬಗಳು ಬೀದಿಪಾಲಾಗುವ ಆತಂಕ ಎದುರಾಗಿದೆ.

    ಸೌಲಭ್ಯ ಕಲ್ಪಿಸಬೇಕಿದೆ ಸರ್ಕಾರ: ಕೈಗಾರಿಕೆಗಳಿಗೆ ಸರ್ಕಾರ ಆರ್ಥಿಕ ಪರಿಹಾರ ಪ್ಯಾಕೇಜ್ ಘೊಷಿಸಿದೆ. ಆದರೆ, ಅದರ ಸೌಲಭ್ಯ ಇನ್ನೂ ಮಾಲೀಕರಿಗೆ ಸಿಕ್ಕಿಲ್ಲ. ಕಟ್ಟಡ ಬಾಡಿಗೆ, ವಿದ್ಯುತ್ ಶುಲ್ಕ, ಕಾರ್ವಿುಕರ ವೇತನ ಎಲ್ಲವನ್ನೂ ನಿಭಾಯಿಸಬೇಕಿದೆ. ಲಾಕ್​ಡೌನ್ ಅವಧಿಯ ಸಾಲದ ಬಡ್ಡಿಯ ವಿನಾಯಿತಿ ನೀಡಬೇಕು. ಮುಖ್ಯವಾಗಿ ರಫ್ತು-ಆಮದಿಗೆ ಅವಕಾಶ ನೀಡಬೇಕು. ಅಂದಾಗ ಉದ್ಯಮ ಕೊಂಚ ಚೇತರಿಕೆ ಕಾಣಲಿದೆ ಎಂಬುದು ಉದ್ಯಮಿಗಳ ಅಭಿಪ್ರಾಯವಾಗಿದೆ.

    ಕೋಟ್ಯಂತರ ರೂ. ನಷ್ಟ

    ಜಿಲ್ಲೆಯ ಕೈಗಾರಿಕಾ ಉದ್ಯಮ ಕಚ್ಚಾವಸ್ತು ಆಮದು ಹಾಗೂ ಸಿದ್ಧವಸ್ತು ರಫ್ತಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು, ಕೇರಳ ರಾಜ್ಯಗಳನ್ನು ಹೆಚ್ಚು ಅವಲಂಬಿಸಿದೆ. ಆದರೆ, ಈ ರಾಜ್ಯಗಳಲ್ಲಿಯೇ ಇದೀಗ ಕರೊನಾ ಪ್ರಕರಣ ಹೆಚ್ಚಿರುವ ಕಾರಣ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದೆ. ಹೀಗಾಗಿ, ಜಿಲ್ಲೆಯ ಕೈಗಾರಿಕಾ ಉದ್ಯಮ ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ.

    ಕುಮಾರಪಟ್ಟಣದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್​ಡೌನ್​ನಿಂದಾಗಿ ಕಂಪನಿಯವರು ಕೆಲಸ ನಿಲ್ಲಿಸಿದ್ದಾರೆ. ಈವರೆಗೂ ನಯಾಪೈಸೆ ಸಂಬಳ ಕೊಟ್ಟಿಲ್ಲ. ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಏನೂ ಹೇಳುತ್ತಿಲ್ಲ. ಹೀಗಾಗಿ, ಜೀವನವೇ ಅತಂತ್ರವಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ, ಈಗಿರುವ ಸಿಬ್ಬಂದಿಗೆ ಮರಳಿ ಕೆಲಸ ಕೊಡಿಸುವ ವ್ಯವಸ್ಥೆ ಮಾಡಬೇಕು.
    | ಫಕೀರೇಶ ಎಂ., ಖಾಸಗಿ ಕಂಪನಿಯೊಂದರ ನೌಕರ

    ಹೊರ ರಾಜ್ಯದ ಕಚ್ಚಾವಸ್ತು ಹಾಗೂ ಕಾರ್ವಿುಕರನ್ನು ಅವಲಂಬಿಸಿದ ಕೈಗಾರಿಕೆಗಳು ಇನ್ನೂ ಆರಂಭಗೊಂಡಿಲ್ಲ. ನಮ್ಮ ರಾಜ್ಯದ ಹಾಗೂ ಸ್ಥಳೀಯ ಕಾರ್ವಿುಕರನ್ನು ಹೊಂದಿದ ಕೈಗಾರಿಕೆ ಘಟಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಹಾವೇರಿಯ ಈಗಿನ ಕೆಎಸ್​ಎಸ್​ಐಡಿಸಿ ಕೈಗಾರಿಕೆ ಪ್ರದೇಶ ಕೇವಲ 4 ಎಕರೆ ವಿಸ್ತೀರ್ಣ ಹೊಂದಿದೆ. ಅದರಲ್ಲಿಯೇ 12 ಕೈಗಾರಿಕೆ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದು ತುಂಬಾ ಚಿಕ್ಕದಾಗಿದೆ. ಹೀಗಾಗಿ ಕೈಗಾರಿಕೆ ಪ್ರದೇಶ ವಿಶಾಲವಾಗಿ ಬೆಳೆಯುತ್ತಿಲ್ಲ. ಆದ್ದರಿಂದ 100 ಎಕರೆಯಷ್ಟು ಜಾಗ ನೀಡುವ ಕುರಿತು ಈಗಾಗಲೇ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಲಾಕ್​ಡೌನ್​ನಿಂದ ಘೊಷಿಸಿದ ಪ್ಯಾಕೇಜ್ ಹಾಗೂ ಇನ್ನುಳಿದ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಬೇಕು.
    | ರಮೇಶ ಬಳ್ಳಾರಿ, ಕಾರ್ಯದರ್ಶಿ ಹಾವೇರಿ ಜಿಲ್ಲಾ ಕೈಗಾರಿಕೆ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts