More

    ಲಾಕ್​ಡೌನ್ ನಂತರವೂ ಜಿಲ್ಲೆಯಲ್ಲಿ ಕಟ್ಟುನಿಟ್ಟು

    ಕಾರವಾರ: ಏ. 14ರ ನಂತರ ಲಾಕ್​ಡೌನ್ ಮುಂದುವರಿಸುವ ಬಗ್ಗೆ ಸರ್ಕಾರ ತೀರ್ವನಿಸಲಿದೆ. ರಾಜ್ಯದಲ್ಲಿ ಯಾವುದೇ ನಿರ್ಧಾರ ಕೈಗೊಂಡರೂ ಜಿಲ್ಲೆಯಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಕೆಲದಿನ ಕಟ್ಟುನಿಟ್ಟಿನ ನಿಯಮಗಳನ್ನು ಮುಂದುವರಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು.

    ರಾಜ್ಯದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ ಸಹಯೋಗದಲ್ಲಿ ಕಾರವಾರದ ಹಬ್ಬುವಾಡದಲ್ಲಿರುವ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಬೆಳಗ್ಗೆ 9 ರಿಂದ ಪ್ರಾರಂಭವಾದ ಫೋನ್ ಇನ್​ಗೆ ಬಿಡುವಿಲ್ಲದಂತೆ ಸಾಕಷ್ಟು ಕರೆಗಳು ಬಂದವು. ಕಾರ್ಯಕ್ರಮ 10 ಗಂಟೆಗೆ ಮುಗಿಯಬೇಕಿದ್ದರೂ ನಿರಂತರವಾಗಿ ಕರೆಗಳು ಬಂದಿದ್ದರಿಂದ 11 ಗಂಟೆಯವರೆಗೂ ಮುಂದುವರಿಸಲಾಯಿತು. ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಗೆ ಸೀಮಿತವಾಗಿದ್ದ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದಲೂ ಕರೆ ಬಂದಿದ್ದು ವಿಶೇಷವಾಗಿತ್ತು. ಜಿಲ್ಲಾಧಿಕಾರಿ ಹರೀಶ ಕುಮಾರ ಕೆ. ಅಷ್ಟೇ ಸಮಾಧಾನದಿಂದ ಕರೆಗಳಿಗೆ ವಿವರವಾಗಿ ಉತ್ತರ ನೀಡಿದರು. ಕೆಲವರಿಗೆ ಕೊಂಚ ಗದರಿ ಬುದ್ಧಿ ಹೇಳಿ ಎಚ್ಚರಿಕೆ ನೀಡಿದರು. ಹಲವರಿಂದ ಮಾಹಿತಿ ಪಡೆದುಕೊಂಡರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು. ಇದೇ ವೇಳೆ ಕರೆ ಮಾಡಿದ್ದ ನಿವೃತ್ತಿ ಅಧಿಕಾರಿಗೆ, ‘ನೀವು ಸೇವೆಯಲ್ಲಿ ಇದ್ದಾಗ ಜನರ ಪರವಾಗಿ ಕೆಲಸ ಮಾಡಿದ್ದರೆ, ಈಗ ನಿಮಗೆ ಅವರು ಒದಗಿ ಬರುತ್ತಿದ್ದರು’ ಎಂದು ವ್ಯಂಗ್ಯವಾಗಿ ಹಾರಿಸಿದರು.

    ಉತ್ತರ ಕನ್ನಡದಲ್ಲಿ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆತಂಕ ಬೇಡ. ಹಾಗೆಂದು ಜನ ಲಾಕ್​ಡೌನ್ ನಿಯಮ ಮುರಿದು ಬೇಕಾಬಿಟ್ಟಿ ಓಡಾಟ ಮಾಡಬಾರದು. ಜಿಲ್ಲೆಯ ಭಟ್ಕಳದಲ್ಲಿ ಮಾತ್ರ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯ ಇತರ ತಾಲೂಕುಗಳಲ್ಲಿ ನಿಯಮ ಸಡಿಲ ಮಾಡಿ ಎಂದು ಹೇಳಬಹುದು. ಆದರೆ, ಇಡೀ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಸಡಿಲ ಬಿಟ್ಟರೆ, ಹೊರಗಿನ ಜನ ಇಲ್ಲಿಗೆ ಬಂದು ಅಪಾಯ ಸಂಭವಿಸಬಹುದು ಎಂದರು.

    ಕೃಷಿಕರಿಗೆ ಪೆಟ್ರೋಲ್ ವಿತರಣೆ: ಮುಂಡಗೋಡಿನ ಕುಮಾರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಂದಿನ ದಿನದಲ್ಲಿ ನಾವು ಹಂತ ಹಂತವಾಗಿ ಸಣ್ಣ ಉದ್ಯಮ, ಮೀನುಗಾರಿಕೆಗೆ ಅವಕಾಶ ನೀಡಲಿದ್ದೇವೆ. ಕೃಷಿಕರಿಗೆ ಹೊಲಕ್ಕೆ ತೆರಳಲು ನಿಯಂತ್ರಿತವಾಗಿ ಪೆಟ್ರೋಲ್ ವಿತರಣೆಗೆ ನಿರ್ಧರಿಸಿದ್ದು, ಆಯಾ ತಹಸೀಲ್ದಾರರಿಗೆ ಜವಾಬ್ದಾರಿ ನೀಡಲಾಗಿದೆ’ ಎಂದು ವಿವರಿಸಿದರು.

    ‘ವಿಜಯವಾಣಿ’ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಅವರು ಜಿಲ್ಲಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಸ್ವಾಗತಿಸಿದರು. ‘ವಿಜಯವಾಣಿ’ ಹಿರಿಯ ವರದಿಗಾರ ಸುಭಾಸ ಧೂಪದಹೊಂಡ ವಂದಿಸಿದರು. ಉಪಸಂಪಾದಕ ವಿನಯ ಹೆಗಡೆ, ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ, ಕ್ಯಾಮರಾಮನ್ ಕಿಶನ್ ಗುರವ, ಸಾಯಿದೀಪ ಕಾಂಪ್ಲೆಕ್ಸ್​ನ ಧನಂಜಯ ಕದಂ ಸಹಕರಿಸಿದರು.

    ಇ-ಪಾಸ್ ವ್ಯವಸ್ಥೆ ಜಾರಿ
    ತುರ್ತು ಆರೋಗ್ಯ ಸಮಸ್ಯೆ ಇದ್ದವರಿಗೆ ಹೊರ ಜಿಲ್ಲೆಗಳ ಆಸ್ಪತ್ರೆಗಳಿಗೆ ಹೋಗಲು, ಪಾಸ್​ಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲ. ಆಯಾ ತಹಸೀಲ್ದಾರ್ ಹಂತದಲ್ಲೇ ಪಾಸ್ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪಾಸ್​ಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪದ ಮೇರೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್​ಐಸಿ) ಜಿಲ್ಲಾ ಕಚೇರಿಯಿಂದ ವೆಬ್ ಸೈಟ್ ಒಂದನ್ನು ರೂಪಿಸಲಾಗಿದ್ದು, ಈ ಮೂಲಕ ಇ- ಪಾಸ್ ಗಳನ್ನು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳ ಪೂರೈಕೆದಾರರಿಗೆ ತಾಲೂಕು ಮಟ್ಟದಲ್ಲೇ ತಹಸೀಲ್ದಾರರು ಪಾಸ್ ಗಳನ್ನು ವಿತರಣೆ ಮಾಡುತ್ತಿದ್ದರು. ತುರ್ತಾಗಿ ಜಿಲ್ಲೆಯಿಂದ ತೆರಳಬೇಕಾಗಿರುವವರಿಗೆ ಜಿಲ್ಲಾಧಿಕಾರಿ ಅವರ ಮೂಲಕ ಪಾಸ್ ಪಡೆಯ ಬೇಕಾಗಿತ್ತು. ಇದರಿಂದಾಗಿ ವಿತರಣೆಯಲ್ಲಿ ವಿಳಂಬವಾಗುತ್ತಿತ್ತು. ಬೇಕಾಬಿಟ್ಟಿಯಾಗಿ ಹಲವರು ಪಾಸ್ ಪಡೆದಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದ ಕಾರಣ ಇದೀಗ ಪಾಸ್ ವಿತರಣೆಯನ್ನು ಸಂಪೂರ್ಣವಾಗಿ ಆನ್ಲೈನ್ ಮಾಡಲಾಗಿದೆ. ತುರ್ತಾಗಿ ಪಾಸ್ ನ ಅಗತ್ಯ ಇದ್ದವರು ಆಯಾ ತಾಲೂಕಿನ ತಹಸೀಲ್ದಾರರಿಗೆ ತಮ್ಮ ಭಾವಚಿತ್ರವುಳ್ಳ ಯಾವುದಾದರೂ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಆನ್​ಲೈನ್​ನಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಲಿದ್ದಾರೆ. ಈ ಮಾಹಿತಿ ಕ್ಷಣಮಾತ್ರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ಬರಲಿದ್ದು, ಅವರು ಅರ್ಹರಿಗೆ ಇ- ಪಾಸ್​ಗೆ ಅನುಮತಿ ನೀಡಲಿದ್ದಾರೆ. ಬಳಿಕ ತಹಸೀಲ್ದಾರರು ಇ- ಪಾಸ್ ಅನ್ನು ತಮ್ಮ ಕಚೇರಿಯಲ್ಲೇ ಮುದ್ರಿಸಿ, ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

    16 ಲಕ್ಷ ಜನರ ಸಹಕಾರ: ಫೋನ್ ಮಾಡಿದ ಹಲವರು ಜಿಲ್ಲೆಯಲ್ಲಿ ಕರೊನಾ ಹರಡದಂತೆ ತಡೆಯುವಲ್ಲಿ ಯಶಸ್ವಿಯಾದ ಉತ್ತರ ಕನ್ನಡ ಜಿಲ್ಲಾಡಳಿತದ ಕಾರ್ಯವನ್ನು ಶ್ಲಾಘಿಸಿದರು. ಆದರೆ, ಹೊಗಳಿಕೆಗೆ ಅಷ್ಟೇ ವಿನಮ್ರವಾಗಿ ಉತ್ತರಿಸಿದ ಜಿಲ್ಲಾಧಿಕಾರಿ, ಲಾಕ್​ಡೌನ್ ಒಬ್ಬ ಅಥವಾ ಇಬ್ಬರು ಅಧಿಕಾರಿಗಳ ಕೈಯಿಂದ ಯಶಸ್ವಿ ಮಾಡಲು ಸಾಧ್ಯವಿಲ್ಲ. ಜಿಲ್ಲೆಯ ಎಲ್ಲ 16 ಲಕ್ಷ ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದರು.

    ಜಲಮಾರ್ಗದ ಆತಂಕ: ಸದ್ಯ ಜಿಲ್ಲೆಗೆ ರಸ್ತೆ, ರೈಲು, ವಾಯು ಮಾರ್ಗದ ಮೂಲಕ ಹೊರಗಿನವರು ತಲುಪಲು ಸಾಧ್ಯವಿಲ್ಲ. ಆದರೆ, ಮೀನುಗಾರಿಕೆಗೆ ಅವಕಾಶ ನೀಡಿದರೆ ಜಲ ಮಾರ್ಗದ ಮೂಲಕ ಹೊರ ಊರಿನಲ್ಲಿರುವ ಜಿಲ್ಲೆಯವರು, ಅಥವಾ ಹೊರ ಊರಿನವರು ಜಿಲ್ಲೆಯನ್ನು ಸೇರುವ ಅಪಾಯವಿದೆ. ಅವರಿಂದ ಜಿಲ್ಲೆಯಲ್ಲಿ ರೋಗ ಹರಡುವ ಆತಂಕ ಎದುರಾಗಬಹುದು. ಇದರಿಂದ ಸದ್ಯ ಮೀನುಗಾರಿಕೆಗೆ ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

    ಫೋನ್ ಇನ್ ಮುಗಿಯುವುದರೊಳಗೆ ಆಹಾರ ತಲುಪಿತ್ತು
    ಹೊನ್ನಾವರದ ವೆಂಕಟೇಶ ಎಂಬುವವರು ಕರೆ ಮಾಡಿ ತಾವು ಮುರ್ಡೆಶ್ವರಕ್ಕೆ ತೆರಳಿದ್ದೆ. ಲಾಕ್​ಡೌನ್ ಪ್ರಾರಂಭವಾಗಿದ್ದರಿಂದ ವಾಪಸ್ ಊರಿಗೆ ಬರಲು ಆಗಲಿಲ್ಲ. ಈಗ ಊರಿನಲ್ಲಿ ರೇಶನ್ ಬಂದಿದೆ. ನನಗೆ ರೇಷನ್ ಪಡೆಯಲು ತೆರಳಲೂ ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡರು. ಅವರ ನಂಬರ್ ಪಡೆದ ಜಿಲ್ಲಾಧಿಕಾರಿ ತಕ್ಷಣ ತಮ್ಮ ಸಹಾಯಕರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿಸಿ ಪಡಿತರ ತಲುಪಿಸಲು ಸೂಚಿಸಿದರು. ಪೋನ್ ಇನ್ ಕಾರ್ಯಕ್ರಮ ಮುಗಿಯುವುದರೊಳಗೆ ಅವರ ಮನೆಗೆ ಧಾನ್ಯ ತಲುಪಿತ್ತು. ಶಿರಸಿಯ ರವೀಂದ್ರ ಗುಂಡು ಎಂಬುವವರು ತಮಗೆ ಕುಮಟಾದ ಆಯುರ್ವೆದ ಔಷಧ ಅಂಗಡಿಯೊಂದರಿಂದ ಗುಳಿಗೆ ಪಡೆಯಬೇಕಿರುವ ಬಗ್ಗೆ ಸಮಸ್ಯೆ ಹೇಳಿಕೊಂಡರು. ಅವರ ನಂಬರ್ ಪಡೆದ ಜಿಲ್ಲಾಧಿಕಾರಿ, ಮನೆಗೇ ಔಷಧ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

    ಇಬ್ಬರು ಕರೊನಾ ಸೋಂಕಿತರು ಬಿಡುಗಡೆ, ಹೋಟೆಲ್​ನಲ್ಲಿ ವಾಸ್ತವ್ಯದ ವ್ಯವಸ್ಥೆ
    ಕದಂಬ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲೆಯ ಇಬ್ಬರು ಕರೊನಾ ಸೋಂಕಿತರು ಮಂಗಳವಾರ ಬಿಡುಗಡೆಯಾಗಿದ್ದಾರೆ. ಆದರೆ, ಕೆಲದಿನಗಳವರೆಗೆ ಅವರಿಗೆ ಭಟ್ಕಳದ ಹೋಟೆಲ್ ಒಂದರಲ್ಲಿ ವೈಯಕ್ತಿಕವಾಗಿ ಇರಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದರು.

    ಬೆಂಗಳೂರಿನಿಂದ ಕರೆ ಮಾಡಿದ ಕುಮಟಾ ತಾಲೂಕಿನ ಗುಡೆ ಅಂಗಡಿ ಮೂಲದ ವಸಂತ ನಾಯ್ಕ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಉಳಿದ 6 ಸೋಂಕಿತರೂ ಚೇತರಿಸಿಕೊಳ್ಳುತ್ತಿದ್ದು, ಏ. 14ರ ಒಳಗೆ ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದರು.

    ಇನ್ನು, ದೆಹಲಿ ಜಮಾತ್, ಮೈಸೂರು ಜಮಾತ್​ನಿಂದ ಜನವರಿ ತಿಂಗಳಿಂದಲೇ ಆಗಮಿಸಿದವರನ್ನೂ ಗುರುತಿಸಲಾಗಿದೆ. ಜ್ವರದ ಯಾವುದೇ ಲಕ್ಷಣ ಇಲ್ಲದಿದ್ದರೂ, ಸರ್ಕಾರದ ನಿಯಮಾವಳಿಯಂತೆ ಅವರ ರಕ್ತ, ಗಂಟಲ ದ್ರವದ ಮಾದರಿ ಪರೀಕ್ಷೆಗೆ ಅಗತ್ಯವಿಲ್ಲದಿದ್ದರೂ ಜನರ ಆತಂಕ ದೂರ ಮಾಡುವ ಸಲುವಾಗಿ ವಿಶೇಷ ಪ್ರಕರಣ ಎಂದು ಮನವಿ ಮಾಡಿ ಅವರೆಲ್ಲರ ರಕ್ತದ ಮಾದರಿಗಳನ್ನು ಪರಿಶೀಲನೆಗೆ ಕಳಿಸಲಾಗಿದೆ. ಕೆಲವರ ಮಾದರಿಯ ವರದಿ ಬರುವುದು ಬಾಕಿ ಇದೆ ಎಂದರು.

    ಇನ್ನು, ಹೊರ ದೇಶದಿಂದ ಬಂದು, ಸೋಂಕಿತರ ಸಂಪರ್ಕಕ್ಕೆ ಬಂದ 254 ಜನರ 14 ದಿನದ ಕ್ವಾರಂಟೈನ್ ಅವಧಿ ಈಗಾಗಲೇ ಮುಕ್ತಾಯವಾಗಿದೆ. ಆದರೆ, ಅವರನ್ನು ಬಹಿರಂಗವಾಗಿ ಓಡಾಡಲು ಬಿಡುತ್ತಿಲ್ಲ. 28 ದಿನದ ಕ್ವಾರಂಟೈನ್ ಅವಧಿ ಮುಗಿಯುವವರೆಗೂ ಕಾಯಲಿದ್ದೇವೆ. ಇನ್ನು ಏ. 10ರ ನಂತರ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಎರಡನೇ ಹಂತದ ಜ್ವರ ಸಮೀಕ್ಷೆ ನಡೆಸಲಿದ್ದೇವೆ. ದಾನಿಗಳಿಂದ ಪಡೆದ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಸಂಗ್ರಹಣೆ ಇದ್ದು, ಅದನ್ನು ಕಾರ್ಯಕರ್ತೆಯರಿಗೆ ವಿತರಣೆ ಮಾಡಲಿದ್ದೇವೆ ಎಂದರು.

    ಲಾಕ್​ಡೌನ್ ಅವಧಿ ಮುಗಿದ ನಂತರವೂ ಮುಂದಿನ 3 ತಿಂಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಿಮ್್ಸ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್​ಗಳ ವಿಶೇಷ ವಾರ್ಡ್ ಸಜ್ಜು ಮಾಡುತ್ತಿದ್ದೇವೆ. ಜಿಲ್ಲೆಗೆ ಸರ್ಕಾರ ಈಗ 15 ವೆಂಟಿಲೇಟರ್ ಕೊಡುವುದಾಗಿ ತಿಳಿಸಿದೆ. ನಾವು ಹೊಸ 10 ವೆಂಟಿಲೇಟರ್ ಖರೀದಿಸುತ್ತಿದ್ದೇವೆ. ಇನ್ಪೋಸಿಸ್ ಫೌಂಡೇಷನ್​ನಿಂದ 3 ವೆಂಟಿಲೇಟರ್ ನೀಡಲಾಗಿದೆ. ಇನ್ನೂ 3 ಹೊಸ ಯಂತ್ರ ನೀಡುವ ಭರವಸೆ ಸಿಕ್ಕಿದೆ. ಇವುಗಳನ್ನು ಮುಂದಿನ ದಿನದಲ್ಲಿ ಪ್ರತಿ ತಾಲೂಕಿಗೆ ಎರಡರಂತೆ ವಿತರಿಸುವ ಯೋಜನೆ ಹೊಂದಿದ್ದೇವೆ ಎಂದರು.

    ದಾಂಡೇಲಿಯ ರಾಜಶೇಖರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ದಾಂಡೇಲಿಯಲ್ಲಿ ಹೊರಗಿನ ಜಮಾತ್​ನಿಂದ ಬಂದ ಎಲ್ಲರ ಗಂಟಲಿನ ದ್ರವದ ಮಾದರಿ ಕಳಿಸಿದ್ದು, ನೆಗೆಟಿವ್ ಬಂದಿದೆ. ಲಾಕ್​ಡೌನ್​ನ ನಂತರವೂ ಜಿಲ್ಲೆಯಲ್ಲಿ ಏನು ಮಾಡಬೇಕು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇದೆ’ ಎಂದರು.

    ನೌಕಾ ಆಸ್ಪತ್ರೆಯಲ್ಲಿ ಹೀಗಿರುತ್ತೆ:
    ಪತಂಜಲಿ ಆಸ್ಪತ್ರೆಯಲ್ಲಿ ನೌಕಾನೆಲೆಯ ಮೂವರು ಹಾಗೂ ಸ್ಥಳೀಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ 6 ವೈದ್ಯರು, ನರ್ಸ್​ಗಳು ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿ 4 ಗಂಟೆಗೆ ಒಬ್ಬರಂತೆ ಶಿಫ್ಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬಳಸಿದ ಇಡೀ ದೇಹದ ಕವಚವನ್ನು ಸುಟ್ಟು ಹಾಕಲಾಗುತ್ತದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ಮೊಬೈಲ್​ಫೋನ್ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts