More

    ಲಾಕ್​ಡೌನ್ ತೆರವು, ಖರೀದಿಗೆ ಹಿಂದೇಟು

    ಹುಬ್ಬಳ್ಳಿ: ಭಾನುವಾರದ ಲಾಕ್​ಡೌನ್ ತೆರವುಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಜನರ ಓಡಾಟಕ್ಕೆ ಮುಕ್ತ ಅವಕಾಶವಿತ್ತು. ವ್ಯಾಪಾರ-ವಹಿವಾಟಿಗೆ ಯಾವುದೇ ನಿರ್ಬಂಧವಿರಲಿಲ್ಲ. ಆದರೆ, ಜನರು ವಿಶ್ರಾಂತಿ ಪಡೆದಂತೆ ಭಾಸವಾಗಿತ್ತು.

    ಆಗಸ್ಟ್ 1ರಿಂದ ಕರೊನಾ ನಿರ್ಬಂಧವು ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂಬುದಕ್ಕೆ ಸೀಮಿತವಾಗಿದೆ. ಉಳಿದಂತೆ ಎಲ್ಲ ವೂ ಮುಕ್ತ ಮುಕ್ತ. ಆದರೆ, ಭಾನುವಾರ ಪೂರ್ಣ ಪ್ರಮಾಣದಲ್ಲಿ ಹುಬ್ಬಳ್ಳಿ ತೆರೆದುಕೊಳ್ಳಲಿಲ್ಲ. ಶುಕ್ರವಾರ ವರ ಮಹಾಲಕ್ಷ್ಮಿ ಪೂಜೆ, ಶನಿವಾರ ಬಕ್ರೀದ್ ಹಬ್ಬಕ್ಕೆಂದು ಮಾರುಕಟ್ಟೆಯಲ್ಲಿ ಓಡಾಡಿದ್ದ ಜನರು ಇಂದು ವಿಶ್ರಾಂತಿ ಪಡೆದಿದ್ದಂತೆ ಕಂಡು ಬಂದಿತು.

    ಕರೊನಾ ಭೀತಿಯ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಈಗಲೂ ಆರಂಭಗೊಂಡಿಲ್ಲ. ಮೇಲಾಗಿ ಸರ್ಕಾರಿ-ಖಾಸಗಿ ಕಚೇರಿಗಳಿಗೆ ರಜೆ ಬೇರೆ. ಹಾಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ, ಮಾರುಕಟ್ಟೆಯಲ್ಲಿ ಜನರ ಓಡಾಟ ಗಿಜಿಗುಡುವಂತೆ ಇರಲಿಲ್ಲ.

    ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ, ದಾಜಿಬಾನಪೇಟ, ದೇಶಪಾಂಡೆನಗರ, ಸ್ಟೇಶನ್ ರಸ್ತೆ, ಗಣೇಶಪೇಟ ಇತ್ಯಾದಿ ಕಡೆ ಇರುವ ಸಾಲು ಸಾಲು ವಾಣಿಜ್ಯ ಸಂಕೀರ್ಣಗಳಲ್ಲಿ ಕೆಲ ಅಂಗಡಿಗಳು ಬಂದ್ ಆಗಿದ್ದವು. ಕೋಯಿನ್ ರಸ್ತೆ ಯು ಮಾಲ್​ನಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ನ್ಯಾಷನಲ್ ಮಾರ್ಕೆಟ್ ವಾಣಿಜ್ಯ ಸಂಕೀರ್ಣದಲ್ಲಿ ಬಹುತೇಕ ಮಳಿಗೆಗಳು ಬಾಗಿಲು ಹಾಕಿದ್ದವು. ಕರೊನಾ ಪೂರ್ವದ ಭಾನುವಾರದಂತೆ ಹುಬ್ಬಳ್ಳಿಯಲ್ಲಿ ಜನಜೀವನ ಇತ್ತು. ಸಂಜೆ 6 ಗಂಟೆಯ ಬಳಿಕ ಮಾರುಕಟ್ಟೆಯಲ್ಲಿ ಜನ, ವಾಹನಗಳ ಓಡಾಟ ತುಸು ಹೆಚ್ಚಿತ್ತು.

    ಸಾರಿಗೆ ಸಂಸ್ಥೆಯ ಬಸ್​ಗಳು ಪ್ರಯಾಣಿಕರ ಕೊರತೆಯನ್ನು ಎದುರಿಸಿದವು. ದೂರದ ಪ್ರಯಾಣದ ಬಸ್​ಗಳ ಆಗಮನ-ನಿರ್ಗಮನ ವಿರಳವಾಗಿದ್ದವು. ನಗರ ಸಾರಿಗೆ, ಗ್ರಾಮೀಣ ಸಾರಿಗೆ ಬಸ್​ಗಳ ಸಂಚಾರ ಸಾಧಾರಣವಾಗಿದ್ದವು. ರಾತ್ರಿ ವೇಳೆ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದವು.

    ಮೀನು, ಮಾಂಸ ಮಾರಾಟವು ನೀರಸ
    ಹುಬ್ಬಳ್ಳಿಯಲ್ಲಿ ಮೀನು, ಮಾಂಸ ಖರೀದಿಗೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಶ್ವಾಪುರದಲ್ಲಿ ಚಿಕನ್, ಮಟನ್ ಖರೀದಿಗೆ ಒಂದಿಷ್ಟು ಜನರಿದ್ದರು. ಆದರೆ, ಉಳಿದೆಡೆ ಮಾಂಸದಂಗಡಿಗಳು ಗ್ರಾಹಕರ ಬರುವಿಕೆಗೆ ಕಾಯಬೇಕಾಯಿತು. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಮಾಂಸದ ಬೇಡಿಕೆ ತಗ್ಗಿದೆ.

    ಗಣೇಶಪೇಟ ಮೀನು ಮಾರುಕಟ್ಟೆಯಲ್ಲಿ ಪ್ರತಿ ಭಾನುವಾರ ಜನದಟ್ಟಣೆ ಇರುತ್ತಿತ್ತು. ಆದರೆ, ಇಂದು ಅಂಥ ಜನಸಂದಣಿ ಕಂಡು ಬರಲಿಲ್ಲ. 2 ದಿನಗಳ ಹಿಂದೆ (ಜುಲೈ 31)ಯಷ್ಟೇ ಮೀನುಗಾರಿಕೆ ನಿಷೇಧ ತೆರವುಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ತಾಜಾ ಮೀನಿನ ಕೊರತೆ ಎದುರಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ಬಂದಿರಲಿಲ್ಲ. ಎಲ್ಲ ಬಗೆಯ ಮೀನುಗಳು ಮಾರುಕಟ್ಟೆಯಲ್ಲಿ ಇರಲಿಲ್ಲ. ಅರ್ಧದಷ್ಟು ಅಂಗಡಿಗಳು ಬಂದ್ ಇದ್ದವು. ಕಳೆದ ವಾರಕ್ಕೆ ಹೋಲಿಸಿದರೆ ಮೀನಿನ ದರ ತುಸು ಕಡಿಮೆ ಇತ್ತು. ಕಳೆದ 2 ವಾರಗಳಿಂದ ಧಾರವಾಡ ಜಿಲ್ಲೆಯಲ್ಲಿ ನಿತ್ಯ ನೂರಕ್ಕೂ ಹೆಚ್ಚು ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts