More

    ಲಾಕ್​ಡೌನ್​ಗೆ ಧಾರವಾಡ ಸ್ತಬ್ಧ

    ಧಾರವಾಡ: ಕರೊನಾ ನಿಯಂತ್ರಿಸಲು ಸರ್ಕಾರ ಭಾನುವಾರ ಲಾಕ್​ಡೌನ್ ಘೊಷಣೆ ಮಾಡಿದ ಹಿನ್ನೆಲೆಯಲ್ಲಿ ಇಡೀ ನಗರ ಸಂಪೂರ್ಣ ಸ್ತಬ್ಧವಾಗಿತ್ತು.

    ಲಾಕ್​ಡೌನ್ ಸಡಿಲಿಕೆಯಿಂದ ಕರೊನಾ ಪ್ರಕರಣಗಳ ಸಂಖ್ಯೆ ದಿನೇದಿನೆ ಏರುತ್ತಿರುವ ಕಾರಣಕ್ಕೆ ವಾರದಲ್ಲಿ ಒಂದು ದಿನ ಸಂಪೂರ್ಣ ಲಾಕ್​ಡೌನ್ ಮಾಡಲು ನಿರ್ಧರಿಸಿದೆ. ಹೀಗಾಗಿ ಸದಾ ಜನರಿಂದ ಕೂಡಿರುತ್ತಿದ್ದ ನಗರ ಖಾಲಿ ಖಾಲಿಯಾಗಿತ್ತು. ನಗರ ಸಾರಿಗೆ ಸೇರಿ ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ಜನನಿಬಿಡಿ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣಗಳೂ ಬಿಕೋ ಎನ್ನುತ್ತಿದ್ದವು.

    ಜನರ ಅಗತ್ಯ ವಸ್ತುಗಳಾದ ಹಾಲು, ಔಷಧ, ಪೆಟ್ರೋಲ್ ಬಂಕ್, ತರಕಾರಿ, ಹೋಟೆಲ್​ನಲ್ಲಿ ಪಾರ್ಸಲ್, ಮಾಂಸ ಮಾರಾಟ ಹೀಗೆ ಕೆಲ ವಸ್ತುಗಳ ಮಾರಾಟಕ್ಕೆ ವಿನಾಯಿತಿ ನೀಡಲಾಗಿತ್ತು. ಬಹುತೇಕ ಜನರು ಶನಿವಾರವೇ ವಸ್ತುಗಳನ್ನು ಖರೀದಿ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕಾಣಲಿಲ್ಲ.

    ಈಗಾಗಲೇ ಕರೊನಾ ಹಾವಳಿಯಿಂದ ಜನರಲ್ಲೂ ಭಯ ಹುಟ್ಟಿದ್ದರಿಂದ ಅನಗತ್ಯ ಓಡಾಟ ನಡೆಸುವವರ ಸಂಖ್ಯೆಯಲ್ಲೂ ಇಳಿಕೆಯಾಗಿತ್ತು. ಹೀಗಾಗಿ ಸರ್ಕಾರ ಹೊರಡಿಸಿದ ಲಾಕ್​ಡೌನ್ ಆದೇಶ ನಗರದಲ್ಲಿ ಯಶಸ್ಸು ಕಂಡಿದೆ.

    ಪೊಲೀಸರಿಂದ ತಿಳಿವಳಿಕೆ: ಲಾಕ್​ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಟ ನಡೆಸುವವರ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದರು. ಸಂಚಾರ ನಡೆಸುತ್ತಿದ್ದ ಜನರನ್ನು ತಡೆದು ವಿಚಾರಣೆ ನಡೆಸುತ್ತಿದ್ದ ಪೊಲೀಸರು, ಅಗತ್ಯ ಕಾರ್ಯಗಳಿಗೆ ತೆರಳುತ್ತಿದ್ದರೆ ಬಿಡುತ್ತಿದ್ದರು. ಉಳಿದವರಿಗೆ, ‘ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ. ಇದರ ಗಂಭೀರತೆ ಅರಿತು ಮನೆಯಲ್ಲೇ ಇರಿ’ ಎಂದು ತಿಳಿವಳಿಕೆ ನೀಡುತ್ತಿದ್ದರು.

    ಸರ್ಕಾರಿ ನೌಕರರಿಗೆ ಬಿ.ಡಿ. ಜತ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ನಗರದಲ್ಲಿ ಯಾವ ರೀತಿಯಲ್ಲಿ ಲಾಕ್​ಡೌನ್ ಜಾರಿಯಲ್ಲಿದೆ ಎಂದು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹಾಗೂ ಪೊಲೀಸ್ ಆಯುಕ್ತ ಆರ್. ದಿಲೀಪ ಸಿಟಿ ರೌಂಡ್ಸ್ ನಡೆಸಿದರು. ನಗರದ ಪ್ರಮುಖ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

    ನಗರದ ಕೋರ್ಟ್ ವೃತ್ತ, ಲೈನ್ ಬಜಾರ್, ಭೂಸಪ್ಪ ಚೌಕ್, ಹೊಸಯಲ್ಲಾಪುರ, ಗಾಂಧಿಚೌಕ, ಹೆಬ್ಬಳ್ಳಿ ಅಗಸಿ, ಶಿವಾಜಿ ವೃತ್ತ, ಸಾಧನಕೇರಿ, ದೊಡ್ಡನಾಯಕನಕೊಪ್ಪ, ಬನಶಂಕರಿನಗರ, ದಾಸನಕೊಪ್ಪ ವೃತ್ತ ಸೇರಿ ಇತರ ಕಡೆಗಳಲ್ಲಿ 25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ ಸಂಚಾರ ನಡೆಸಿ, ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಜನರಿಗೆ ತಿಳಿವಳಿಕೆಯೊಂದಿಗೆ ಎಚ್ಚರಿಕೆ ನೀಡಿದರು.

    ಮಾಧ್ಯಮದವರೊಂದಿಗೆ ಜಿಲ್ಲಾಧಿಕಾರಿ ನಿತೇಶ ಮಾತನಾಡಿ, ಪೊಲೀಸ್ ಸಿಬ್ಬಂದಿ ಹಾಗೂ ಸರ್ಕಾರಿ ನೌಕರರಿಗೂ ಸೋಂಕು ಕಾಣುತ್ತಿರುವ ಹಿನ್ನೆಲೆಯಲ್ಲಿ ಅವರಿಗಾಗಿ ನಗರದ ಬಿ.ಡಿ. ಜತ್ತಿ ಹೋಮಿಯೋಪತಿ ಆಸ್ಪತ್ರೆ ಕಾಯ್ದಿರಿಸಲಾಗಿದೆ. ಸರ್ಕಾರಿ ಕಚೇರಿ ಸಿಬ್ಬಂದಿಗೆ ಸೋಂಕು ತಗುಲಿದರೆ ಆ ಕಚೇರಿಯನ್ನು ಸ್ಯಾನಿಟೈಸ್ ಮಾಡಿ 2 ದಿನ ಸೀಲ್​ಡೌನ್ ಮಾಡಲಾಗುವುದು. ನಂತರದ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಸೋಂಕು ತಗುಲಿದ ನೌಕರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.

    ಸಂಡೆ ಲಾಕ್​ಡೌನ್, ಕರ್ಫ್ಯೂ ಮತ್ತಷ್ಟು ಬಿಗಿ: ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾತನಾಡಿ, ಸಂಡೆ ಲಾಕ್​ಡೌನ್ ಮತ್ತು ಕರ್ಫ್ಯೂ ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೆರೆಗೆ ಪೊಲೀಸ್ ಸಿಬ್ಬಂದಿ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು.

    ಪರಿಶೀಲನೆ ಸಂದರ್ಭದಲ್ಲಿ ಆರು ಬೈಕ್ ಮತ್ತು ಎರಡು ಕಾರ್​ಗಳನ್ನು ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪೊಲೀಸರು ವಶಕ್ಕೆ ಪಡೆದು ಕರ್ಫ್ಯೂ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts