More

    ಲಸಿಕೆ ಗುಣಮಟ್ಟ ಬಗ್ಗೆ ಗೊಂದಲ ಸೃಷ್ಟಿಸಿದವರೇ ಈಗ ಕೊರತೆಯನ್ನೂ ಟೀಕಿಸುತ್ತಿದ್ದಾರೆ, ಆರೋಗ್ಯ ಸಚಿವ ಸುಧಾಕರ್ ವ್ಯಂಗ್ಯ

    ಚಿಕ್ಕಬಳ್ಳಾಪುರ: ಈ ಹಿಂದೆ ಲಸಿಕೆಯ ಗುಣಮಟ್ಟದ ಬಗ್ಗೆ ಅನುಮಾನ, ಗೊಂದಲ ಮೂಡಿಸಿದವರೇ ಈಗ ಕೊರತೆಯ ಬಗ್ಗೆ ಟೀಕಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.

    ಜಿಲ್ಲಾಡಳಿತ ಭವನದಲ್ಲಿ ಸಹಾಯವಾಣಿ ಕಾರ್ಯವೈಖರಿಯನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಕರೊನಾ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ನಡೆಸಬೇಕೇ ಹೊರತು ರಾಜಕೀಯ ಮಾಡಬಾರದು ಎಂದರು.

    ಎಲ್ಲೂ 18ರಿಂದ 44 ವರ್ಷದವರಿಗೆ ಲಸಿಕೆ ನೀಡುವುದಿಲ್ಲ ಎಂದು ಹೇಳಿಲ್ಲ. ಪ್ರಸ್ತುತ ತಾತ್ಕಾಲಿಕವಾಗಿ ತಡೆಯಲಾಗಿದೆಯಷ್ಟೇ, ಆದಷ್ಟು ಬೇಗ ಹಂತ ಹಂತವಾಗಿ ಲಸಿಕೆ ಹಾಕಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ, ಗೊಂದಲ ಬೇಡ. ಆದ್ಯತೆ ಮೇರೆಗೆ ಮೊದಲ ಡೋಸ್ ಪಡೆದಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

    ದೇಶದಲ್ಲಿ ಎರಡು ಕಂಪನಿಗಳು ಮಾತ್ರ ಲಸಿಕೆ ತಯಾರಿಸುತ್ತಿವೆ. ಇದು ಸ್ವಲ್ಪ ಸವಾಲಿನಿಂದ ಕೂಡಿದ್ದು, 1 ತಿಂಗಳಿಗೆ 8 ಕೋಟಿ ಲಸಿಕೆ ತಯಾರಾಗುತ್ತಿದೆ. ಕ್ರಮೇಣ 9 ಕೋಟಿಗೆ ಹೆಚ್ಚಳವಾಗಿ, ಜುಲೈನಿಂದ ಉತ್ಪಾದನೆ ದುಪ್ಪಟ್ಟಾಗಲಿದೆ ಎಂಬ ವಿಶ್ವಾಶ ವ್ಯಕ್ತಪಡಿಸಿದ ಸಚಿವರು, ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಿದರೆ ಮಾತ್ರ ಎರಡನೇ ಹಂತವನ್ನು ನಿಯಂತ್ರಿಸಬಹುದು, 3ನೇ ಹಂತವನ್ನೂ ತಡೆಗಟ್ಟಬಹುದು ಎಂದರು.

    ಡಿಆರ್‌ಡಿಒ ಔಷಧವನ್ನು ರಾಜ್ಯದಲ್ಲಿ ಪರಿಚಯಿಸಬೇಕಿದೆ. ಇದೇ ಸಂಸ್ಥೆ ಆಕ್ಸಿಜನ್ ಜನರೇಟರ್ ಕೂಡ ತಯಾರಿಸಿದೆ. ಬೆಂಗಳೂರಿನ ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಸಾವಿರ ಕೆಎಲ್ ಸಾಮರ್ಥ್ಯದ ಘಟಕ ಅಳವಡಿಸಲು ನಿರ್ಧರಿಸಲಾಗಿದ್ದು, ಎರಡು ದಿನದಲ್ಲಿ ಉದ್ಘಾಟನೆಯಾಗಲಿದೆ, ಡಿಆರ್‌ಡಿಒ ಆಕ್ಸಿಕೇರ್ ಸಿಸ್ಟಮ್ ಸಿದ್ಧಪಡಿಸಿದ್ದು ಬಳಸಿಕೊಳ್ಳುವುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಖರೀದಿಸಲು ನಿರ್ಧರಿಸಲಾಗುವುದು ಎಂದು ಸುಧಾಕರ್ ಮಾಹಿತಿ ನೀಡಿದರು.

    ಕರೊನಾ ಸಹಾಯವಾಣಿಗೆ ಚಾಲನೆ: ಕರೊನಾ ರೋಗಿಗಳಿಗೆ ಮಾರ್ಗದರ್ಶನ ಮತ್ತು ವೈದ್ಯಕೀಯ ಸಲಹೆ ನೀಡಲು ಜಿಲ್ಲಾಡಳಿತ ಭವನದಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
    ಸ್ಟೆಪ್ ಒನ್ ಸಂಸ್ಥೆ, ಈಶಾ ಫೌಂಡೇಷನ್, ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾಡಳಿತ ಸ್ಥಾಪಿಸಿರುವ ಈ ಸಹಾಯವಾಣಿ ನೆರವು ಪಡೆಯಲು ಜಿಲ್ಲೆಯ ಜನರು 1077 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಇದರಲ್ಲಿ 178 ವೈದ್ಯರು ಮಾರ್ಗದರ್ಶನ ನೀಡಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ನೂರು ಲೈನ್ ವ್ಯವಸ್ಥೆ ಮಾಡಲಾಗಿದೆ.
    ಸಹಾಯವಾಣಿ, ಮಾರ್ಗದರ್ಶನ ಮತ್ತು ಅಗತ್ಯ ಸೇವೆಯ ನೆರವಿನ ಕ್ರಮಗಳಿಂದ ಕರೊನಾ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಜತೆಗೆ ರೋಗಿಗಳಿಗೆ ಹಾಸಿಗೆ ಮತ್ತು ಚಿಕಿತ್ಸೆ ದೊರಕಿಸಿಕೊಡಲು ಸಹಕಾರಿಯಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇದೇ ಮಾದರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

    24 ಗಂಟೆಯೂ ಸೇವೆ: ಜಿಲ್ಲೆಯ ಜನರು ಸೋಂಕು ದೃಢಪಟ್ಟ ಕೂಡಲೇ ಕರೆ ಮಾಡಿ ಮಾಹಿತಿ ತಿಳಿಸಿದರೆ ತಕ್ಷಣ ಔಷಧ ಕಿಟ್ ವಿತರಣೆ, ಮನೆಯಲ್ಲಿರುವವರಿಗೆ ವೈದ್ಯಕೀಯ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ. ದಿನದ 24 ಗಂಟೆಯೂ ಸಹಾಯವಾಣಿ ಸೇವೆ ಪಡೆಯಬಹುದಾಗಿದೆ. ಇದಕ್ಕಾಗಿ ಸ್ವಯಂಸೇವಾ ಸಂಸ್ಥೆಯ ವೈದ್ಯರ ಜತೆಗೆ ವೇತನದಡಿ ಕೆಲವರನ್ನು ನೇಮಕ ಮಾಡಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts