More

    ಲಸಿಕೆ ಅಭಿಯಾನಕ್ಕೆ ಎಲ್ಲರ ಸಹಕಾರ ಅತ್ಯಗತ್ಯ

    ಕೋಲಾರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಇಂದ್ರಧನುಷ್ ಅಭಿಯಾನಕ್ಕೆ ಸಾರ್ವನಿಕರು ಸ್ಪಂದಿಸಬೇಕು. ಗರ್ಭಿಣಿಯರು ಮತ್ತು ೨ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಮಾರಕ ರೋಗಗಳಿಗೆ ಲಸಿಕೆ ಹಾಕಿಸಬೇಕು ಎಂದು ತಹಸೀಲ್ದಾರ್ ಹರ್ಷವರ್ಧನ್ ತಿಳಿಸಿದರು.
    ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಚಾಲನಾ ಸಮಿತಿ ಸಭೆ ಕುರಿತು ಮಾತನಾಡಿ, ಗಂಟಲು ಮಾರಿ, ದಡಾರ, ಪೋಲಿಯೋ, ಡಿಫ್ತೀರಿಯಾ, ಹೆಪಟೈಟಿಸ್ ಬಿ, ಧನುರ್ವಾಯು, ಬಾಲ ಕ್ಷಯ, ದಡಾರ ರುಬೆಲ್ಲಾ, ನಿಮೊಕಾಕಲ್ ನಿಮೋನಿಯ, ರೋಟಾ ವೈರಸ್ ಮೆದುಳು ಜ್ವರಕ್ಕೆ ಸಂಬಂಧಿಸಿದಂತೆ ಲಸಿಕೆ ನೀಡುವ ಅಭಿಯಾನಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಉಚಿತವಾಗಿ ನೀಡಲಾಗುವ ಲಸಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ಇಂದ್ರಧನುಷ್ ಎಂದರೆ ಏಳು ಬಣ್ಣಗಳ ಮಳೆಬಿಲ್ಲು. ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳನ್ನು ಏಳು ಬಣ್ಣಗಳು ಪ್ರತಿನಿಧಿಸುತ್ತವೆ. ಮಾರಕ ರೋಗಗಳು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ. ಈ ರೋಗಗಳಿಗೆ ತುತ್ತಾಗದಂತೆ ತಡೆಯಲು ನಿಯಮಿತವಾಗಿ ಗರ್ಭಿಣಿ ಮತ್ತು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಲಸಿಕೆ ನೀಡುವ ಮೂಲಕ ಅಪಾಯವನ್ನು ತಡೆಗಟ್ಟಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಈ ಯೋಜನೆಯನ್ನು ಪರಿಚಯಿಸಿದೆ. ಜಿಲ್ಲೆಯಲ್ಲಿನ ಅಂಗನವಾಡಿ ಮತ್ತು ಶಾಲೆಗಳಲ್ಲಿ ಎಲ್ಲ ಮಕ್ಕಳು ನಿಗಧಿತ ಲಸಿಕೆಗಳನ್ನು ಪಡೆದಿದ್ದಾರೆಯೇ ಎಂಬುದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
    ಗಡಿಜಿಲ್ಲೆಯಾಗಿರುವುದರಿಂದ ಹೊಟ್ಟೆ ಪಾಡಿನ ಕೆಲಸಕ್ಕಾಗಿ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲಿಯೂ ಕೂಲಿ ಕಾರ್ಮಿಕರು, ಕಲ್ಲು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರು, ಕಾರ್ಖಾನೆಗಳಲ್ಲಿನ ಕಾರ್ಮಿಕರ ಅವರ ಮಕ್ಕಳಿಗೆ ನಿಯಮಿತವಾದ ಲಸಿಕೆಗಳನ್ನು ನೀಡಲಾಗಿದೆಯೇ ಎಂಬುದನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ವಲಸೆ ಕಾರ್ಮಿಕರ ಮಕ್ಕಳು ಈ ಅಭಿಯಾನದಿಂದ ಹೊರಗೊಳಿಯುವುದನ್ನು ತಪ್ಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆ ಬಗ್ಗೆ ಅಧಿಕಾರಿಗಳು ಜಾಗೃತಿ ್ನ ಮೂಡಿಸಬೇಕು ಎಂದು ತಿಳಿಸಿದರು.
    ತಾಲೂಕು ಆರೋಗ್ಯ ಅಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಇಂದ್ರ ಧನುಷ್ ಅಭಿಯಾನದಡಿ ಆ.೭ ರಿಂದ ೧೨, ಸೆ.೯ ರಿಂದ ೧೪ ಹಾಗೂ ಅ.೧೧ರಿಂದ ೧೬ ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪಾಲಕರು ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು. ಕೋಲಾರ ತಾಲ್ಲೂಕು ವ್ಯಾಪ್ತಿಯಲ್ಲಿ ನಕಲಿ ಕ್ಲಿನಿಕ್‌ಗಳ ಹಾಗೂ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ಹಲವು ನಕಲಿ ಕ್ಲಿನಿಕ್‌ಗಳ ಮೇಲೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಅನಿರೀಕ್ಷಿತ ದಾಳಿ ಮಾಡಿ ನೋಟಿಸ್‌ಗಳನ್ನು ನೀಡಲಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಮುಕ್ತವಾಗಿ ಇಲಾಖೆಯ ಅಧಿಕಾರಿಗೆ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.
    ಜಿಲ್ಲಾ ಫ್ಲೋರೋಸಿಸ್ ಸಲಹೆಗಾರರಾದ ಅರ್ಚನಾ ಮಾತನಾಡಿ, ಜಿಲ್ಲೆಯನ್ನು ಫ್ಲೊರೋಸಿಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ೧೦ ವರ್ಷದಿಂದ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ ಎಂದರು.
    ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣಾ ಕಾರ್ಯಕ್ರಮದ ಕರಪತ್ರಗಳು ಹಾಗೂ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
    ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಆರ್. ಸತ್ಯನಾರಾಯಣಗೌಡ, ಐ.ಎಂ.ಎ ಸಂಸ್ಥೆಯ ಡಾ.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts