More

    ಎಲ್ಲ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ; ರೈತರಲ್ಲಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮನವಿ

    ಹಾವೇರಿ: ಕಾಲು ಬಾಯಿ ಬೇನೆ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ನಮ್ಮ ದೇಶದಿಂದ ಸಂಪೂರ್ಣವಾಗಿ ಹೋಗಲಾಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಅನುದಾನದಲ್ಲಿ ವರ್ಷಕ್ಕೆ ಎರಡು ಬಾರಿಯಂತೆ ಅರ್ಹ ಜಾನುವಾರುಗಳಿಗೆ ಕಡ್ಡಾಯ ಲಸಿಕೆ ಹಾಕಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಉಪ ನಿರ್ದೇಶಕ ಡಾ.ಎಸ್.ವಿ.ಸಂತಿ ಹೇಳಿದರು.
    ನಗರದ ಪಶು ಆಸ್ಪತ್ರೆ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಹಸುಗಳಿಗೆ ಪೂಜೆ ಮಾಡುವ ಮೂಲಕ ಐದನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಇಂದಿನಿಂದ ಏಪ್ರಿಲ್ 30ರವರೆಗೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲ ರೈತರು ಸಹಕಾರ ನೀಡಬೇಕು. ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ನಿಗದಿಪಡಿಸಿದ ವೇಳಾಪಟ್ಟಿಯನ್ವಯ ಗ್ರಾಮಗಳಿಗೆ ತೆರಳಿ ರೈತರ ಮನೆ ಬಾಗಿಲಲ್ಲೆ ಲಸಿಕೆ ಹಾಕಲಾಗುತ್ತದೆ. ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿಸಲ್ಪಟ್ಟ ಮೇಲ್ವಿಚಾರಕರು ಹಾಗೂ ಲಸಿಕಾದಾರರು ಯುದ್ದೋಪಾದಿಯಲ್ಲಿ ಈ ಕಾರ್ಯಕ್ರಮವನ್ನು ಕೈಗೊಂಡು ಅರ್ಹ ಎಲ್ಲ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು ಎಂದರು.
    ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಜಿ.ವಿ.ಜಯಣ್ಣ ಮಾತನಾಡಿ, ಜಾನುವಾರುಗಳ ಕಾಲುಬಾಯಿ ಬೇನೆಯಿಂದ ರೈತರಿಗೆ ಆರ್ಥಿಕ ಹಾನಿ ಉಂಟಾಗುವುದಲ್ಲದೇ ಅದರ ಪರಿಣಾಮಗಳಿಂದಾಗಿ ಜೀವಿತಾವಧಿಯವರೆಗೂ ಜಾನುವಾರುಗಳ ಹಾಲು ಉತ್ಪಾದನಾ ಸಾಮರ್ಥ್ಯ ಹಾಗೂ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ, ಜಾನುವಾರು ಮಾಲೀಕರು ತಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಬಿಟ್ಟು ಲಸಿಕೆ ಹಾಕಲು ಬಂದ ಇಲಾಖಾ ಸಿಬ್ಬಂದಿಯೊಂದಿಗೆ ಸಹಕರಿಸಿ ರೋಗದ ಹತೋಟಿಗಾಗಿ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು.
    ಕಾರ್ಯಕ್ರಮದಲ್ಲಿ ಹಾವೇರಿ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪಿ.ಎನ್.ಹುಬ್ಬಳ್ಳಿ ಹಾಗೂ ಹಾವೇರಿ ತಾಲೂಕಿನ ಲಸಿಕಾ ಮೇಲ್ವಿಚಾರಕರು, ಲಸಿಕಾದಾರರು ಹಾಗೂ ರೈತರು ಉಪಸ್ಥಿತರಿದ್ದರು.
    3.58 ಲಕ್ಷ ಜಾನುವಾರು ಗುರುತು
    ಕಾಲುಬಾಯಿ ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಅಂದಾಜು 3.058 ಲಕ್ಷ ಜಾನುವಾರುಗಳನ್ನು ಗುರುತಿಸಲಾಗಿದೆ. ಪಶುಪಾಲನಾ ಇಲಾಖೆಯ ಹಾಗೂ ಇಲಾಖೇತರ ಲಸಿಕೆದಾರರನ್ನು ಒಳಗೊಂಡು ಇಬ್ಬರು ಲಸಿಕಾದಾರರಿರುವ ಒಟ್ಟು 141 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಲಸಿಕಾ ವೇಳಾ ಪಟ್ಟಿ ಮತ್ತು ಜಾನುವಾರು ಹೊಂದಿರುವ ರೈತರ ಮಾಹಿತಿಯನ್ನು ಗ್ರಾಮವಾರು ತಯಾರಿಸಲಾಗಿದೆ. ಅದರಲ್ಲಿ ಗ್ರಾಮಗಳ ಹೆಸರು, ಜಾನುವಾರುಗಳ ಸಂಖ್ಯೆ, ಜಾನುವಾರು ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಲಸಿಕಾದಾರರ ವಿವರ ಹಾಗೂ ಜಾನುವಾರುವಿನ ಕಿವಿಓಲೆ ಸಂಖ್ಯೆ ವಿವರಗಳು ಲಭ್ಯವಿರುತ್ತವೆ. ಪ್ರತಿ ಜಾನುವಾರಿಗೆ ಒಂದರಂತೆ ಸೀರಿಂಜ್ ಉಪಯೋಗಿಸಿ ಲಸಿಕೆ ನೀಡಲಿದ್ದಾರೆ ಎಂದು ಡಾ.ಎಸ್.ವಿ.ಸಂತಿ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts