More

    ಲಕ್ಷಾಂತರ ಬಳೆಗಳಿಂದ ಬರಗೇರಮ್ಮಗೆ ವಿಶೇಷಾಲಂಕಾರ

    ಚಿತ್ರದುರ್ಗ: ಗೌರಿ ಹಬ್ಬದ ಅಂಗವಾಗಿ ಕೋಟೆನಗರಿಯ ಹೊಳಲ್ಕೆರೆ ರಸ್ತೆಯಲ್ಲಿ ಇರುವ ನಗರದೇವತೆ ಬರಗೇರಮ್ಮ ದೇವಿಗೆ ಸತತ 9ನೇ ವರ್ಷವೂ ಲಕ್ಷಾಂತರ ಬಳೆಗಳಿಂದ ಸೋಮವಾರ ವಿಶೇಷಾಲಂಕಾರ ಸೇವೆ ಜರುಗಿತು.

    ಕಳೆದ 15 ದಿನಗಳಿಂದಲೂ ಸಾವಿರಾರು ಭಕ್ತರು ತಮ್ಮ ಶಕ್ತ್ಯಾನುಸಾರ ದೇಗುಲಕ್ಕೆ ತಲುಪಿಸಿದ್ದ ವಿವಿಧ ವರ್ಣದ ಬಳೆಗಳಿಂದ ದೇವಿಯ ಮೂರ್ತಿಯ ಅಲಂಕಾರ ಶನಿವಾರ ರಾತ್ರಿಯಿಂದಲೇ ಆರಂಭವಾಗಿ, ಸೋಮವಾರ ಮುಂಜಾನೆ ಮೊದಲ ಪೂಜೆಗೆ ಮುಕ್ತಾಯವಾಯಿತು. ಪುನೀತ್, ಆನಂದ್, ಕಾಟಿ, ನವೀನ್ ಸೇರಿ ಹತ್ತಾರು ಅರ್ಚಕರ ಶ್ರಮದಿಂದ ಅಲಂಕೃತ ಮೂರ್ತಿ ಕಂಗೊಳಿಸಿತು.

    ಗರ್ಭಗುಡಿ ಮುಂಭಾಗದಲ್ಲಿ ಗೌರಮ್ಮನ ಒಂಬತ್ತು ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿತ್ತು. ಹೀಗಾಗಿ ಅನೇಕ ಮಹಿಳೆಯರು ಅಲ್ಲಿಯೇ ಬಾಗಿನ ವಿತರಿಸಿ, ಪ್ರಾರ್ಥನೆಯಲ್ಲಿ ನಿರತರಾದರು. ಬೆಳಗ್ಗೆ 11.30ರಿಂದ ರಾತ್ರಿ 10.30ರವರೆಗೂ ಸಾವಿರಾರು ಭಕ್ತರು ದರ್ಶನ ಪಡೆದು ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

    ಸೆ. 20ರವರೆಗೂ ಬಳೆ ಅಲಂಕಾರ ಕಣ್ತುಂಬಿಕೊಳ್ಳಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ ದೇವಿಯ ಮೂರ್ತಿಗೂ ಬಳೆಗಳಿಂದ ಅಲಂಕರಿಸಲಾಗಿತ್ತು.

    ನೀಲಕಂಠೇಶ್ವರ ಸ್ವಾಮಿ ದೇಗುಲ, ಸಂಕಷ್ಟಹರ ಗಣಪತಿ ದೇಗುಲ, ದೊಡ್ಡಗರಡಿ ಸಮೀಪದ ಗೌರಿ ಮನೆ ಸೇರಿ ಸಾಮೂಹಿಕವಾಗಿ ಪ್ರತಿಷ್ಠಾಪಿಸಿದೆಡೆ ಸಾವಿರಾರು ಮಹಿಳೆಯರು ತೆರಳಿ ಗೌರಮ್ಮ ದೇವಿಗೆ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು.

    ಸಂಬಂಧಿಕರು, ನೆರೆ-ಹೊರೆಯವರನ್ನು ಪೂಜೆಗೆ ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬುವ ಮೂಲಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts