More

    ಲಕ್ಕುಂಡಿ ಗ್ರಾಮ ಕಂಟೇನ್ಮೆಂಟ್ ವಲಯ

    ಗದಗ: ಕೋವಿಡ್ 19 ಸೋಂಕು ಹೊಂದಿದ್ದ ತಾಲೂಕಿನ ಲಕ್ಕುಂಡಿ ಗ್ರಾಮದ 44 ವರ್ಷದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮವನ್ನು ಕಂಟೇನ್ಮೆಂಟ್ ವಲಯ ಎಂದು ಜಿಲ್ಲಾಡಳಿತ ಘೊಷಿಸಿ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.

    ಅಲ್ಲದೆ, ಈ ಪ್ರದೇಶ ವ್ಯಾಪ್ತಿಯ ಸುತ್ತಲಿನ 7 ಕಿಮೀ ವ್ಯಾಪ್ತಿಯ ಸುತ್ತಳತೆಯ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಗದಗ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಜಿನಗಾ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

    ನಿಯಂತ್ರಿತ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಹಾಗೂ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಕ್ಕೆ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂಧಿಸಿದೆ.

    ಕಂಟೇನ್ಮೆಂಟ್ ವಲಯದಲ್ಲಿನ ಎಲ್ಲ ದಿನಸಿ ಅಂಗಡಿಗಳು, ಹಾಲಿನ ಅಂಗಡಿಗಳು, ಮಾಂಸ, ಔಷಧ ಸೇರಿ ಎಲ್ಲ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ನಿಯಂತ್ರಿತ ವ್ಯಾಪ್ತಿ ಪ್ರದೇಶದಲ್ಲಿ ಧಾರ್ವಿುಕ ಉರುಸು, ಜಾತ್ರೆ, ಮೆರವಣಿಗೆ, ಜನ ಗುಂಪು ಸೇರುವುದು, ಸಭೆ ಅಥವಾ ಮದುವೆ ಸಮಾರಂಭಗಳನ್ನು ನಿಷೇಧಿಸಲಾಗಿದೆ.

    ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬಂಧಿತ ಇಲಾಖೆಗಳ ಮೂಲಕವೇ ಪಡೆಯಬೇಕು. ಖಾಸಗಿ ಮೂಲಗಳಿಗೆ ಅವಕಾಶವಿಲ್ಲ, ಈ ಪ್ರದೇಶಗಳ ಜನರು ಮನೆ ಬಿಟ್ಟು ಹೊರಗೆ ತಿರುಗುವುದನ್ನು ನಿಷೇಧಿಸಲಾಗಿದೆ.

    ಹುಡ್ಕೋ ಕಾಲನಿ ನಿಯಂತ್ರಿತ ಪ್ರದೇಶ

    ಗದಗ-ಬೆಟಗೇರಿ ನಗರಸಭೆಯ ವಾರ್ಡ್ 35ರ ಹುಡ್ಕೋ ಕಾಲನಿ 2ನೇ ಕ್ರಾಸ್​ನ ಸುತ್ತಲಿನ 100 ಮೀ. ಪ್ರದೇಶವನ್ನು ತಕ್ಷಣದಿಂದ ನಿಯಂತ್ರಿತ ಪ್ರದೇಶ ಎಂದು ಘೊಷಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿಯ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯ ಸುತ್ತಳತೆಯ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಲಾಗಿದೆ. ನಗರದ ಹುಡ್ಕೋ ಕಾಲನಿ ನಿವಾಸಿ 54 ವರ್ಷದ ವ್ಯಕ್ತಿ ಕರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಇವರು ಮೇ 27 ರಂದು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲ ದ್ರವದ ಪರೀಕ್ಷೆ ನಡೆಸಿದಾಗ ಕರೊನಾ ಸೋಂಕು ಇರುವುದು ಪತ್ತೆಯಾಗಿತ್ತು.

    ಕ್ವಾರಂಟೈನ್ ಕೇಂದ್ರದಿಂದ ಎಸ್ಕೇಪ್!

    ಗದಗ: ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿ ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಮುಂಬೈನಿಂದ ಗದಗ ನಗರಕ್ಕೆ ಬಂದಿದ್ದ ವ್ಯಕ್ತಿ ಕೊಪ್ಪಳದಲ್ಲಿ ಪತ್ತೆಯಾಗಿದ್ದಾನೆ. ಮುಂಬೈ-ಗದಗ ಎಕ್ಸ್​ಪ್ರೆಸ್ ರೈಲಿನ ಮೂಲಕ ಮಂಗಳವಾರ ನಗರಕ್ಕೆ ಆಗಮಿಸಿದ್ದ ಆತನಿಗೆ ಕನ್ನಡ ಭಾಷೆ ಬಾರದು. ಇಂಗ್ಲಿಷಿನಲ್ಲಿ ಮಾತನಾಡುತ್ತಾನೆ. ‘ಕ್ವಾರಂಟೈನ್​ನಲ್ಲಿ ಇರಲು ಆಗಲ್ಲ’ ಎಂದು ಈತ ಬಂದ ದಿನವೇ ಹಠ ಹಿಡಿದಿದ್ದ. ಆತನ ಅರೋಗ್ಯ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಕೊನೆಗೆ ಪೊಲೀಸರ ಸಹಾಯ ಪಡೆದು ಆತನನ್ನು ಜಿಲ್ಲಾಸ್ಪತ್ರೆ ಬಳಿ ಇರುವ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ವಿಚಿತ್ರವಾಗಿ ವರ್ತಿಸುತ್ತಿದ್ದ ಈ ವ್ಯಕ್ತಿಯನ್ನು ಕೂಡಿ ಹಾಕುವುದೇ ಸಿಬ್ಬಂದಿಗೆ ಸವಾಲು ಆಗಿತ್ತು. ಆತ ಗುರುವಾರ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದು, ಕ್ವಾರಂಟೈನ್ ಕೇಂದ್ರಕ್ಕೆ ಭದ್ರತೆ ಒದಗಿಸಲಾಗುತ್ತಿಲ್ಲವೇ ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ಗುರುವಾರ ಕ್ವಾರಂಟೈನ್ ಕೇಂದ್ರದಿಂದ ಹೊರಬಂದು ನಗರದಲ್ಲಿ ಕೆಲವು ಅಂಗಡಿಗಳಿಗೆ ಭೇಟಿ ನೀಡಿದ್ದಾನೆ. ಹೀಗಾಗಿ ನಗರದ ಜನತೆಯಲ್ಲಿ ಆತಂಕ ಮನೆಮಾಡಿದೆ.

    ನಡೆದುಕೊಂಡೇ ಹೋದ!

    ಗದಗ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಈತ ನಡೆದುಕೊಂಡೇ ಕೊಪ್ಪಳಕ್ಕೆ ತೆರಳಿದ್ದ. ಕೊಪ್ಪಳ ನಗರಕ್ಕೆ ಸಮೀಪದ ಬಾನಾಪುರ ಎಂಬ ಗ್ರಾಮದ ಬಳಿ ಈತನನ್ನು ನೋಡಿದ ಜನರಿಗೆ ಸಂಶಯ ಮೂಡಿದೆ. ಆತನನ್ನು ವಿಚಾರಿಸಿದಾಗ ಈತ ಮುಂಬೈನಿಂದ ಬಂದವನೆಂದು ತಿಳಿದು ಜಿಲ್ಲಾಡಳಿತಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಎಚ್ಚೆತ್ತ ಕೊಪ್ಪಳ ಜಿಲ್ಲಾಡಳಿತದ ಅಧಿಕಾರಗಳು ಈತನನ್ನು ಅಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ.

    ಮುಂಬೈನಿಂದ ಒಟ್ಟು 330 ಜನರ ಆಗಮನ

    ಮುಂಬೈ-ಗದಗ ಎಕ್ಸ್​ಪ್ರೆಸ್ ರೈಲಿನ ಮೂಲಕ ಶುಕ್ರವಾರ 40 ಜನರು ಗದಗ ನಗರಕ್ಕೆ ಆಗಮಿಸಿದ್ದಾರೆ. ಕಳೆದ ಮಂಗಳವಾರ 114, ಬುಧವಾರ 98, ಗುರುವಾರ 68 ಮತ್ತು ಶುಕ್ರವಾರ 40 ಸೇರಿ ನಾಲ್ಕು ದಿನಗಳಲ್ಲಿ ಒಟ್ಟು 320 ಜನರು ಬಂದಿದ್ದಾರೆ. ಇದರಲ್ಲಿ 80 ಜನರು ಬೇರೆ ಜಿಲ್ಲೆಯವರಾಗಿದ್ದು ಅವರನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ಮುಂಬೈಯಿಂದ ಬಂದು ಕ್ವಾರಂಟೈನ್​ನಲ್ಲಿರುವ ಜನರ ಗಂಟಲ ದ್ರವ ಮಾದರಿ ಪರೀಕ್ಷೆ ಮಾಡಲಾಗ್ತುದ್ದು, ಇಲ್ಲಿವರೆಗೆ 80 ಜನರ ಸ್ಯಾಂಪಲ್ ಕಳಿಸಿಕೊಡಲಾಗಿದೆ.

    ಸೋಂಕುಮುಕ್ತ 9 ಜನರು ಬಿಡುಗಡೆ

    ಗದಗ: ಕರೊನಾ ಸೋಂಕಿನಿಂದ ಗುಣವಾದ ಒಂಬತ್ತು ಜನರನ್ನು ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಎಲ್ಲರಿಗೂ ರೇಷನ್ ಕಿಟ್ ನೀಡಿ ಆಂಬುಲೆನ್ಸ್ ಮೂಲಕ ಅವರ ಮನೆಗೆ ಕಳುಹಿಸಿಕೊಡಲಾಯಿತು. ಗುಜರಾತ್​ನಿಂದ ಹಿಂದಿರುಗಿದ 62 ವರ್ಷದ ವ್ಯಕ್ತಿಯನ್ನು ಮೇ 14 ಪರೀಕ್ಷೆಗೊಳಪಡಿಸಿದ ಮೇಲೆ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಮೇ 21ರಂದು ಮುಂಬೈನಿಂದ ಬಂದಿದ್ದ 32 ವರ್ಷದ ಪುರುಷನನ್ನು ಅದೇ ದಿನ ಪರೀಕ್ಷೆ ಮಾಡಲಾಗಿತ್ತು. ಅವರಿಗೂ ಸಹ ಸೋಂಕು ಇರುವುದು ಖಚಿತವಾಗಿತ್ತು.

    ಪಿ-913 ರೋಗಿಯ ಜತೆ ದ್ವಿತೀಯ ಸಂಪರ್ಕ ಹೊಂದಿದ್ದ 50 ವರ್ಷದ ಮಹಿಳೆ, 19 ವರ್ಷದ ಯುವತಿ, 22 ವರ್ಷದ ಮಹಿಳೆ, 18 ವರ್ಷದ ಯುವಕ, 48 ವರ್ಷದ ವ್ಯಕ್ತಿ, 8 ವರ್ಷದ ಬಾಲಕ, 21 ವರ್ಷದ ಯವಕನಿಗೆ ಮೇ 23 ರಂದು ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಎಲ್ಲ ರೋಗಿಗಳನ್ನು ಅದೇ ದಿನ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ಆಸ್ಪತ್ರೆಯ ಪ್ರತ್ಯೇಕ ವಿಭಾಗದಲ್ಲಿ ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಎಲ್ಲ 9 ರೋಗಿಗಳು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಒಳರೋಗಿಯಾಗಿದ್ದ ಸಮಯದಲ್ಲಿ ಅವರಿಗೆ ಯಾವುದೇ ತೊಂದರೆಗಳು ಕಂಡುಬಂದಿಲ್ಲ ಎಂದು ಎಂದು ಜಿಮ್್ಸ ನಿರ್ದೇಶಕ ಡಾ. ಪಿ. ಎಸ್.ಭೂಸರಡ್ಡಿ ತಿಳಿಸಿದ್ದಾರೆ. ಈ ಒಂಬತ್ತು ಜನರು 14 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು ಹಾಗೂ ಆರೋಗ್ಯದಲ್ಲಿ ಏನಾದರೂ ಏರುಪೇರಾದಲ್ಲಿ ತಕ್ಷಣ ಆಸ್ಪತ್ರೆ ಸಂರ್ಪಸಬೇಕು ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಆರ್.ಟಿ. ಪಾಟೀಲ, ಡಾ. ಜಯರಾಜ ಪಾಟೀಲ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts