More

    ರೋಚಕತೆ ಸೃಷ್ಟಿಸಿದ ಜಗಳೂರು ಐಪಿಎಲ್! – ದೇವೇಂದ್ರಪ್ಪ, ರಾಜೇಶ್, ಎಸ್‌ವಿಆರ್ ನಡುವೆ ಮತ ಕಾದಾಟ

    ದಾವಣಗೆರೆ: ತ್ರಿಕೋನ ಸ್ಪರ್ಧೆಯ ಕಣವಾಗಿದ್ದ ಜಗಳೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ, ಏಳು ಕ್ಷೇತ್ರಗಳ ಪೈಕಿ ಕುತೂಹಲಕ್ಕೆ ಸಾಕ್ಷಿಯಾಗಿತ್ತು. ಕ್ಷಣಕ್ಷಣದ ಫಲಿತಾಂಶ ಕೂಡ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ನೆನಪಿಸುವಂತಿತ್ತು.
    ಬಿಜೆಪಿಯ ಶಾಸಕ ಎಸ್.ವಿ.ರಾಮಚಂದ್ರಪ್ಪ, ಕಾಂಗ್ರೆಸ್ ನ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹಾಗೂ ಕಾಂಗ್ರೆಸ್ ಬಂಡಾಯವಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮೂವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.
    ಮೊದಲ ಸುತ್ತಿನಿಂದ ಕಡೆಯ 19ನೇ ಸುತ್ತಿನ ಹಂತದವರೆಗೂ ಮೂವರ ಹಾವು ಏಣಿಯಾಟ ಮುಂದುವರಿಯುತ್ತಿತ್ತು. ಮೊದಲ, ದ್ವಿತೀಯ ಹಾಗೂ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಂತೆ ಅಖಾಡದಲ್ಲಿ ಕಂಡುಬಂದ ಮೂವರೂ ಸಿಕ್ಸ್ಸ್-ಫೋರ್‌ಗಳ ಫಲಿತಾಂಶ ನೀಡಿದ್ದು ರೋಚಕತೆ ಹೆಚ್ಚಿಸಿತ್ತು. ಯಾರು ಗೆಲ್ಲಬಹುದು ಎಂಬ ಕಾತರಕ್ಕೆ ಮೂವರೂ ಅಭ್ಯರ್ಥಿಗಳ ಪರ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಅತ್ತಿಂದಿತ್ತ ಫೀಲ್ಡಿಂಗ್ ಮಾಡುತ್ತಲೇ ಇದ್ದರು!
    ಮೊದಲ ಸುತ್ತಿನಲ್ಲಿ 3678 ಮತ ಪಡೆದು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗಮನ ಸೆಳೆದ ಎಸ್.ವಿ.ರಾಮಚಂದ್ರಪ್ಪ, ಎದುರಾಳಿ ದೇವೇಂದ್ರಪ್ಪ (3035)ಅವರಿಗಿಂತ 643 ಮತಗಳ ಮುನ್ನಡೆ ಸಾಧಿಸಿದರು. ಎಚ್‌ಪಿ.ರಾಜೇಶ್ ಕೂಡ (2096) ಹಿಂಬಾಲಿಸಿದರು.
    ಎರಡನೇ ಸುತ್ತಿನಲ್ಲಿ ಬಿ.ದೇವೇಂದ್ರಪ್ಪ (2715) ಎಚ್.ಪಿ.ರಾಜೇಶ್ (2499)ವಿರುದ್ಧ 216 ಮತಗಳ ಮುನ್ನಡೆ ಕಂಡುಕೊಂಡರು. 276 ಮತಗಳ ಅಂತರ ಕಾಯ್ದುಕೊಂಡಿದ್ದ ಎಸ್.ವಿ.ಆರ್ (2439) ಮೂರನೇ ಸ್ಥಾನದಲ್ಲಿದ್ದರು.
    ಮೂರನೇ ಸುತ್ತಿನಲ್ಲಿ ಎಸ್.ವಿ.(3218)ರಾಮಚಂದ್ರಪ್ಪ 244 ಮತಗಳಿಂದ ದೇವೇಂದ್ರಪ್ಪ (2974)ಅವರಿಗಿಂತ ಮುಂದಿದ್ದರು. 785 ಮತಗಳ ಅಂತರದಲ್ಲಿದ್ದರು ರಾಜೇಶ್. ನಾಲ್ಕನೇ ಸುತ್ತಿನಲ್ಲಿ ಎಸ್‌ವಿಆರ್(3327) ರಾಜೇಶ್ ಅವರಿಗಿಂತ 219 ಮತಗಳ ಅಂತರದಿಂದ ಮುಂದಿದ್ದರು. ದೇವೇಂದ್ರಪ್ಪ ಮೂರನೇ ಸ್ಥಾನದಲ್ಲಿದ್ದರು.
    ಐದನೇ ರೌಂಡ್‌ಗೆ ರಾಜೇಶ್(3206) ಮೊದಲ ಎಂಟ್ರಿಯಾದರು. ರಾಮಚಂದ್ರಪ್ಪ ವಿರುದ್ಧ 250 ಮತ ಅಂತರದಿಂದ ಮುನ್ನಡೆ ಸಾಧಿಸಿದ್ದರು. 483 ಮತಗಳ ಹಿಂದಷ್ಟೇ ದೇವೇಂದ್ರಪ್ಪ ರೇಸ್‌ನಲ್ಲಿದ್ದರು. ಆರನೇ ಸುತ್ತಿನಲ್ಲೂ ರಾಜೇಶ್ (3319)ಓಟ ಮುಂದುವರಿಸಿದರು. ದೇವೇಂದ್ರಪ್ಪ 438 ಮತ್ತು ಎಸ್‌ವಿಆರ್ 523 ಮತಗಳ ಅಂತರದಲ್ಲಿದ್ದರು.
    ಏಳರಲ್ಲಿ ಎಸ್‌ವಿಆರ್, 8ರಲ್ಲಿ ರಾಜೇಶ್, 9ನೇ ಸುತ್ತಿನಲ್ಲಿ ದೇವೇಂದ್ರಪ್ಪ ಮುಂದಿದ್ದರು. 10ನೇ ಸುತ್ತಿನ ವೇಳೆಗೆ ದೇವೇಂದ್ರಪ್ಪ 2984 ಮತ ಪಡೆದರೆ, ಕ್ರಮವಾಗಿ 199, 201 ಮತಗಳ ಅಂತರದಲ್ಲಿದ್ದರು ಎಸ್‌ವಿಆರ್- ರಾಜೇಶ್. 11-12ರಲ್ಲೂ ಎಸ್‌ವಿಆರ್ ಮುಂದಿದ್ದರು, 13ನೇ ಸುತ್ತು ರಾಜೇಶ್, 14-15-16ರಲ್ಲಿ ದೇವೇಂದ್ರಪ್ಪ ಪರ ಮತಗಳ ಸುರಿಮಳೆಯಾಯಿತು.
    17ನೇ ಸುತ್ತಿನಲ್ಲಿ ರಾಜೇಶ್ ಅವರು ದೇವೇಂದ್ರಪ್ಪ ಅವರಿಗಿಂತ 34 ಮತಗಳ ಮುನ್ನಡೆಯಲ್ಲಿದ್ದರು. 18ರಲ್ಲಿ ಈ ಅಂತರ 1 ಸಾವಿರ ತಲುಪಿತು. 19ನೇ ಸುತ್ತಿನಲ್ಲಿ ರಾಜೇಶ್ (2124), ಎಸ್‌ವಿಆರ್ (1975) ಅವರಿಗಿಂತ 149 ಮತಗಳ ಮುನ್ನಡೆ ಸಾಧಿಸಿದರು. 745 ಮತಗಳ ಹಿನ್ನಡೆಯಲ್ಲಿದ್ದರು.
    ಅಂಚೆ ಮತಗಳ ಎಣಿಕೆಯಲ್ಲಿ (519) ರಾಜೇಶ್ ಮುಂದಿದ್ದರು. ಎಸ್‌ವಿಆರ್ 400ಮತ ಗಳಿಸಿದರು. 438 ಮತ ಗಳಿಸಿದ ದೇವೇಂದ್ರಪ್ಪ ಅವರಿಗೆ ಅಂತಿಮವಾಗಿ ವಿಜಯಲಕ್ಷ್ಮೀ ಒಲಿದಳು.
    —————

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts