More

    ರೋಣ, ಗಜೇಂದ್ರಗಡ ತಾಲೂಕಿನಲ್ಲಿ ವಾಡಿಕೆಗಿಂತ ಹತ್ತು ಪಟ್ಟುಮಳೆ ಹೆಚ್ಚಳ

    ರೋಣ: ರೋಣ ಹಾಗೂ ಗಜೇಂದ್ರಗಡ ಅವಳಿ ತಾಲೂಕಿನಾದ್ಯಂತ ಸೆ. 1ರಿಂದ 9ರವರೆಗೆ ವಾಡಿಕೆಗಿಂತ ಹತ್ತು ಪಟ್ಟು ಹೆಚ್ಚು ಮಳೆ ಸುರಿದ ಪರಿಣಾಮ ಕೃಷಿ, ತೋಟಗಾರಿಕೆ ಹಾಗೂ ರಸ್ತೆಗಳು ಹಾಳಾಗಿದ್ದು, ಅಪಾರ ನಷ್ಟ ಸಂಭವಿಸಿದೆ.

    ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆ ಮಳೆ 23 ಎಂಎಂ ಇದ್ದರೆ ಈ ವರ್ಷ ಈಗಾಗಲೇ 118 ಎಂಎಂ ಮಳೆ ಸುರಿದು ಈ ಭಾಗದಲ್ಲಿ ದಾಖಲೆಯಾಗಿದೆ.

    23287 ಹೆಕ್ಟೇರ್ ಕೃಷಿ ಪ್ರದೇಶ, 10239 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಳಾಗಿದೆ. ಹಲವೆಡೆ ಬೆಳೆಗಳು ಜಾಲಾವೃತವಾಗಿದ್ದು, ನೀರು ಹರಿದು ಹೋದ ನಂತರ ಕೃಷಿ ಅಧಿಕಾರಿಗಳು ಸಮೀಕ್ಷೆ ನಡೆಸುವರು. ಆನಂತರವೇ ಹಾನಿ ಪ್ರದೇಶ ಮತ್ತಷ್ಟು ಹೆಚ್ಚಳವಾಗಲಿದೆ.

    ಸತತ ಮಳೆಗೆ ಅಧಿಕ ತೇವಾಂಶದಿಂದ ಬಾಳೆ, ಈರುಳ್ಳಿಗೆ ಕೊಳೆ ರೋಗ ಕಾಣಿಸಿಕೊಂಡು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಲೂಕಿನ ಮಲಪ್ರಭೆ ದಡದಲ್ಲಿ ಬರುವ ಬೆನಹಾಳ, ಹುನಗುಂಡಿ ಸೇರಿ ಅನೇಕ ಗ್ರಾಮಗಳಲ್ಲಿ ಬಾಳೆ ಗಿಡಗಳು ಕೊಳೆತು ಹೋಗಿವೆ. ಅವುಗಳನ್ನು ತೆರವುಗೊಳಿಸುವುದೇ ರೈತರಿಗೆ ಬಹು ದೊಡ್ಡ ಕೆಲಸವಾಗಲಿದೆ.

    ಇನ್ನು ಬೆನಹಾಳ, ಹುನಗುಂಡಿ, ಅಸೂಟಿ, ಮುದೇನಗುಡಿ, ಚಿಕ್ಕಮಣ್ಣೂರ, ಸಂದಿಗವಾಡಿ, ಸವಡಿ, ಮಲ್ಲಾಪೂರ, ಕೌಜಗೇರಿ ಕೆಲ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಹಾನಿಯಾಗಿದೆ. ಅವಳಿ ತಾಲೂಕಿನಾದ್ಯಂತ ಇನ್ನೂ ಕೆಲ ದಿನಗಳವರೆಗೆ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಅವಳಿ ತಾಲೂಕಿನ ಬಹುತೇಕ ಕೆರೆ, ಕಟ್ಟೆಗಳು ಭರ್ತಿಯಾಗಿವೆ, ಕೆರೆಗಳ ಕೋಡಿ ಬಿದ್ದಿರುವುದರಿಂದ ಅಪಾರ ಹಾನಿಯಾಗಿದೆ. ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಇದೇ ರೀತಿ ಮಳೆ ಮುಂದುವರಿದರೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts