More

    ರೈತ ವಿರೋಧಿ ಕಾಂಗ್ರೆಸ್ ಸರ್ಕಾರ

    ಚಿತ್ರದುರ್ಗ: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಅನೇಕ ಯೋಜನೆ ಈಗಿನ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ರೈತ ವಿರೋಧಿ ಧೋರಣೆ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟಕ್ಕೂ ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಎಚ್ಚರಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಿದ್ದ ಅವಧಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಎದುರಿಸಿದ ವೇಳೆ ಕ್ರಮವಾಗಿ 10 ಸಾವಿರ ರೂ., 13,500 ರೂ. ರೈತರಿಗೆ ವಿತರಿಸಲಾಗಿತ್ತು. ಈಗಿನ ಸಿಎಂಗೆ ಬರಗಾಲದ ಜ್ಞಾನವೇ ಇಲ್ಲ. ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಬಿಜೆಪಿ ಅವಧಿಯಲ್ಲಿ ರೈತ ಮಕ್ಕಳ ಶಿಕ್ಷಣಕ್ಕಾಗಿ ಜಾರಿಯಲ್ಲಿದ್ದ ಸ್ಕಾಲರ್‌ಶಿಪ್ ರದ್ದಾಗಿದೆ. ಜಲಕ್ಷಾಮ ಉಂಟಾಗಿದ್ದು, ಜನ ಪರಿತಪಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಸಾಕಷ್ಟು ಬೆಳೆಗಳು ಒಣಗಿವೆ. ಆದರೂ ರೈತರ ತಾಕುಗಳಿಗೆ ಭೇಟಿ ನೀಡಿಲ್ಲ. ಹಾಲಿನ ಪ್ರೋತ್ಸಾಹಧನ 716 ಕೋಟಿ ರೂ. ಉಳಿಸಿಕೊಂಡಿದೆ. ಬಿಜೆಪಿ ಪ್ರತಿಭಟನೆ ಬಳಿಕ 1 ತಿಂಗಳದ್ದು ಮಾತ್ರ ವಿತರಿಸಿದೆ ಎಂದು ದೂರಿದರು.

    ಬಿಎಸ್‌ವೈ ಅವಧಿಯಲ್ಲಿ ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ., ಬಹುವಾರ್ಷಿಕ ಬೆಳೆಗಳಿಗೆ 18 ಸಾವಿರದ ಜೊತೆಗೆ 10 ಸಾವಿರ ರೂ. ಸೇರಿ 28 ಸಾವಿರ ರೂ. ಎರಡು ಕಂತಿನಲ್ಲಿ ರೈತರಿಗೆ ನೀಡಿ ನೆರವಿಗೆ ಧಾವಿಸಲಾಗಿತ್ತು. ಬರಗಾಲ ಘೋಷಣೆಯಾಗಿ 6 ತಿಂಗಳಾಗಿದೆ. ಪರಿಹಾರ ಇನ್ನೂ ಅನೇಕರಿಗೆ ತಲುಪಿಲ್ಲ. ಕೇಂದ್ರ ಮೇಲೆ ಆರೋಪಿಸಿ ರೈತರನ್ನು ದಿಕ್ಕು ತಪ್ಪಿಸುವಲ್ಲಿ ಕೈ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ರಾಜ್ಯಕ್ಕೆ 639 ಕೋಟಿ ರೂ. ಬಂದಿದ್ದು, ಅದನ್ನು ಬಿಟ್ಟರೆ ರಾಜ್ಯ ಸರ್ಕಾರದಿಂದ ನಯಾ ಪೈಸೆಯೂ ರೈತರಿಗೆ ಸಿಕ್ಕಿಲ್ಲ. ತಕ್ಷಣ ರೈತರಿಗೆ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

    ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮುಖಂಡರಾದ ಮಲ್ಲಿಕಾರ್ಜುನ್, ಬಾಳೇಕಾಯಿ ರಾಮದಾಸ್, ರಾಜೇಶ್ ಬುರುಡೆಕಟ್ಟೆ, ವೆಂಕಟೇಶ್‌ಯಾದವ್, ಸೂರನಹಳ್ಳಿ ನಾಗರಾಜ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ನವೀನ್, ಶ್ಯಾಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts