More

    ರೈತ ವಿರೋಧಿ ಕಾಂಗ್ರೆಸ್ ಸರ್ಕಾರ

    ಬೀದರ್: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ ರೈತರಿಗೆ ಕೇಂದ್ರದ ಜತೆಗೆ ರಾಜ್ಯ ಸರ್ಕಾರದಿಂದ ನೀಡುತ್ತಿದ್ದ ನಾಲ್ಕು ಸಾವಿರ ರೂ. ಹೆಚ್ಚುವರಿ ಪ್ರೋತ್ಸಾಹಧನ ನಿಲ್ಲಿಸಿರುವ ಕಾಂಗ್ರೆಸ್ ಸರ್ಕಾರದ ನಿರ್ಣಯ ರೈತ ವಿರೋಧಿಯಾಗಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.

    ಕಿಸಾನ್ ಯೋಜನೆಯಡಿ ರಾಜ್ಯ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹಧನ ಮುಂದುವರಿಸುತ್ತೀರಾ ಅಥವಾ ನಿಲ್ಲಿಸುತ್ತೀರಾ ಎಂದು ಅಧಿವೇಶನದಲ್ಲಿ ಶಾಸಕರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ತಡವರಿಸಿ ಸಮರ್ಪಕ ಉತ್ತರ ನೀಡಿಲ್ಲ. ಅವರ ಮಾತಿನಲ್ಲಿ ನಿಲ್ಲಿಸಲಿದ್ದೇವೆ ಎಂಬ ಉತ್ತರ ಕಾಣುತ್ತಿತ್ತು. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನ್ಯಾಯವಾಗಲಿದೆ. ಯಾವ ಕಾರಣಕ್ಕೂ ಪ್ರೋತ್ಸಾಹ ಧನ ನಿಲ್ಲಿಸಬಾರದು ಎಂದು ಆಗ್ರಹಿಸಿದ್ದಾರೆ.

    ಪ್ರತಿವರ್ಷ ಕೇಂದ್ರ ಸರ್ಕಾರದ ೬ ಸಾವಿರ ರೂ. ಜತೆಗೆ ಹಿಂದಿನ ಬಿಜೆಪಿ ಸರ್ಕಾರ ೪೦೦೦ ರೂ. ನೀಡುತ್ತಿದ್ದರಿಂದ ರಾಜ್ಯದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು. ರಾಜ್ಯದ ೫೭ ಲಕ್ಷ ರೈತರಿಗೆ ೫,೯೦೦ ಕೋಟಿ ರೂ. ಪ್ರೋತ್ಸಾಹಧನ ರಾಜ್ಯ ಸರ್ಕಾರದಿಂದ ಬಂದಿದೆ. ಇದರಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ೨,೬೨,೩೯೨ ರೈತರ ಖಾತೆಗೆ ೨೨೦.೬೦ ಕೋಟಿ ರೂ. ನೇರವಾಗಿ ಜಮೆಯಾಗಿದೆ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ಸರ್ಕಾರ ರೈತರ ಪ್ರೋತ್ಸಾಹಧನ ನಿಲ್ಲಿಸುವ ಕ್ರಮವನ್ನು ರಾಜ್ಯದ ಎಲ್ಲ ರೈತ ಮುಖಂಡರು ವಿರೋಧಿಸಬೇಕು. ಜಿಲ್ಲೆಯ ಇಬ್ಬರು ಸಚಿವರು ಏನು ಮಾಡುತ್ತಿದ್ದಾರೆ? ಸರ್ಕಾರದ ಕ್ರಮವನ್ನು ಖಂಡಿಸಿ ರೈತರ ಪರವಾಗಿ ನಿಲ್ಲಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ನಿಮ್ಮನ್ನು ಜಿಲ್ಲೆಗೆ ಬರಲು ಬಿಡುವುದಿಲ್ಲ ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

    ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರದ ಜತೆ ರಾಜ್ಯ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹಧನ ನಿಲ್ಲಿಸುವುದು ಬೇಡ. ನಿರ್ಲಕ್ಷ್ಯ ಮಾಡಿದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿ ಜಿಲ್ಲೆಯಲ್ಲೂ ಹೋರಾಟ ಮಾಡಲಾಗುವುದು.
    | ಭಗವಂತ ಖೂಬಾ
    ಕೇಂದ್ರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts