More

    ರೈತ ಕಲ್ಯಾಣಕ್ಕೆ ಯೋಜನೆಗಳೇನು? ಸರ್ಕಾರಕ್ಕೆ ಇಮ್ಮಡಿ ಬಸವರಾಜ ಸ್ವಾಮೀಜಿ ಪ್ರಶ್ನೆ

    ಮಾಗಡಿ : ರೈತರು ಸಂಪನ್ಮೂಲ ವ್ಯಕ್ತಿಗಳಾಗುವವರೆಗೆ ದೇಶ ಅಭಿವೃದ್ಧಿ ಆಗುವುದಿಲ್ಲ ಎಂದು ಜಡೆದೇವರ ಮಠಾಧ್ಯಕ್ಷ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ ಹೇಳಿದರು.
    ಪಟ್ಟಣದ ಕಲ್ಯಾ ಗೇಟ್ ವೃತ್ತದಲ್ಲಿ ತಾಲೂಕು ರೈತ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಗಳಿಗೆ ಅನ್ನದಾತನ ಬಗ್ಗೆ ಗೌರವವಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರಿಗೆ ಸೇರಬೇಕಾದ ಸೌಲಭ್ಯಗಳು ತಲುಪುತ್ತಿಲ್ಲ. ರೈತರ ಕಲ್ಯಾಣಕ್ಕೆ ಸರ್ಕಾರದ ಯೋಜನೆಗಳೇನು ಎಂದು ಪ್ರಶ್ನಿಸಿದರು.
    ಪ್ರೋತ್ಸಾಹಧನದಲ್ಲಿ ರಾಗಿ ಖರೀದಿಸಿ ವಿತರಿಸಿದರೆ ರೈತರಿಗೆ ನೆರವಾಗುತ್ತದೆ. ರೈತ ನೆಮ್ಮದಿಯಿಂದ ಬದುಕು ಸಾಗಿಸಲು ಆಗುತ್ತಿಲ್ಲ. ಅವರ ನೋವು ಕೇಳುವವರಿಲ್ಲದಂತಾಗಿದೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
    ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತರ ದುಃಖ ದುಮ್ಮಾನ ಕೇಳುವ ಮನಸ್ಸು ಇದ್ದಾಗ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ಆ ಕೆಲಸವನ್ನು ಮಾಗಡಿ ತಾಲೂಕು ರೈತ ಸಂಘ ಮಾಡುತ್ತಿದೆ. ದೇಶದ ಪ್ರತಿಯೊಬ್ಬರನ್ನೂ ಸಾಕುವ ಜವಾಬ್ದಾರಿಯನ್ನು ರೈತರು ಹೊತ್ತಿದ್ದಾರೆ. 2 ವರ್ಷ ರೈತರು ತಮ್ಮ ಕೆಲಸಕ್ಕೆ ರಜೆ ಹಾಕಿದರೆ ಎಲ್ಲರೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ರೈತರ ವಿಷಯದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ನಿಸ್ವಾರ್ಥದಿಂದ ಕೆಲಸ ಮಾಡಿದಾಗ ಅನ್ನದಾತ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದರು.
    ಉಪಾಧ್ಯಕ್ಷ ಎಂ.ರಾಮು ಮಾತನಾಡಿ, ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ನಮ್ಮ ಕಷ್ಟ ಕೇಳುವ ಯೋಗ್ಯತೆ ಜನಪ್ರತಿನಿಧಿಗಳಿಗೆ ಇಲ್ಲದಾಗಿದೆ. ಕೇಂದ್ರ ಸರ್ಕಾರ ಮಾರಕವಾದ ಕೃಷಿ ಕಾಯ್ದೆಯನ್ನು ತಂದು ರೈತರನ್ನು ಕಷ್ಟಕ್ಕೆ ದೂಡುತ್ತಿದೆ ಎಂದರು.
    ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ದೆಹಲಿಯಲ್ಲಿ ಕಳೆದ 72 ದಿನಗಳಿಂದ ರೈತರು ಕೃಷಿ ಕಾಯ್ದೆ ತಿದ್ದುಪಡಿಯ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ. ರೈತರು ಹೋರಾಟ ತೀವ್ರಗೊಳಿಸಿದರೆ ಎಂತಹುದೇ ಸರ್ಕಾರವಿದ್ದರೂ ಧೂಳೀಪಟವಾಗುತ್ತದೆ ಎಂದು ಎಚ್ಚರಿಸಿದರು.
    ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ಅನೇಕ ವರ್ಷಗಳಿಂದ ರೈತರ ಬಗ್ಗೆ ಚರ್ಚೆ ನಡೆಯುತ್ತಿದೆ, ರೈತ ಮುಖಂಡರು, ಸಂಸದರು, ಸಚಿವರು, ಶಾಸಕರಾಗಿದ್ದಾರೆ, ಆದರೂ ಬದಲಾವಣೆಗಳು ನಡೆದಿಲ್ಲ. ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಋಣಮುಕ್ತ ಪತ್ರ ಕೊಡಬೇಕು ಎಂದು ಆಗ್ರಹಿಸಿದರು.
    ಸನ್ಮಾನ: ಪ್ರಗತಿಪರ ರೈತರಾದ ಉಮೇಶ್, ಕವಿತಾ ಸಂಪತ್, ಲಕ್ಷ್ಮಮ್ಮ, ಧನುಷ್, ಹೊನ್ನೇಗೌಡ, ಪ್ರಭು, ಶಂಕರಯ್ಯ, ಗಂಗಾಧರಯ್ಯ ಮುಂತಾದವರನ್ನು ಸನ್ಮಾನಿಸಲಾಯಿತು.
    ತಾಲೂಕು ರೈತ ಸಂಘದ ಪ್ರಧಾನ ಕಾರ‌್ಯದರ್ಶಿ ಮಧುಗೌಡ, ನೇಸೇಪಾಳ್ಯ ಮಂಜುನಾಥ್, ಕರೇನಹಳ್ಳಿ ಲೋಕೇಶ್, ರಂಗಸ್ವಾಮಿ, ಪುಟ್ಟಯ್ಯ, ಚನ್ನರಾಯಪ್ಪ, ಪುಟ್ಟಯ್ಯ, ಹನುಮಂತು, ರವಿಕುಮಾರ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts