More

    ರೈತ ಕಲ್ಯಾಣಕ್ಕೆ ಪ್ರಾಮಾಣಿಕ ಪ್ರಯತ್ನ

    ಬೆಳಗಾವಿ: ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ಸ್ಥಳೀಯ ಮಟ್ಟದಲ್ಲಿ ಯುವಕರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಸಕ್ಕರೆ ಕಾರ್ಖಾನೆ ನಿರ್ಮಿಸುತ್ತಿದ್ದೇನೆ. ರೈತ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಭರವಸೆ ನೀಡಿದರು.

    ಖಾನಾಪುರ ತಾಲೂಕಿನ ಹಲಗಾ ಗ್ರಾಮದಲ್ಲಿ ‘ಅಂಜಲಿತಾಯಿ ಕೇನ್ಸ್ ಪ್ರೈವೇಟ್ ಲಿಮಿಟೆಡ್’ ಸಕ್ಕರೆ ಕಾರ್ಖಾನೆಯ 90 ಕೆಎಲ್ಪಿಡಿ ಸಾಮರ್ಥ್ಯದ ಡಿಸ್ಟಿಲರಿ ಹಾಗೂ 3 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಇನ್ಸಿನರೇಷನ್ ಬಾಯ್ಲರ್ ಘಟಕ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ಬೆಳೆಗಾರರಿಗೆ ಪ್ರೋತ್ಸಾಹ: ಖಾನಾಪುರ ತಾಲೂಕಿನ ರೈತರು ಬೆಳೆದ ಕಬ್ಬನ್ನು ದೂರದ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗೆ ಸಾಗಿಸುತ್ತಿದ್ದರು. ಇದರಿಂದ ಸಾಗಣೆ ವೆಚ್ಚ ಅಧಿಕವಾಗಿ, ಸಕಾಲಕ್ಕೆ ಬಿಲ್ ಕೈಗೆಟುಕದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಅದರಿಂದಾಗಿ ಹಲವು ರೈತರು ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದರು. ಹಾಗಾಗಿ ಕಬ್ಬು ಬೆಳೆಗಾರರಿಗಿರುವ ಸಮಸ್ಯೆ ನೀಗಿಸಲು ಹಾಗೂ ಕಬ್ಬು ಬೆಳೆಗೆ ಪ್ರೋತ್ಸಾಹ ನೀಡಲು ನಾನೇ ಕಾರ್ಖಾನೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಈ ಕಾರ್ಖಾನೆ ನಿರ್ಮಾಣದ ಬಳಿಕ ಸದುಪಯೋಗ ಮಾಡಿಕೊಂಡು ಕಬ್ಬು ಬೆಳೆಗಾರರು ಆರ್ಥಿಕವಾಗಿ ಸದೃಢವಾಗಬೇಕು ಎಂದು ಹೇಳಿದರು.

    ಶೀಘ್ರ ಪರಿಹಾರ: ಅತಿವೃಷ್ಟಿಯಿಂದ ಖಾನಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದೇನೆ. ಪ್ರವಾಹದಿಂದ ಹಾನಿಗೆ ಒಳಗಾಗಿದ್ದ ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಶಾಸಕಿ ಡಾ. ಅಂಜಲಿ ತಿಳಿಸಿದರು.

    ಶಾಸಕಿ ಅಂಜಲಿ ಅವರ ಪತಿ ಐಜಿಪಿ ಹೇಮಂತ ನಿಂಬಾಳ್ಕರ್, ಕಾಂಗ್ರೆಸ್ ಮುಖಂಡರಾದ ಮಹಾದೇವ ಕೋಳಿ, ಮಧುಕರ ಕವಳೇಕರ, ಅನಿತಾ ದಂಡಗಲ, ಭೂಷಣ ಪಾಟೀಲ, ಕಿರಣ ಕಡೋಲಿ, ಮಹಾಂತೇಶ ಕಲ್ಯಾಣಿ, ಅನಿಲ ಸುತಾರ, ಸಂಗು ವಾಲಿ, ಆರ್.ಡಿ. ಹಂಜಿ, ಕೆ.ತಮ್ಮಣ್ಣ, ಪಾಂಡುರಂಗ ಪಾಟೀಲ, ಅರುಣ ಬೆಳಗಾಂವ್ಕರ್, ಸಂದೀಪ ದೇಸಾಯಿ, ಬಿ.ಪಿಂಟೋ, ರಾಜಾರಾಮ ದೇಸಾಯಿ, ದುರ್ಗೇಶ ತಳವಾರ, ಸುನೀಲ ಪವಾರ, ನಾಮದೇವ ಗುರವ, ಮಹಾಂತೇಶ ರಾವುತ್, ಬಿ.ಸಾವ್ಕಾರ ಇತರರು ಇದ್ದರು.

    ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ

    ಹಲವು ಅಡ್ಡಿ-ಆತಂಕದ ಮಧ್ಯೆಯೂ ಖಾನಾಪುರ ಕ್ಷೇತ್ರದ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುತ್ತಿದ್ದೇನೆ. ಎಲ್ಲ ವರ್ಗಗಳ ಜನರ ಸಂಕಷ್ಟಕ್ಕೂ ಮಿಡಿಯುತ್ತಿದ್ದೇನೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಒತ್ತು ನೀಡಿದ್ದೇನೆ. ಗ್ರಾಮೀಣ ಭಾಗದ ಜನರಿಗೆ ಸಕಾಲಕ್ಕೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಲು ಶ್ರಮಿಸುತ್ತಿದ್ದೇನೆ. ಪ್ರವಾಸೋದ್ಯಮ ಬೆಳವಣಿಗೆಗೆ ಯೋಜನೆ ರೂಪಿಸುತ್ತಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ನನ್ನ ಕ್ಷೇತ್ರದ ಜನರು ಕರೊನಾ ಹಾವಳಿ ತಗ್ಗಿದೆ ಎಂದು ನಿರ್ಲಕ್ಷ್ಯ ಮಾಡಬಾರದು. ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳುವಿಕೆಗೆ ಆದ್ಯತೆ ನೀಡಬೇಕು. ಸಾಮುದಾಯಿಕ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕೋವಿಡ್-19 ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕಿ ಅಂಜಲಿ ಕರೆ ನೀಡಿದರು.

    ಸರಳವಾಗಿ ಜನ್ಮದಿನ ಆಚರಣೆ

    ಡಾ.ಅಂಜಲಿ ನಿಂಬಾಳ್ಕರ್ ಅವರು ಹಲಗಾದಲ್ಲಿ ಭಾನುವಾರ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಕರೊನಾ ಹಿನ್ನೆಲೆಯಲ್ಲಿ
    ಅದ್ದೂರಿ ಕಾರ್ಯಕ್ರಮದ ಬದಲಾಗಿ ಸರಳವಾಗಿ ಜನ್ಮದಿನ ಆಚರಿಸಿಕೊಂಡರು. ಪತಿ ಹೇಮಂತ ನಿಂಬಾಳ್ಕರ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನೂರಾರು ಅಭಿಮಾನಿಗಳು ಶುಭ ಹಾರೈಸಿದರು.

    ಗಡಿಭಾಗದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಶ್ರಮವಹಿಸಿ ದುಡಿಯುತ್ತಿದ್ದಾರೆ. ನನ್ನೊಂದಿಗೆ ಕ್ಷೇತ್ರಾದ್ಯಂತ ಸಂಚರಿಸಿ ಜನರಿಗೆ ನೆರವಾಗುತ್ತಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಜನರ ಸೇವೆ ಮಾಡುತ್ತಿದ್ದಾರೆ. ಅವರಿಗೆ ನಾನು ಸದಾ ಕೃತಜ್ಞಳಾಗಿರುವೆ.
    | ಡಾ.ಅಂಜಲಿ ನಿಂಬಾಳ್ಕರ್ ಖಾನಾಪುರ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts