More

    ರೈತರ ಹೋರಾಟ ಕಡೆಗಣನೆ ಗುರುತರ ಅಪರಾಧ

    ಕೋಲಾರ: ಕೃಷಿ ಕಾಯ್ದೆ ವಾಪಸ್‌ಗೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಎರಡು ತಿಂಗಳ ರೈತರ ಹೋರಾಟವನ್ನು ಕೇಂದ್ರ ಸರ್ಕಾರ ಕಡೆಗಣಿಸಿರುವುದು ಗುರುತರ ಅಪರಾಧ ಎಂದು ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಆರೋಪಿಸಿದರು.

    ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಭಾನುವಾರ ಹಮ್ಮಿಕೊಂಡಿದ್ದ 55ನೇ ರಾಜ್ಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಕೃಷಿ ಸಂಬಂಧಿತ ನೂತನ ಕಾಯ್ದೆಗಳು ರೈತರಿಗೆ ಮಾರಕ. ಸರ್ವ ಪಕ್ಷಗಳ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ರೈತರ ಬೇಡಿಕೆಗಳಿಗೆ ಸ್ಪಂದಿಸುವ ಸುಳಿವು ನೀಡಿದ್ದಾರೆ ಎಂದರು.

    ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡವರು ಕ್ರೀಡಾ ಸ್ಫೂರ್ತಿ ಮತ್ತು ಸತತ ಅಭ್ಯಾಸದಿಂದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗೆದ್ದು ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಎಚ್.ನಾಗೇಶ್ ಮಾತನಾಡಿ, ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಮಿನಿ ಕ್ರೀಡಾಂಗಣದ ನೆಲಹಾಸು ಸರಿಪಡಿಸುವ ಬಗ್ಗೆ ಕ್ರೀಡಾ ಸಚಿವ ನಾರಾಯಣಗೌಡ ಜತೆ ಚರ್ಚಿಸಿ ಮಂಜೂರು ಮಾಡಿಸಿಕೊಡುವುದಾಗಿ ಪ್ರಕಟಿಸಿದರು.

    ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ರಾಜವೇಲು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್, ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಜಗನ್ನಾಥನ್, ಕಾರ್ಯದರ್ಶಿ ಕೆ.ಜಯದೇವ್, ಚಿಕ್ಕಬಳ್ಳಾಪುರ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ರಾಮಪ್ರಸಾದ್, ಪಲ್ಲವಿ ಮಣಿ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಡಾ.ಶಿವಣ್ಣ, ಎಲ್.ಎ.ಮಂಜುನಾಥ್, ಪ್ರಸಾದ್‌ಬಾಬು, ಕುಮಾರ್ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಜಿ.ಬಿಂದುರಾಣಿ, ಎಲ್.ಭಾರತಿ ಅವರನ್ನು ಸನ್ಮಾನಿಸಲಾಯಿತು.

    ಗುಡ್ಡಗಾಡು ಓಟ: ಮುಂಜಾನೆ 7.30ರಿಂದ ವಡಗೂರು ಗೇಟ್‌ನಿಂದ ಪುರುಷರ 10 ಕಿ.ಮೀ, ಡಿಸಿ ಕಚೇರಿ ಮುಂಭಾಗದಿಂದ ಪುರುಷರ 8 ಕಿ.ಮೀ, ಟಮಕದಿಂದ ಬಾಲಕ, ಬಾಲಕಿಯರ 6 ಕಿ.ಮೀ, ಗುಪ್ತ ಕಾಲೇಜು ಮುಂಭಾಗದಿಂದ 4 ಕಿ.ಮೀ , ಮೆಕ್ಕೆ ವೃತ್ತದಿಂದ ಬಾಲಕ ಬಾಲಕಿಯರ 2 ಕಿ.ಮೀ ಸ್ಪರ್ಧೆಗಳಲ್ಲಿ 600ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
    10 ಕಿ.ಮೀ ಓಟದಲ್ಲಿ ಪುರುಷರ ವಿಭಾಗದಲ್ಲಿ ಎಚ್.ಎ.ಎಲ್‌ನ ಪರಸಪ್ಪ, ಮಹಿಳಾ ವಿಭಾಗದಲ್ಲಿ ಮೂಡಬಿದರೆ ಆಳ್ವಾಸ್‌ನ ಕೆ.ಅರ್ಚನಾ ಪ್ರಥಮ, ಪುರುಷರ ವಿಭಾಗದಲ್ಲಿ ಆರ್ಮಿ ಸ್ಫೋರ್ಟ್ಸ್ ಕ್ಲಬ್ ಮತ್ತು ಮಹಿಳೆಯರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ತಂಡ ಗುಡ್ಡಗಾಡು ಕ್ರೀಡಾಕೂಟದ ಚಾಂಪಿಯನ್ ಆಗಿ ಹೊರ ಹೊಮ್ಮಿತು.

    ಪ್ರಮುಖರಿಂದ ಟೀಕೆ: ಸ್ಪರ್ಧೆ ಆಯೋಜಿಸಿ ಗುಡ್ಡಗಾಡು ಪ್ರದೇಶ ಅಥವಾ ಕನಿಷ್ಠ ಪಕ್ಷ ಗ್ರಾಮೀಣ ಭಾಗದಲ್ಲಿ ಓಟ ಆಯೋಜಿಸದೆ ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಪ್ರಮುಖ ರಸ್ತೆಗಳು, ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ಆಯೋಜಿಸಿದ್ದಕ್ಕೆ ಕ್ರೀಡಾಪಟುಗಳು, ಪಾಲಕರಿಂದ ಟೀಕೆ ವ್ಯಕ್ತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts