More

    ರೈತರ ಮೇಲೆ ಕೇಸ್ ರಾಜಕೀಯ ಪ್ರೇರಿತ

    ಸಾಗರ: ಮಡಸೂರು ಗ್ರಾಮದ ಏಳು ರೈತರ ವಿರುದ್ಧ ತಹಸೀಲ್ದಾರ್ ದಾಖಲಿಸಿರುವ ಕೊಲೆಯತ್ನ ಪ್ರಕರಣ ರಾಜಕೀಯ ಪ್ರೇರಿತವಾದದ್ದು ಎಂದು ಡಾ. ಎಚ್.ಗಣಪತಿಯಪ್ಪ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಆರೋಪಿಸಿದ್ದಾರೆ.

    ಮಡಸೂರು ಗ್ರಾಮದ ಏಳು ಜನ ರೈತರ ಮೇಲೆ ಕೊಲೆ ಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಭೂಕಬಳಿಕೆ ಇತರ ಗಂಭೀರ ಪ್ರಕರಣಗಳಡಿ ಬಂಧಿಸಿದ್ದಾರೆ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮಡಸೂರು ಗ್ರಾಮದ ಸರ್ವೇ ನಂ. 71ರಲ್ಲಿ 7ಜನ ರೈತರಿಗೆ ನೆಲಕಿಮ್ಮತ್ತು ಪಾವತಿಸಿಕೊಂಡು ದರಕಾಸ್ತು ಅಡಿ ಭೂಮಿ ಮಂಜೂರು ಆಗಿದೆ. ಇದಕ್ಕೆ ಸಂಬಂಧಪಟ್ಟ ರಸೀದಿ ರೈತರ ಬಳಿ ಇದೆ. ಹಿಂದೆ ರೈತರ ಜಮೀನು ಸರ್ವೇ ಮಾಡಿ ನಕ್ಷೆ ತಯಾರಿಸಲು ಎಡಿಎಲ್‌ಆರ್‌ಗೆ ಪತ್ರ ಸಹ ಬರೆಯಲಾಗಿದೆ. ಆದರೂ ರೈತರಿಗೆ ಸಾಗುವಳಿಪತ್ರ ನೀಡಿರಲಿಲ್ಲ. ರೈತರು 09-11-2020ರಂದು ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಈ ರೈತರು ತಮಗೆ ಸಾಗುವಳಿ ಚೀಟಿ ಕೊಟ್ಟಿಲ್ಲ ಎನ್ನುವ ವಿಚಾರವನ್ನು ಗಮನಕ್ಕೆ ತಂದಿದ್ದರು. ಆದರೆ ತಹಸೀಲ್ದಾರ್ ರೈತರ ಸುಪರ್ದಿಯಲ್ಲಿರುವ ಜಮೀನಿಗೆ ಟ್ರೆಂಚ್ ಹೊಡೆಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ರೈತರು ತಗಾದೆ ತೆಗೆದಿದ್ದಾರೆ. ಇದನ್ನೇ ದೊಡ್ಡದ್ದು ಮಾಡಿ ಏಳು ರೈತರ ಮೇಲೆ ಬೇರೆ, ಬೇರೆ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ರೈತರನ್ನು ಜೈಲಿಗೆ ಕಳಿಸಿರುವ ಹಿಂದೆ ದುರುದ್ದೇಶ ಹಾಗೂ ರಾಜಕೀಯ ಒತ್ತಡ ಇರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ ಎಂದು ದೂರಿದರು.
    ರೈತರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜು. 24ರಂದು ಜೈಲ್‌ಭರೋ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ. ಸಾಗರ ಪೇಟೆ ಠಾಣೆ ವೃತ್ತದಿಂದ ಸಬ್ ಜೈಲ್‌ವರೆಗೆ ಪ್ರತಿಭಟನೆ ನಡೆಸಿ ನಮ್ಮನ್ನು ಜೈಲಿಗೆ ಕಳುಹಿಸಿ ಎಂಬ ಹಕ್ಕೊತ್ತಾಯ ಮಂಡಿಸಲಾಗುತ್ತದೆ. ಸುಳ್ಳು ದೂರಿನಡಿ ರೈತರನ್ನು ಬಂಧಿಸಿರುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು. ರೈತರ ಮೇಲೆ ದಾಖಲು ಮಾಡಿರುವ ಸುಳ್ಳು ದೂರನ್ನು ಹಿಂದಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
    ರೈತ ಸಂಘದ ತಾಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ ಮನೆಘಟ್ಟ, ಪ್ರಧಾನ ಕಾರ್ಯದರ್ಶಿ ಹೊಯ್ಸಳ ಗಣಪತಿಯಪ್ಪ, ಕಾರ್ಯದರ್ಶಿ ಭದ್ರೇಶ್ ಬಾಳಗೋಡು, ವಿಜಯಕುಮಾರ್ ಯಲಕುಂದ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts