More

    ರೈತರ ಚಿತ್ತ ಶೇಂಗಾ ಬೆಳೆಯತ್ತ

    ಶಶಿಧರ ಕುಲಕರ್ಣಿ ಮುಂಡಗೋಡ

    ತಾಲೂಕಿನ ರೈತರು ಶೇಂಗಾ ಬೆಳೆಯತ್ತ ಮುಖ ಮಾಡುತ್ತಿದ್ದಾರೆ. ಗೋವಿನ ಜೋಳಕ್ಕೆ ಹೋಲಿಸಿದರೆ ಖರ್ಚು ಕಡಿಮೆ, ಇಳುವರಿ ಜಾಸ್ತಿ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಶೇಂಗಾ ಬೆಳೆಯಿಂದ ದೊರೆಯಲಿದೆ.

    ಗೋವಿನ ಜೋಳದ ದರ ಕಡಿಮೆಯಾಗುತ್ತಿರುವುದು, ಉತ್ಪಾದನೆಗಿಂತ ಖರ್ಚು ಹೆಚ್ಚಾಗಿರುವುದು, ಇಳುವರಿ ಕುಂಠಿತವಾಗಿರುವುದು ರೈತರು ಬೇರೆ ಬೆಳೆಯತ್ತ ಆಸಕ್ತಿ ವಹಿಸಲು ಕಾರಣವಾಗಿದೆ.

    ತಾಲೂಕಿನ ಅಂದಾಜು 400 ಎಕರೆಯಷ್ಟು ಪ್ರದೇಶದಲ್ಲಿ ರೈತರು ಶೇಂಗಾ ಬೆಳೆ ಬೆಳೆದಿದ್ದಾರೆ. ಹುನಗುಂದ, ವಡಗಟ್ಟಾ, ಅರಶಿಣಗೇರಿ, ಅಗಡಿ, ಇಂದೂರ, ಕೊಪ್ಪ, ನಂದಿಕಟ್ಟಾ, ಗುಂಜಾವತಿ ಭಾಗಗಳಲ್ಲಿ ಶೇಂಗಾ ಬೆಳೆಯಲಾಗಿದೆ.

    ಬೇಸಾಯ ಪದ್ಧತಿ
    ಎಕರೆಗೆ 40 ಕೆ.ಜಿ. ಬಿತ್ತನೆ ಬೀಜ ಬೇಕಾಗುತ್ತದೆ. ಬಿತ್ತನೆ ಬಳಿಕ 3 ತಿಂಗಳಿಗೆ ಕಾಯಿ ಹಿಡಿಯುತ್ತದೆ. 10 ರಿಂದ 12 ದಿನಗಳಿಗೊಮ್ಮೆ ನೀರುಣಿಸಿದರೆ ಸಾಕು. ಬಿತ್ತುವ ವೇಳೆ ಎಕರೆಗೆ 1 ಚೀಲ ಡಿಎಪಿ ಗೊಬ್ಬರ ಬಳಸಬೇಕು. ನಂತರ ಗೊಬ್ಬರದ ಅವಶ್ಯಕತೆ ಇಲ್ಲ. 4 ತಿಂಗಳಿಗೆ ಶೇಂಗಾ ಕೀಳಲು ಬರುತ್ತದೆ. ಕೀಳುವುದಕ್ಕಿಂತ ಕುಂಟಿ ಬಳಸುವುದು ಲೇಸು. ಕೀಳುವುದಕ್ಕೆ ಖರ್ಚು ಜಾಸ್ತಿಯಾಗುತ್ತದೆ. ಕಿತ್ತ ಮೇಲೆ ಬೀಜಗಳನ್ನು ಬೇರ್ಪಡಿಸಲು ಯಂತ್ರ ಕೂಡ ಬಂದಿವೆ. ಎಕರೆಗೆ 13ರಿಂದ 15 ಕ್ವಿಂಟಾಲ್ ಇಳುವರಿ ಬರುತ್ತದೆ.

    ಮೂರು ವರ್ಷದ ಹಿಂದೆ ನನ್ನ ಸಂಬಂಧಿಕರು ಮನೆಗೆ ಬಳಸಲು ಕೊಟ್ಟಿದ್ದ 1 ಕೆ.ಜಿ. ಶೇಂಗಾ ಬೀಜಗಳನ್ನು ಹೊಲದಲ್ಲಿ ಆರು ಸಾಲು ಬಿತ್ತನೆ ಮಾಡಿದ್ದೆ. ಅವು ಒಂದು ಚೀಲ ಬಂದಿದ್ದವು. ನಂತರ ಆಸಕ್ತಿಯಿಂದ ಕಳೆದ ವರ್ಷ 5 ಎಕರೆ ಬಿತ್ತನೆ ಮಾಡಿದ್ದೆ. 80 ಕ್ವಿಂಟಾಲ್ ಶೇಂಗಾ ಇಳುವರಿ ಬಂದಿದೆ. ಕ್ವಿಂಟಾಲ್​ಗೆ 5,900 ರೂ.ನಂತೆ ಮಾರಾಟ ಮಾಡಿದ್ದೇನೆ. ಒಣಗಿದ ಶೇಂಗಾ ಗಿಡಗಳ ಹೊಟ್ಟು ಜಾನುವಾರುಗಳಿಗೆ ಪೌಷ್ಟಿಕ ಆಹಾರವಿದ್ದಂತೆ.
    ಮೌಲಾಸಾಬ್ ಕುನ್ನೂರ ಹುನಗುಂದ ರೈತ

    ತಾಲೂಕಿನ ಭೂಮಿ ಫಲವತ್ತವಾಗಿದೆ. ಶೇಂಗಾ ಬೆಳೆಗೆ ಬೇಕಾದ ಸಸ್ಯ ಸಂರಕ್ಷಣೆ ಔಷಧ, ಜಿಪ್ಸಂ ಅನ್ನು ಸಹಾಯಧನದಲ್ಲಿ ನೀಡಲಾಗುತ್ತದೆ. ಸುಧಾರಿತ ತಾಂತ್ರಿಕತೆಯಿಂದ ಶೇಂಗಾ ಬೆಳೆದ ರೈತರ ಪ್ರಾತ್ಯಕ್ಷಿತೆ ಮಾಡಲಾಗಿದೆ. ಸದ್ಯ ಶೇಂಗಾ ಬೆಳೆ ಹೂವು ಬಿಡುವ ಹಂತದಲ್ಲಿದ್ದು ಎಕರೆಗೆ 200 ಕೆ.ಜಿ.ಯಷ್ಟು ಜಿಪ್ಸಂ ಹಾಕಬೇಕು.
    | ಎಂ.ಎಸ್. ಕುಲಕರ್ಣಿ ಸಹಾಯಕ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts