More

    ರೈತರ ಕೈ ಹಿಡಿದ ದವನ ಸೊಪ್ಪು: ಕೆಜಿಎಫ್ ತಾಲೂಕಿನಲ್ಲಿ ಹೆಚ್ಚು ಬೆಳೆದ ಬೆಳೆ ತೈಲಕ್ಕೆ ವಿದೇಶದಲ್ಲಿ ಭಾರಿ ಬೇಡಿಕೆ

    ಬೇತಮಂಗಲ: ಮೂರು ತಿಂಗಳಿಂದ ಬಹುತೇಕ ತರಕಾರಿ, ಹಣ್ಣು, ಹೂವಿನ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿರುವ ಮಧ್ಯೆ ಪರಿಮಳ ಸೂಸುವ ದವನ ಸೊಪ್ಪು ರೈತರ ಕೈಹಿಡಿದಿದ್ದು, ಕೈ ತುಂಬಾ ಹಣ ನೀಡಿ ಕೃಷಿಕರಲ್ಲಿ ನಗು ಅರಳುವಂತೆ ಮಾಡಿದೆ.

    ಅಕ್ಟೋಬರ್‌ನಿಂದ ಡಿಸೆಂಬರ್‌ನ ಚಳಿಗಾಲದಲ್ಲಿ ನಾಟಿ ಮಾಡಿದ ದವನ ನಾರು 3 ತಿಂಗಳಲ್ಲಿ ಸಲು ನೀಡುತ್ತದೆ. 1ಟನ್ ಸೊಪ್ಪಿಗೆ ಕನಿಷ್ಠ 13 ಸಾವಿರ ರೂ. ನಿಗದಿಪಡಿಸಿದ ವ್ಯಾಪಾರಿಗಳು ಇದನ್ನು ಬೆಳೆಯುವ ರೈತರಿಗೆ ಎಲ್ಲ ರೀತಿಯ ನೆರವು ನೀಡುತ್ತಾರೆ. ಉತ್ತಮ ಗೊಬ್ಬರ, ನೀರು ಒದಗಿಸಿದರೆ ಎಕರೆಗೆ ಕನಿಷ್ಠ 10 ರಿಂದ 15 ಟನ್‌ವರೆಗೆ ಇಳುವರಿ ಬರುತ್ತದೆ. 30-40 ಸಾವಿರ ರೂ. ಖರ್ಚು ಮಾಡಿದರೂ ಕನಿಷ್ಠ 1 ಲಕ್ಷ ರೂ. ಲಾಭ ಬರುತ್ತಿದೆ.

    ಕೆಜಿಎಫ್ ತಾಲೂಕಿನಲ್ಲಿ 500 ಹೆಕ್ಟೇರ್ ಬೆಳೆ: ಕೋಲಾರ ಜಿಲ್ಲೆಯಾದ್ಯಂತ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದವನ ಬೆಳೆದಿದ್ದು, ಕೆಜಿಎಫ್  ತಾಲೂಕಿನಲ್ಲೇ 500 ಹೆಕ್ಟೇರ್ ಪ್ರದೇಶದಲ್ಲಿ ದವನ ಬೆಳೆದಿದ್ದಾರೆ. ಅದರಲ್ಲೂ ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಹೋಬಳಿ ರೈತರು ಹೆಚ್ಚು ದವನ ಬೆಳೆದು ಲಾಭ ಪಡೆಯುತ್ತಿದ್ದಾರೆ.

    ವಿದೇಶದಲ್ಲಿ ಹೆಚ್ಚಿದ ಬೇಡಿಕೆ: ದವನ ಸೊಪ್ಪನ್ನು ರಥೋತ್ಸವಗಳಿಗೆ ಮತ್ತು ದೇವರ ಪೂಜೆಗೆ ಬಳಸಲಾಗುತ್ತದೆ. ಇದರ ಮೂಲ ಉದ್ದೇಶ ಎಣ್ಣೆ ತೆಗೆಯುವುದು. ಈ ಎಣ್ಣೆಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದ್ದು, ಎಣ್ಣೆ ತೆಗೆಯುವ ಹತ್ತಕ್ಕೂ ಹೆಚ್ಚು ಕಾರ್ಖಾನೆಗಳನ್ನು ಮುಳಬಾಗಿಲು ಹೆದ್ದಾರಿಯಲ್ಲಿ ಕಾಣಬಹುದು. 1 ಟನ್ ಸೊಪ್ಪಿನಿಂದ ಕೇವಲ 700 ಗ್ರಾಂನಿಂದ 1ಲೀಟರ್ ಎಣ್ಣೆ ಬರುತ್ತದೆ. 1 ಲೀಟರ್ ಎಣ್ಣೆ 25 -35 ಸಾವಿರ ರೂ.ಗೆ ಮಾರಾಟವಾಗುತ್ತದೆ.

    ಉಪಯೋಗ: ಸುವಾಸನೆಭರಿತ ಎಣ್ಣೆ ಅರಬ್ಬಿ ದೇಶಗಳು, ಅಮೆರಿಕ, ಆಸ್ಟ್ರೇಲಿಯಾ ದೇಶದವರೆಗೂ ನಪ್ರಿಯವಾಗಿದೆ. ಮುಖ್ಯವಾಗಿ ವಿದೇಶಗಳ ಮದ್ಯ ಹಾಗೂ ಔಷಧ ತಯಾರಿಕೆ, ಅಗರಬತ್ತಿಗೂ ಬಳಸುತ್ತಾರೆ.

    ಪ್ರತಿವರ್ಷ ದವನ ಬೆಳೆಯುತ್ತೇವೆ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದರಿಂದ ಲಾಭ ಬಂದೇ ಬರುತ್ತದೆ. ಒಟ್ಟಾರೆ ಮೂರು ತಿಂಗಳ ಸಲು ಕೈಗೆ ಹತ್ತುತ್ತದೆ.
    ಮುನಿಸ್ವಾಮಿ, ರೈತ, ಪೋತರಾಹಳ್ಳಿ

    ಜಿಲ್ಲಾದ್ಯಂತ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದವನ ಬೆಳೆಯುತ್ತಾರೆ. ಹೆಚ್ಚಾಗಿ ಕೆಜಿಎಫ್  ಭಾಗದಲ್ಲಿ ಬೆಳೆಯುವುದು ಸಾಮಾನ್ಯ. ಬೆಳೆ ಕಡಿಮೆ ಆದರೂ ನಷ್ಟವಾಗುವುದಿಲ್ಲ. ಈ ಹಿಂದೆ ಸರ್ಕಾರ ಎಕರೆಗೆ 5 ಸಾವಿರ ರೂ. ಸಹಾಯಧನ ನೀಡುತ್ತಿತ್ತು, ಈಗ ನಿಲ್ಲಿಸಿದೆ.
    ಶಿವಾರೆಡ್ಡಿ, ಸಹಾಯಕ ನಿರ್ದೇಶಕರು, ಬಂಗಾರಪೇಟೆ ತೋಟಗಾರಿಗೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts