More

    ರೈತರ ಕೈ ಸೇರದ ಪರಿಹಾರಧನ

    ವೀರೇಶ ಹಾರೊಗೇರಿ ಕಲಘಟಗಿ

    ಲಾಕ್​ಡೌನ್ ಸಮಯದಲ್ಲಿ ಬೆಳೆದಿದ್ದ ಹೂವುಗಳನ್ನು ಮಾರುಕಟ್ಟೆಗೆ ತಲುಪಿಸಲು ಆಗದ್ದರಿಂದ ಬೆಳೆಗಾರರಿಗೆ ವರ್ಷದ ಆದಾಯ ಸಿಗಲಿಲ್ಲ. ಹೀಗಾಗಿ ಸರ್ಕಾರ ಹೂವು ಬೆಳೆಗಾರರಿಗೆ ಪರಿಹಾರಧನ ಘೊಷಿಸಿತು. ಆದರೆ, 5 ತಿಂಗಳು ಕಳೆದರೂ ರಾಜ್ಯ ಸರ್ಕಾರದ ಪರಿಹಾರ ಧನ ಸಿಗದ್ದರಿಂದ ತಾಲೂಕಿನ ಹೂವು ಬೆಳೆಗಾರರ ಬದುಕು ಬಾಡಿದಂತಾಗಿದೆ.

    ತಾಲೂಕಿನಾದ್ಯಂತ 165 ಹೇಕ್ಟರ್​ಗಿಂತಲೂ ಅಧಿಕ ಪ್ರದೇಶದಲ್ಲಿ ರೈತರು ಹೂವು ಬೆಳೆದಿದ್ದರು. ಹಿರೇಹೊನ್ನಿಹಳ್ಳಿ, ಬೇಗೂರು, ಬಿಸರಳ್ಳಿ, ಹುಲ್ಲಂಬಿ ಸೇರಿ ಹಲವಾರು ಗ್ರಾಮಗಳಲ್ಲಿ ಹೆಚ್ಚಾಗಿ ಗಲಾಟೆ, ಸುಗಂಧಿ, ಸೇವಂತಿ ಚಂಡು ಹೂವುಗಳನ್ನ ಬೆಳೆದಿದ್ದರು. ಲಾಕ್​ಡೌನ್ ಅವಧಿಯಲ್ಲಿ ಬೆಳೆದ ಹೂಗಳನ್ನು ಮಾರುಕಟ್ಟೆಗೆ ಒಯ್ಯಲು ಆಗದ್ದರಿಂದ ಹೊಲದಲ್ಲಿಯೇ ಕಿತ್ತು ಚೆಲ್ಲಿದ್ದರು. ಹೂವು ಬೆಳೆಗಾರರು ಈ ಕುರಿತು ತಾಲೂಕಾಡಳಿತದ ಗಮನಕ್ಕೆ ತಂದಿದ್ದರು. ಆಗ ಸಂಬಂಧಪಟ್ಟ ಅಧಿಕಾರಿಗಳು ಹೂವು ಬೆಳೆದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ವರದಿ ತಯಾರಿಸಿದ್ದರು. ಆದರೆ, ಈವರೆಗೂ ಪರಿಹಾರಧನ ನೀಡಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. 25 ಸಾವಿರ ರೂ. ಖರ್ಚು ಮಾಡಿ ಚಂಡು ಮತ್ತು ಗಲಾಟೆ ಹೂವುಗಳನ್ನು ಬೆಳೆದಿದ್ದೆ. ಆದರೆ, ಲಾಕ್​ಡೌನ್ ಅವಧಿಯಲ್ಲಿ ಹೂವು ಮಾರಾಟವಾಗದ್ದರಿಂದ ಮಾಡಿದ ಖರ್ಚು ಮೈಮೇಲೆ ಬಂದಿದೆ. ಹೀಗಾಗಿ ಸರ್ಕಾರ ಶೀಘ್ರ ಪರಿಹಾರಧನ ನೀಡಬೇಕು ಎನ್ನುತ್ತಾರೆ ಹಿರೇಹೊನ್ನಿಹಳ್ಳಿಯ ಹೂವು ಬೆಳೆಗಾರ ಮಹೇಶ ಪಾಟೀಲ.
    ಲಾಕ್​ಡೌನ್ ಅವಧಿಯಲ್ಲಿ ಬೆಳೆ ನಷ್ಟ ಅನುಭವಿಸಿದ ಹೂವು ಬೆಳೆಗಾರರಿಗೆ ರಾಜ್ಯ ಸರ್ಕಾರ ಪ್ರತಿ ಹೇಕ್ಟರ್​ಗೆ 25 ಸಾವಿರ ರೂ. ಪರಿಹಾರ ಧನ ಘೊಷಿಸಿತ್ತು. ಪರಿಹಾರಧನ ಯಾವಾಗ ಬರುತ್ತದೆ ಎಂದು ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
    485 ಅರ್ಜಿ ಸಲ್ಲಿಕೆ: ತಾಲೂಕಿನಾದ್ಯಂತ ಒಟ್ಟು 485 ಹೂವು ಬೆಳೆಗಾರರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಬೆಳೆ ಸಮೀಕ್ಷೆ ವ್ಯಾಪ್ತಿಗೊಳಪಟ್ಟ ಐವರು ಹೂವು ಬೆಳೆಗಾರರಿಗೆ ಮಾತ್ರ ಪರಿಹಾರಧನ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts