More

    ರೈತರ ಕಬ್ಬಿನ ಬಿಲ್‌ನಿಂದ ಬಡ್ಡಿ ವ್ಯವಹಾರ

    ಬೆಳಗಾವಿ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಬ್ಯಾಂಕ್ ಖಾತೆಗಳ ಬದಲಾಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ಖಾಸಗಿ ಫೈನಾನ್ಸ್‌ಗಳಿಗೆ ಕಬ್ಬಿನ ಬಿಲ್ ಜಮೆ ಮಾಡುತ್ತಿದ್ದಾರೆ. ಇದರಿಂದ ರೈತರು ಕಬ್ಬಿನ ಬಿಲ್ ಪಡೆದುಕೊಳ್ಳಲು ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಕಬ್ಬು ಬೆಳೆಗಾರರು ದೂರಿದರು. ನಗರದ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಸಕ್ಕರೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಸಕ್ಕರೆ ಕಾರ್ಖಾನೆಗಳ ಮಾಲೀಕರ ಸ್ವಂತ ಫೈನಾನ್ಸ್‌ಗಳ ಮೂಲಕ ರೈತರು ಕಬ್ಬಿನ ಬಿಲ್ ಮುಂಗಡವಾಗಿ ಹಣ ಪಡೆದುಕೊಂಡರೆ ಶೇ.18 ಬಡ್ಡಿ ವಿಧಿಸುತ್ತವೆ. ಅದೇ ಫೈನಾನ್ಸ್‌ಗಳು ರೈತರ ಕಬ್ಬಿನ ಬಿಲ್‌ಅನ್ನು ಎರಡು ತಿಂಗಳು ಬಳಸಿಕೊಂಡು ಬಳಿಕ ನೀಡುತ್ತಿವೆ. ಕಬ್ಬಿನ ಹಣದಲ್ಲಿ
    ಫೈನಾನ್ಸ್‌ಗಳು ಬಡ್ಡಿ ವ್ಯವಹಾರ ಮಾಡುತ್ತಿವೆ. ಹಾಗಾಗಿ, ರೈತರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಕಬ್ಬಿನ ಬಿಲ್ ಜಮೆ ಮಾಡಲು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

    ಟನ್ ಕಬ್ಬಿಗೆ 300 ರೂ.ನಷ್ಟ: ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಸರಾಸರಿ 10ರಿಂದ 11.5 ವರೆಗೆ ಇದೆ. ಆದರೆ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಇಳುವರಿ 9.5 ತೋರಿಸುತ್ತಿವೆ. ಇದೇ ಕಬ್ಬು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಲ್ಲಿ 10 ರಿಂದ 11ರವರೆಗೆ ಇಳುವರಿ ಬರುತ್ತದೆ. ಇದರಿಂದಾಗಿ ರೈತರಿಗೆ ಟನ್ ಕಬ್ಬಿಗೆ 250ರಿಂದ 300 ರೂ. ವರೆಗೆ ನಷ್ಟ ಉಂಟಾಗುತ್ತಿದೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಇಳುವರಿ ಪರಿಶೀಲಿಸಬೇಕು. ಇಳುವರಿ ಆಧಾರದ ಮೇಲೆ ಟನ್ ಕಬ್ಬಿಗೆ 2,800 ರಿಂದ 3,000 ರೂ. ವರೆಗೆ ಕಬ್ಬಿನ ದರವನ್ನು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 2,000 ದಿಂದ 2,500 ರೂ.ವರೆಗೆ ನೀಡುತ್ತಿವೆ. ಸಕ್ಕರೆ ಕಾರ್ಖಾನೆಗಳು ತಮ್ಮ ವಾರ್ಷಿಕ ಲಾಭವನ್ನು ರೈತರಿಗೆ ಹಂಚಿಕೆ ಮಾಡಬೇಕು ಎಂಬುದು ಸರ್ಕಾರದ ನಿಯಮ. ಆದರೆ, ಸಕ್ಕರೆ ಕಾರ್ಖಾನೆಗಳು ಲಾಭದ ಬದಲಾಗಿ ನಷ್ಟ ತೋರಿಸುತ್ತಿವೆ. ಅಲ್ಲದೆ, ಕಾರ್ಖಾನೆಗಳ ವಾರ್ಷಿಕ ಲೆಕ್ಕ ಪರಿಶೋಧನೆಗಳಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆಯನ್ನು ವಂಚನೆ ಮಾಡುತ್ತಿವೆ ಎಂದು ರೈತರು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಕ್ಕರೆ ಆಯುಕ್ತ ಶಿವನಾಂದ ಕಲಕೇರಿ, ರೈತರು ಬ್ಯಾಂಕ್ ಖಾತೆಗಳಿಗೆ ಕಬ್ಬಿನ ಬಿಲ್ ಜಮೆ ಮಾಡಲು ಸಕ್ಕೆರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಲಾಗುವುದು. ಕಬ್ಬಿನ ಇಳುವರಿ ಮತ್ತು ತೂಕದಲ್ಲಿ ವ್ಯತ್ಯಾಸ ಸರಿಪಡಿಸಲು ಕ್ರಮ ವಹಿಸಲಾಗುವುದು. ಕಬ್ಬು ಕಟಾವು ಮತ್ತು ಸಾಗಾಣಿಕೆ ದರ ನಿಗದಿಪಡಿಸಲಾಗುವುದು. ಎಂ.ಕೆ.ಹುಬ್ಬಳ್ಳಿಯ ಸಕ್ಕರೆ ಕಾರ್ಖನೆಯಲ್ಲಿನ ಅವ್ಯವಹಾರ, ಭ್ರಷ್ಟಾಚಾರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಎಡಿಸಿ ಅಶೋಕ ದುಡಗುಂಟಿ, ಚೂನಪ್ಪ ಪೂಜೇರ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ರವಿ ಸಿದ್ದಮ್ಮನವರ, ಲಿಂಗರಾಜ ಪಾಟೀಲ, ಸಿದ್ದಗೌಡ ಮೋದಗಿ, ಗಣಪತಿ ಇಳಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts