More

    ರೈತರ ಏಳಿಗೆಗೆ ಕೇಂದ್ರ-ರಾಜ್ಯ ಸರ್ಕಾರ ಜತೆಗೂಡಿ ಕೆಲಸ ಮಾಡಲಿ

    ಆಲಮೇಲ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಮರಸ್ಯದಿಂದ ಕೆಲಸ ಮಾಡಿದರೆ ಮಾತ್ರ ರೈತರ ಬೆಳೆಗೆ ಯೋಗ್ಯ ಬೆಲೆ ಸಿಗುತ್ತದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ- ಕೃಷಿ ಮಾರುಕಟೆ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.

    ಪಟ್ಟಣದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶನಿವಾರ ಅವರು ಜ್ಯೋತಿ ಬೆಳಗಿಸಿ ಮಾತನಾಡಿದರು.

    ಒಂದು ಕಾಲದಲ್ಲಿ ಸಾಹುಕಾರರಿಂದ ರೈತರು ಪಡೆದ ಸಾಲ ತೀರಿಸಲಾಗದೆ ಜಮೀನನ್ನೇ ಅವರ ಹೆಸರಿಗೆ ಬರೆದುಕೊಡುವಂತಹ ಪರಿಸ್ಥಿತಿ ಇತ್ತು. ಆದರೆ 1910 ರಲ್ಲಿ ಸಹಕಾರ ಬ್ಯಾಂಕ್‌ಗಳು ಪ್ರಾರಂಭವಾದ ನಂತರದ ದಿನಗಳಲ್ಲಿ ಅದು ಬಹುತೇಕ ನಮ್ಮ ರಾಜ್ಯದಲ್ಲಿ ತಪ್ಪಿದಂತಾಗಿದೆ. ರಾಜ್ಯದ ಒಟ್ಟು 67 ಲಕ್ಷ ರೈತರಲ್ಲಿ 30 ಲಕ್ಷ ರೈತರು ಸಹಕಾರಿ ಸಂಘಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ. ರೈತರ ಸ್ವಾವಲಂಬಿ ಬದುಕಿಗಾಗಿ ಸಹಕಾರ ಬ್ಯಾಂಕ್‌ಗಳಲ್ಲಿ ಗರಿಷ್ಠ 3 ಲಕ್ಷ ರೂ. ದಿಂದ 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡಲಾಗುತ್ತಿದೆ. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಬರಗಾಲ ಬಂದರೂ ಹಾನಿಯಾಗುವುದಿಲ್ಲ ಎಂದರು.

    ಶಾಸಕ ಅಶೋಕ ಮನಗೂಳಿ ಮಾತನಾಡಿ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲರ ಪರಿಶ್ರಮದಿಂದ ಜಿಲ್ಲೆಯ 272 ಸೊಸೈಟಿಗಳಲ್ಲಿ 250 ಸೊಸೈಟಿಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ರೈತರ ಏಳಿಗೆಗಾಗಿ ಶ್ರಮಿಸುತ್ತಿವೆ. ರೈತರ ಬಹುದಿನದ ಕನಸಾದ ತೋಟಗಾರಿಕೆ ವಿದ್ಯಾಲಯ ಹಾಗೂ ಕಡಣಿ ಬ್ರೀಜ್ ನಿರ್ಮಾಣ ಮಾಡುವ ಕುರಿತು ಮೂರು ಬಾರಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಈ ಭಾಗದ ಸಾರ್ವಜನಿಕರಿಗೆ ಈ ಕುರಿತು ಸಿಹಿ ಸುದ್ದಿ ನೀಡಲಾಗುವುದು. ಸಚಿವರ ಸಹಕಾರದೊಂದಿಗೆ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಸರ್ಕಾರದಿಂದ ತೂಕ ಮಾಪನ ಕೇಂದ್ರ ನಿರ್ಮಿಲಾಗುವುದು ಎಂದರು.

    ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ದೇವರಗುಡ್ಡ ಗುರು ಪೀಠದ ಒಡೆಯ ಡಾ.ಸಂದೀಪ ಪಾಟೀಲ, ಅಳ್ಳೋಳ್ಳಿ ಹಿರೇಮಠದ ಶ್ರೀಶೈಲಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ರಮೇಶ ಭೂಸನೂರ ಧ್ವಜಾರೋಹಣ ನೆರವೇರಿಸಿದರು.

    ಕೃಷಿ ಸಹಕಾರ ಸಂಘದ ಅಧ್ಯಕ್ಷೆ ಭಾರತಿ ಪಾಟೀಲ, ಉಪಾದ್ಯಕ್ಷೆ ಶೋಭಾ ಅಜಲಪುರ, ಸಹಕಾರ ಸಂಘಗಳ ಉಪ ನಿಬಂಧಕಿ ಎಸ್.ಕೆ.ಭಾಗ್ಯಶ್ರೀ, ಸಹಕಾರ ಅಭಿವೃದ್ಧಿ ಅಧಿಕಾರಿ ಲೀಲಾವತಿಗೌಡ, ಉಪ ಪ್ರಧಾನ ವ್ಯವಸ್ಥಾಪಕ ಜೆ.ಬಿ.ಪಾಟೀಲ, ನೋಡಲ್ ಅಧಿಕಾರಿ ಎನ್.ಜಿ.ಜನಿವಾರ, ಆರ್.ಎಂ.ಬಣಗಾರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಾಗಣ್ಣ ಗುರಕಾರ ಹಾಗೂ ಸಿಬ್ಬಂದಿ, ಆಲಮೇಲ ಕುರುಬತ್ತಹಳ್ಳಿ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts