More

    ರೈತರು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಿ

    ಬೆಳಗಾವಿ: ರೈತರು ಕೃಷಿ ಚಟುವಟಿಕೆಗಳಲ್ಲಿ ತಾಂತ್ರಿಕತೆ ಅಳಡಿಸಿಕೊಳ್ಳವುದರ ಜತೆಗೆ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತರಕಾರಿ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಶಂಕರ ವಿ.ಹೇಳಿದರು.

    ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್​ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಜರುಗಿದ ತಂತ್ರಜ್ಞಾನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟೊಮ್ಯಾಟೊ, ಮೆಣಸಿನಕಾಯಿ, ಬದನೆಕಾಯಿ ಹಾಗೂ ಇತ್ಟ ತರಕಾರಿಗಳ ನೂತನ ತಳಿಗಳು ಮತ್ತು ಲುಪೋಷಕಾಂಶಗಳ ಮಿಶ್ರಣವಾದ ತರಕಾರಿ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಅಲ್ಲದೆ, ರೈತರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದರು.

    ವಿಜ್ಞಾನಿ ಡಾ.ಸೆಂಥಿಲ್​ ಕುಮಾರ್​ ಮಾತನಾಡಿ, ಹಣ್ಣಿನ ಗಿಡಗಳ ಆಕಾರ ನಿರ್ವಹಣೆ, ಮಣ್ಣಿನಲ್ಲಿ ಸಾವಯವ ಇಂಗಾಲದ ಮಹತ್ವ, ಕಾರ್ಬನ್​ ಸಾರಜನಕ ಅನುಪಾತದ ವೃದ್ಧಿಯಲ್ಲಿ ವೆಲ್​ವೆಟ್​ ಬೀನ್​, ಮುಕುನಾ (ನಸಗುನ್ನಿ ಕಾಯಿ) ಬೆಳೆಯ ಮಹತ್ವ ಹಾಗೂ ಬಾಳೆ ಬೆಳೆಯಲ್ಲಿ ಉಪಯೋಗಿಸಬಹುದಾದ ಬಾಳೆ ಸ್ಪೆಶಲ್​ನ ಲಾಭದ ಕುರಿತು ರೈತರಿಗೆ ವಿವರಿಸಿದರು.

    ಮೆಣಸಿನಕಾಯಿಯ ಅರ್ಕಾ ಖ್ಯಾತಿ, ಬೆಂಡೆ ಬೆಳೆಯ ಅರ್ಕಾ ನಿಕಿತಾ ಮತ್ತು ನಸಗುನ್ನಿ ಕಾಯಿ ಬೆಳೆಯ ಅರ್ಕಾ ಶುಭ್ರ ತಳಿಯ ಬೀಜ, ಅರ್ಕಾ ಮೈಕ್ರೊಬಿಯಲ್​ ಕನ್ಸಾರ್ಷಿಯಾ, ತರಕಾರಿ ಸ್ಪೆಶಲ್​, ಬಾಳೆ ಸ್ಪೆಶಲ್​ ಲುಪೋಷಕಾಂಶಗಳ ಮಿಶ್ರಣವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ರೈತರಿಗೆ ಉಚಿತವಾಗಿ ವಿತರಿಸಲಾಯಿತು. ಕೇಂದ್ರದ ವಿಜ್ಞಾನಿ.ಜಿ.ಬಿ. ವಿಶ್ವನಾಥ, ಶಂಕರಗೌಡ ಪಾಟೀಲ, ಕೇಂದ್ರದ ವಿಜ್ಞಾನಿ ಪ್ರವಿಣ ಯಡಹಳ್ಳಿ, ಪ್ರಗತಿಪರ ರೈತ ನಾಗರಾಜ ದೇಸಾಯಿ, ವಿವಿಧ ಗ್ರಾಮಗಳ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts