More

    ರೈತರಿಗೆ ಕಂಟಕವಾದ ಕರೊನಾ

    ಸಂತೋಷ ಮುರಡಿ ಮುಂಡರಗಿ

    ಕರೊನಾ ಲಾಕ್​ಡೌನ್ ಪರಿಣಾಮದಿಂದ ತಾಲೂಕಿನ ಕೃಷಿ ಹಾಗೂ ತೋಟಗಾರಿಕೆ ರೈತರು ನಷ್ಟ ಅನುಭವಿಸುವಂತಾಗಿದೆ. ತೋಟಗಾರಿಕೆ ಬೆಳೆ ಮಾರಾಟವಾಗುತ್ತಿಲ್ಲ. ಇದರಿಂದ ರೈತರಿಗೆ ಮುಂದೇನು ಮಾಡಬೇಕೆನ್ನುವುದು ತೋಚದಂತಾಗಿದೆ.

    ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಕರೊನಾ ಎಫೆಕ್ಟ್​ನಿಂದಾಗಿ ವ್ಯಾಪಾರಸ್ಥರು ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದ ರೈತರ ಬೆಳೆ ಮಾರಾಟ ಆಗುತ್ತಿಲ್ಲ. ಒಂದು ವೇಳೆ ಮಾರಾಟವಾದರೂ ಅದು ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ತೋಟಗಾರಿಕೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನಲ್ಲಿ 764 ಹೆಕ್ಟೇರ್​ನಲ್ಲಿ ಮಾವು, ಬಾಳೆ, ಚಿಕ್ಕು, ಪಪ್ಪಾಯಿ, ದಾಳಿಂಬೆ, ಪೇರಲ ಮೊದಲಾದ ಹಣ್ಣುಗಳನ್ನು ಬೆಳೆಯಾಗಿದೆ. 98 ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿ, ಗುಲಾಬಿ, ಸುಗಂಧರಾಜ, ಚೆಂಡು ಹೂವು, ಆಬೊಲಿ ಮೊದಲಾದ ಹೂವುಗಳನ್ನು ಬೆಳೆಯಲಾಗಿದೆ. 3,358 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬಗೆಯ ತರಕಾರಿ ಬೆಳೆದಿದ್ದಾರೆ.

    ಈ ಬೆಳೆಗಳ ಪೈಕಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 197 ಹೆಕ್ಟೇರ್​ನಲ್ಲಿ 2,590 ಟನ್​ನಷ್ಟು ವಿವಿಧ ಹಣ್ಣಿನ ಬೆಳೆ, 49 ಹೆಕ್ಟೇರ್​ನಲ್ಲಿ 735 ಟನ್ ವಿವಿಧ ತರಕಾರಿ, 20 ಹೆಕ್ಟೇರ್​ನಲ್ಲಿ 146 ಟನ್ ವಿವಿಧ ಬಗೆಯ ಹೂವು ಉತ್ಪಾದನೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ವರದಿ ತಯಾರಿಸಿದೆ.

    ಮಾರುಕಟ್ಟೆ ಬಂದ್:
    ಲಾಕ್​ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಇದರಿಂದಾಗಿ ಶೇಂಗಾ, ಗೋವಿನಜೋಳ, ಸೂರ್ಯಕಾಂತಿ ಮತ್ತಿತರ ಬೆಳೆ ಬೆಳೆದಿರುವ ರೈತರು ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಜಮೀನಿನಲ್ಲಿ ಮತ್ತು ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಕರೊನಾ ಬಗ್ಗೆ ಮುಂಜಾಗೃತೆ ಕ್ರಮಗಳನ್ನು ಕೈಗೊಂಡು ಮಾರುಕಟ್ಟೆ ಪ್ರಾರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ.

    ಲಾಕ್​ಡೌನ್​ನಿಂದ ರೈತರ ಬದುಕು ಸಂಕಷ್ಟ ಸ್ಥಿತಿಯಲ್ಲಿದೆ. ವ್ಯಾಪಾರಸ್ಥರು ಖರೀದಿಗೆ ಬರುತ್ತಿಲ್ಲ. ಯಾರೋ ಒಬ್ಬಿಬ್ಬರು ಬಂದು ಬೇಕಾ ಬಿಟ್ಟಿ ದರ ಕೇಳ್ತಾರೆ. ಹೀಗಾಗಿ ಸರ್ಕಾರವೇ ನೇರವಾಗಿ ರೈತರ ಬೆಳೆಯನ್ನು ಸೂಕ್ತ ಬೆಲೆಗೆ ಖರೀದಿಸಬೇಕು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೈತರ ನೆರವಿಗೆ ಬರಬೇಕು. ಮಳೆಗೆ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಬೇಕು.
    ವೀರನಗೌಡ ಪಾಟೀಲ ರೈತ ಮುಖಂಡ

    ತಾಲೂಕಿನಲ್ಲಿ ಒಟ್ಟು ತೋಟಗಾರಿಕೆ ಬೆಳೆ ಕ್ಷೇತ್ರ ಹಾಗೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎಷ್ಟು ಹೆಕ್ಟೇರ್ ಬೆಳೆ ಕಟಾವಿಗೆ ಬರುತ್ತದೆ ಎನ್ನುವ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಮಳೆಗೆ ಹಾನಿಯಾದ ಬೆಳೆಗಳ ಸಮೀಕ್ಷೆ ನಡೆಸಿ ವರದಿ ತಯಾರಿಸಲಾಗುತ್ತಿದೆ. ಆದಷ್ಟು ಬೇಗ ವರದಿಯನ್ನು ಮೇಲಧಿಕಾರಿಗೆ ಸಲ್ಲಿಸುತ್ತೇವೆ.
    | ವೈ.ಎಚ್. ಜಾಲವಾಡಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts