More

    ರೈತರಿಂದ ತಟ್ಟೆ ಲೋಟ ಬಡಿದು ಪ್ರತಿಭಟನೆ

    ಮೈಸೂರು: ಕಬ್ಬಿನ ಎ್ಆರ್‌ಪಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ರೈತರು ಕೈಗೊಂಡಿರುವ ಅಹೋರಾತ್ರಿ ಧರಣಿ ಗುರುವಾರಕ್ಕೆ 4ನೇ ಪೂರೈಸಿದೆ. ತಟ್ಟೆ ಲೋಟ ಬಡಿದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


    ಕಬ್ಬಿನ ಎಫ್‌ಆರ್‌ಪಿ ಬೆಲೆ ಅವೈಜ್ಞಾನಿಕವಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಎಸ್‌ಎಪಿ ಬೆಲೆ ಸೇರಿಸಿ ಒಂದು ಟನ್‌ಗೆ 3,500 ರೂ. ಬೆಲೆ ನಿಗದಿಯಾಗಬೇಕು. ಈಗಾಗಲೇ ಕಾರ್ಖಾನೆಗಳು ಮುಂಗಡ ಹಣದ ಹೆಸರಿನಲ್ಲಿ 2,500 ರೂ. ನೀಡಿರುವುದು ಸರಿಯಾದ ಕ್ರಮವಲ್ಲ. ಎಫ್‌ಆರ್‌ಪಿ 3,050 ರೂ. ನಿಗದಿಯಂತೆ 3050 ಮುಂಗಡ ನೀಡಬೇಕು. ಎಸ್‌ಎಪಿ ದರ ನಿಗದಿಯ ನಂತರ ಅಂತಿಮ ಕಂತು ನೀಡಬಹುದು ಎಂದು ಆಗ್ರಹಿಸಿದರು.


    ಕಬ್ಬಿನ ಕಟಾವು ಸಾಗಣೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಮೀ ಆಧಾರದ ದರ ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.


    ಕಬ್ಬು ಕಟಾವು 16- 18 ತಿಂಗಳು ವಿಳಂಬವಾಗುತ್ತಿದ್ದು, ಈ ರೀತಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಬಡ್ಡಿ ಸೇರಿಸಿ ಹೆಚ್ಚುವರಿ ದರ ನೀಡಬೇಕು. ಸಕ್ಕರೆ ಕಾರ್ಖಾನೆ ಫೀಲ್ಡ್‌ಮನ್‌ಗಳು ಬಿಲ್‌ನಲ್ಲಿ ನೋಂದಾಯಿಸದೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ನಿಲ್ಲಬೇಕು ಎಂದು ಆಗ್ರಹಿಸಿದರು.


    ಬಗರ್‌ಹುಕುಂ ಸಾಗುವಳಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ನೀಡಬೇಕು ಎಂದು ಆಗ್ರಹಿಸಿದರು.
    ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಮೈಸೂರಿಗೆ ಬಂದರೂ ರೈತರ ಭೇಟಿ ಮಾಡದೆ ನಿರ್ಲಕ್ಷ್ಯ ಮಾಡಿದ್ದು, ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು

    ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಮುಖಂಡರಾದ ಬರಡನಪುರ ನಾಗರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕುರುಬೂರು ಸಿದ್ದೇಶ್, ಯೋಗೇಶ, ಮಂಜು, ಹಾಡ್ಯ ರವಿ, ನಂಜುಂಡಪ್ಪ ಇನ್ನಿತರರು ಇದ್ದರು.

    ಜಿಲ್ಲಾಧಿಕಾರಿ ಮನವೊಲಿಕೆ ವಿಫಲ
    ಕಬ್ಬು ಬೆಳೆಗಾರರ ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಕಬ್ಬು ಬೆಳೆಗಾರರ ಬೇಡಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ಈ ಸಂಬಂಧ ನ.8ರ ಬೆಳಗ್ಗೆ 10ಕ್ಕೆ ಡಿಸಿ ಕಚೇರಿ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ರೈತರ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
    ಕಬ್ಬಿನ ಕಟಾವು ಸಾಗಣೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಸುಲಿಗೆ ಮಾಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಈಗಾಗಲೇ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕರಿಗೆ ನೋಟಿಸ್ ನೀಡಲಾಗಿದೆ. ಸಾಗುವಳಿ ಪತ್ರ ನೀಡುವುದರ ಸಂಬಂಧ ಜಿಲ್ಲಾಡಳಿತ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಕಬ್ಬು ದರ ಮತ್ತು ಇತರ ವಿಚಾರಗಳನ್ನು ಸಚಿವರ ಸಮ್ಮುಖದಲ್ಲಿ ಚರ್ಚಿಸಬೇಕಿದೆ. ಹೀಗಾಗಿ, ರೈತರು ಧರಣಿ ಕೈಬಿಡಬೇಕು ಎಂದು ಕೋರಿದರು. ಈ ಮನವಿಗೆ ಕಿವಿಗೊಡದ ರೈತರು ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದರು.

    ಇನ್ನೂ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಏಕಲವ್ಯನಗರ ನಿವಾಸಿಗಳು ಅನಿರ್ದಿಷ್ಟಾವದಿ ಧರಣಿ ಹಮ್ಮಿಕೊಂಡಿದ್ದು, ಈ ವಿಚಾರ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರತಿಭಟನಾಕಾರರ ಮನವೊಲಿಸಲಾಗುವುದು ಎಂದು ಡಿಸಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts