More

    ರೇಷ್ಮೆಗೂಡಿಗೆ ಪ್ರೋತ್ಸಾಹಧನ ಬಿಡುಗಡೆ

    ಕೋಲಾರ: ರಾಜ್ಯದ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವ ಸರ್ಕಾರ ಏಪ್ರಿಲ್‌ನಿಂದ ಜುಲೈವರೆಗಿನ ರೇಷ್ಮೆಗೂಡು ವಹಿವಾಟಿಗೆ 30 ಕೋಟಿ ರೂ.ಗಳನ್ನು ಪ್ರೋತ್ಸಾಹಧನವಾಗಿ ಬಿಡುಗಡೆ ಮಾಡಿ ಬುಧವಾರ ಆದೇಶಿಸಿದ್ದು, ಕೋಲಾರ ಜಿಲ್ಲೆಗೆ 1.50 ಕೋಟಿ ರೂ.ಸಿಕ್ಕಿದೆ.

    ಮಾರ್ಚ್‌ನಲ್ಲಿ ಮಿಶ್ರತಳಿ ಕೆಜಿ ಗೂಡಿಗೆ ಗರಿಷ್ಠ 500 ರೂ. ಮೇಲ್ಪಟ್ಟು ಹಾಗೂ ದ್ವಿತಳಿಗೆ 600 ರೂ. ದಾಟಿತ್ತು. ಮಾ.24ಕ್ಕೆ ಮಿಶ್ರತಳಿಗೆ 340 ರೂ. ದ್ವಿತಳಿಗೆ 377 ರೂ.ಗೆ ಕುಸಿತ ಕಂಡಿತ್ತು. ಬಿಗಿ ಲಾಕ್‌ಡೌನ್ ನಿಯಮದಿಂದ ಗೂಡು ಮತ್ತು ರೇಷ್ಮೆ ನೂಲು ವಹಿವಾಟಿಗೆ ಅಡ್ಡಿಯುಂಟಾಗಿದ್ದು ಒಂದೆಡೆಯಾದರೆ ಆರ್ಥಿಕತೆ ನೆಲಕಚ್ಚಿದ್ದರಿಂದ ಜುಲೈ ಮೂರನೇ ವಾರಕ್ಕೆ ಗೂಡು ಧಾರಣೆಯೂ ಮಿಶ್ರತಳಿ ಕೆಜಿಗೆ 194 ರೂ. ಹಾಗೂ ದ್ವಿತಳಿ 216 ರೂ.ನಂತೆ ಪಾತಾಳಕ್ಕೆ ಕುಸಿದಿದೆ.

    ಲಾಕ್‌ಡೌನ್‌ನಲ್ಲಿ ಸರ್ಕಾರ ತರಕಾರಿ ಬೆಳೆಗಾರರಿಗೆ ಪರಿಹಾರಧನ ಘೋಷಿಸಿ ರೇಷ್ಮೆ ಬೆಳೆಗಾರರನ್ನು ಮರೆತಿದ್ದರಿಂದ ಬೆಳೆಗಾರರು ಇಲಾಖೆ ಅಧಿಕಾರಿಗಳು, ಸಚಿವರನ್ನು ಭೇಟಿಯಾಗಿ ಪ್ರೋತ್ಸಾಹಧನ ನೀಡುವಂತೆ ಮನವಿ ಸಲ್ಲಿಸಿದ್ದರು. ಸ್ಪಂದಿಸಿದ ಸರ್ಕಾರ ರಕ್ಷಣಾತ್ಮಕ ದರ ನೀಡಲು ತೀರ್ಮಾನಿಸಿತ್ತಾದರೂ ಇದರ ಪ್ರಯೋಜನ ಎಲ್ಲ ರೈತರಿಗೂ ಆಗದಿರುವ ಬಗ್ಗೆ ಕೋಲಾರ, ರಾಮನಗರ ಇನ್ನಿತರ ಜಿಲ್ಲೆಗಳ ರೇಷ್ಮೆ ಬೆಳೆಗಾರರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹಿಸಿದ್ದರು.

    30 ಕೋಟಿ ರೂ. ಬಿಡುಗಡೆ: ರೇಷ್ಮೆ ಬೆಳೆಗಾರರ ಹೋರಾಟಕ್ಕೆ ಮಣಿದ ಸರ್ಕಾರ ರಕ್ಷಣಾತ್ಮಕ ದರದ ಬದಲು ಪ್ರೋತ್ಸಾಹಧನವಾಗಿ ಮಿಶ್ರತಳಿ ರೇಷ್ಮೆ ಗೂಡು ಕೆಜಿಗೆ 30 ರೂ. ಹಾಗೂ ದ್ವಿತಳಿ ಗೂಡಿಗೆ 50 ರೂ. ನೀಡುವುದಾಗಿ ಘೋಷಿಸಿ ಏ.1ರಿಂದ ಪೂರ್ವಾನ್ವಯವಾಗುವಂತೆ ಸೆಪ್ಟೆಂಬರ್ ಅಂತ್ಯದವರೆಗೆ ಮಾರುಕಟ್ಟೆಯಲ್ಲಿ ವಹಿವಾಟು ಆಗುವ ರೇಷ್ಮೆಗೂಡಿಗೆ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆ.

    ಅದರಂತೆ ಇದೀಗ ರೇಷ್ಮೆ ಇಲಾಖೆ ರಾಜ್ಯದ 28 ರೇಷ್ಮೆ ಗೂಡು ಮಾರುಕಟ್ಟೆಗೆ 2020-21ನೇ ಸಾಲಿನಲ್ಲಿ ಬೆಲೆ ಸ್ಥಿರೀಕರಣ ನಿಧಿ ಅನುದಾನದಿಂದ ಏಪ್ರಿಲ್‌ನಿಂದ ಜುಲೈವರೆಗೆ ವಹಿವಾಟು ಆಗಿರುವ ಮಿಶ್ರತಳಿ ಗೂಡು 8852.653 ಮೆಟ್ರಿಕ್ ಟನ್ ಮತ್ತು ದ್ವಿತಳಿ 2269.550 ಮೆ. ಟನ್ ಸೇರಿ ಒಟ್ಟು 11,122.20 ಮೆ.ಟನ್ ರೇಷ್ಮೆ ಗೂಡಿಗೆ ಒಟ್ಟು 30 ಕೋಟಿ ರೂ. ಪ್ರೋತ್ಸಾಹಧನ ಹಂಚಿಕೆ ಮಾಡಿದೆ.

    ಎಲ್ಲಿಗೆ ಎಷ್ಟು ಹಣ: ರಾಜ್ಯದ ಅತಿ ದೊಡ್ಡ ರೇಷ್ಮೆ ಗೂಡು ಮಾರುಕಟ್ಟೆಯಾದ ರಾಮನಗರಕ್ಕೆ 8.50 ಕೋಟಿ ರೂ, ಬಿಡುಗಡೆಯಾದರೆ ಶಿಡ್ಲಘಟ್ಟ ಮಾರುಕಟ್ಟೆಗೆ 6 ಕೋಟಿ ರೂ, ಕೊಳ್ಳೆಗಾಲಕ್ಕೆ 4.30 ಕೋಟಿ ರೂ, ಕನಕಪುರಕ್ಕೆ 3.60 ಕೋಟಿ ರೂ, ಕೋಲಾರ ಮಾರುಕಟ್ಟೆಗೆ 1.50 ಕೋಟಿ ರೂ, ವಿಜಯಪುರಕ್ಕೆ 1.20 ಕೋಟಿ ರೂ, ಬಿಡುಗಡೆಯಾಗಿದೆ. ಕೋಲಾರ ತಾಲೂಕಿನ ಕ್ಯಾಲನೂರು, ಚನ್ನಪಟ್ಟಣಕ್ಕೆ ತಲಾ 70 ಲಕ್ಷ, ಚಿಂತಾಮಣಿಗೆ 60 ಲಕ್ಷ, ಚಿಕ್ಕಬಳ್ಳಾಪುರಕ್ಕೆ 18 ಲಕ್ಷ, ಎಚ್.ಕ್ರಾಸ್‌ಗೆ 33 ಲಕ್ಷ, ಶ್ರೀನಿವಾಸಪುರಕ್ಕೆ 36 ಲಕ್ಷ, ಸಂತೇಮರಹಳ್ಳಿಗೆ 38 ಲಕ್ಷ, ಮಳವಳ್ಳಿಗೆ 80 ಲಕ್ಷ, ಶಿರಹಟ್ಟಿ ಮತ್ತು ಹಾವೇರಿಗೆ ತಲಾ 25 ಲಕ್ಷ, ಮೈಸೂರಿಗೆ 15 ಲಕ್ಷ ಸೇರಿದಂತೆ ಇತರ ಮಾರುಕಟ್ಟೆಗೆ ವಹಿವಾಟಿಕೆ ತಕ್ಕಂತೆ ಹಣ ಬಿಡುಗಡೆ ಮಾಡಿದೆ.

    ಸರ್ಕಾರ ಏಪ್ರಿಲ್‌ನಿಂದ ಜುಲೈವರೆಗೆ ರೇಷ್ಮೆ ಗೂಡಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಿದ್ದು, ಇಲಾಖೆಯಿಂದ ಮಾರ್ಗಸೂಚಿ ಬಂದ ತಕ್ಷಣ ರೈತನ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮಾ ಮಾಡಲಾಗುವುದು.
    ಮಂಜುನಾಥ್, ಸಹಾಯಕ ನಿರ್ದೇಶಕ, ರೇಷ್ಮೆಇಲಾಖೆ ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts