More

    ರೇವತಗಾಂವದಲ್ಲಿ ಶ್ರೀಶೈಲ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

    ರೇವತಗಾಂವ: ಗ್ರಾಮದ ರೇವಣಸಿದ್ಧೇಶ್ವರ ಜಾತ್ರೆ ಹಾಗೂ ಪುನರ್ ಕಲಶಾರೋಹಣ ಕಾರ್ಯಕ್ರಮದ ನಿಮಿತ್ತ ಶನಿವಾರ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರವರ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಮುತ್ತೈದೆಯರ ಕುಂಭ, ಕಳಸ, ಆರತಿಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

    ರೇವಣಸಿದ್ಧೇಶ್ವರರಿಗೆ ಬೆಳಗ್ಗೆ 6 ಗಂಟೆಗೆ ಭಕ್ತರಿಂದ ಸಕ್ಕರೆ-ಬೆಲ್ಲ ನೈವೇದ್ಯ ಕಾರ್ಯಕ್ರಮ ಜರುಗಿತು. 7.30ಕ್ಕೆ ವಿವಿಧ ವಾದ್ಯ ವೈಭವಗಳೊಂದಿಗೆ ರೇವಣಸಿದ್ಧೇಶ್ವರರ ಪಲ್ಲಕ್ಕಿ ಸಬೀನ ತಿರುಗುವ ಕಾರ್ಯಕ್ರಮ ನೆರವೇರಿತು. ನಂತರ ಗ್ರಾಮದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು.

    ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವದ ನಂತರ ಜಗದ್ಗುರುಗಳಿಂದ ಪುನರ್ ಕಲಶಾರೋಹಣ ನಡೆಯಿತು. ಬಳಿಕ ಜರುಗಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸತ್ಯ, ನಿಷ್ಠೆ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ, ಶ್ರದ್ಧೆ, ಭಕ್ತಿಯ ಮೂಲಕ ಜ್ಞಾನದ ಬೆಳಕು ಕಾಣಬೇಕು. ಭಾರತ ಬಲಿಷ್ಠವಾಗಲು ಯುವಜನತೆ ದುಶ್ಚಟಗಳನ್ನು ತ್ಯಜಿಸಿ ಸದೃಢರಾಗಬೇಕು ಎಂದರು.

    ರೇವಣಸಿದ್ಧೇಶ್ವರ ಜಾತ್ರೆಯ ನಿಮಿತ್ತ ಶನಿವಾರ ಸಂಜೆ 4 ಗಂಟೆಗೆ ಜಂಗಿ ನಿಕಾಲಿ ಕುಸ್ತಿ ಪಂದ್ಯ ನಡೆಯಿತು. ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗದ ಕುಸ್ತಿಪಟುಗಳು ಸೆಣಸಾಡಿದರು.

    ರಾತ್ರಿ 9 ಗಂಟೆಗೆ ಭುವನೇಶ್ವರ ನಾಟ್ಯ ಸಂಘ ಹುನ್ನೂರ ಅವರಿಂದ ದೀಪಾವಳಿ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts