More

    ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದತಿಗೆ ವಿರೋಧ

    ಬಾಗಲಕೋಟೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾನದಿಂದ ವಜಾ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಘಟಕದ ನೇತೃತ್ವದಲ್ಲಿ ನವನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ವಿಧಾನ ಪರಿಷತ್ ಸಚೇತಕ ಪ್ರಕಾಶ ರಾಠೋಡ ಮಾತನಾಡಿ, ನಮ್ಮ ನಾಯಕ ರಾಹುಲ್ ಗಾಂಧಿ ಹೇಳುವ ಸತ್ಯವನ್ನು ಅರಗಿಸಿಕೊಳ್ಳಲಾಗದೆ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನ ಪ್ರದರ್ಶಿಸಿದೆ ಎಂದರು.

    ಮಾಜಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಮೋದಿಯವರೇ ನೀವು ರಾಹುಲ್ ಗಾಂಧಿಯವರನ್ನು ಸಂಸತ್ ಸ್ಥಾನದಿಂದ ತೆಗೆದುಹಾಕಬಹುದು. ಆದರೆ, ಕೋಟ್ಯಂತರ ಭಾರತೀಯರು ತಮ್ಮ ಹೃದಯದಲ್ಲಿ ಅವರಿಗೆ ನೀಡಿರುವ ಸ್ಥಾನದಿಂದ ತೆಗೆದುಹಾಕುವುದು ಅಸಾಧ್ಯ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ನನ್ನ ಧಿಕ್ಕಾರ ಎಂದು ಹೇಳಿದರು.

    ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ಭಾರತ ಐಕ್ಯತಾಯಾತ್ರೆ ಮೂಲಕ ಕೋಟ್ಯಂತರ ಜನರ ಮನಸ್ಸು ಬೆಸೆದಿರುವ ರಾಹುಲ್ ಗಾಂಧಿ ಅವರ ನಡೆಯಿಂದ ಬಿಜೆಪಿ ವಿಚಲಿತವಾಗಿದೆ ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜ್ಯಯನಮಠ, ಮುಖಂಡ ಪರಶುರಾಮ ಮಹಾರಾಜರನವರ ಮಾತನಾಡಿದರು. ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಹನುಮಂತ ಡೋಣಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಬಿ.ಎಸ್.ಬಾರಿಗಡ್ಡಿ, ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಕಾಶಿನಾಥ ಹುಡೇದ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಬ್ಲಾಕ್ ಅಧ್ಯಕ್ಷ ಅಬ್ದುಲರಜಾಕ್ ಬೆಣ್ಣೂರ, ವಕ್ತಾರ ಸಿಕಂದರ ಅಥಣಿ, ಮುಖಂಡರಾದ ಮುತ್ತು ಜೋಳದ, ಸಂಗಣ್ಣ ಹಂಡಿ, ದ್ಯಾಮಣ್ಣ ಗಾಳಿ, ರೇಣುಕಾ ನ್ಯಾಮಗೌಡ, ಎ.ಎ.ದಂಡಿಯಾ, ಶಂಕರ ನಾಯಕ, ಅಜೇಯ ಕಪಾಟೆ, ಕಲಾವತಿ ಕಮತ, ವಿಜಯ ಮುಳ್ಳುರ, ಪ್ರೇಮನಾಥ ಗರಸಂಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts