More

    ರಾಷ್ಟ್ರವ್ಯಾಪ್ತಿ ಮುಷ್ಕರ: ಮೈಸೂರಿನಲ್ಲೂ ಪ್ರತಿಭಟನೆ

    ಮೈಸೂರು: ಕೇಂದ್ರ ಸರ್ಕಾರ ಜಾರಿ ತಂದಿರುವ ಕಾರ್ಮಿಕರ, ಜನರ, ರೈತರ ವಿರೋಧಿ ಕಾನೂನುಗಳ ವಾಪಸ್‌ಗೆ ಆಗ್ರಹಿಸಿ ವಿವಿಧ ಕಾರ್ಮಿಕರ ಸಂಘಟನೆಗಳು ಕರೆಕೊಟ್ಟಿರುವ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ನಗರದಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿವಿಧೆಡೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
    ಕಾರ್ಮಿಕ ಸಂಘಗಳ ಜಂಟಿ ಸಮಿತಿ ವತಿಯಿಂದ ಅಗ್ರಹಾರ ವೃತ್ತ, ಬಲ್ಲಾಳ್ ವೃತ್ತ, ಕೆಆರ್‌ಎಸ್ ರಸ್ತೆಯ ರಾಯಲ್ ಇನ್ ಹೋಟೆಲ್ ಬಳಿ, ಹೆಬ್ಬಾಳದ ಬಸವನಗುಡಿ, ಸೂರ್ಯ ಬೇಕರಿ, ವಿಜಯನಗರ ವಾಟರ್ ಟ್ಯಾಂಕ್ ಬಳಿ, ಒಂಟಿಕೊಪ್ಪಲಿನ ಮಾತೃಮಂಡಳಿ ವೃತ್ತ, ರೈಲ್ವೆ ನಿಲ್ದಾಣದ ಹತ್ತಿರ, ಹೂಟಗಳ್ಳಿ, ಕುಂಬಾರಕೊಪ್ಪಲು ಸೇರಿ 13 ಕಡೆ ಪ್ರತಿಭಟನೆಗಳು ಪ್ರತಿಧ್ವನಿಸಿದವು.
    ಅಲ್ಲದೆ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಪುರಭವನದ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
    ಕರೊನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಅನಿರೀಕ್ಷಿತವಾಗಿ ಲಾಕ್‌ಡೌನ್ ಜಾರಿ ಮಾಡಲಾಯಿತು. ಮೊದಲೇ ಕಷ್ಟದಲ್ಲಿರುವ ಕಾರ್ಮಿಕರ ಹಿತವನ್ನು ಕಾಪಾಡುವ ಬದಲಿಗೆ ಮತ್ತಷ್ಟು ಸಂಕಷ್ಟಕ್ಕೆ ನೂಕಲಾಯಿತು. ದೇಶದ ಆರ್ಥಿಕ ಸಾರ್ವಭೌಮತೆಗೂ ಧಕ್ಕೆ ತರಲಾಗಿದೆ. ರೈತ, ಸಂಪತ್ತನ್ನು ಸೃಷ್ಟಿಸುವ ಶ್ರಮಿಕರನ್ನು ಗುಲಾಮಗಿರಿಗೆ ಕೇಂದ್ರ ಸರ್ಕಾರ ತಳ್ಳಿದೆ. ಇಂತಹ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಮೊಳಗಿಸಿದರು.
    ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ನೂತನ ಕಾರ್ಮಿಕ ಸಂಹಿತೆ ಕೆಲಸಗಾರರನ್ನು ತೀವ್ರವಾಗಿ ಶೋಷಿಸಲು ಮಾಲೀಕರಿಗೆ ಹೆಚ್ಚಿನ ಸಾಮರ್ಥ್ಯ, ಅವಕಾಶ ನೀಡಿದೆ. ಆಳುವ ವರ್ಗಕ್ಕೆ ಅನಿರ್ಬಂಧಿತ ಅಧಿಕಾರ, ಅದಕ್ಕೆ ನಿರಂಕುಶ ಶಕ್ತಿ ನೀಡಲು ಮತ್ತು ನವ ಉದಾರೀಕರಣ ನೀತಿಗಳಿಗೆ ಅನುಗುಣವಾಗಿ ಈ ಸಂಹಿತೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಿಡಿಕಾರಿದರು.
    ಪ್ರತಿಭಟನೆಯಲ್ಲಿ ದೇಶಪ್ರೇಮಿ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಸಂಘಟನೆಗಳು, ಎಲ್‌ಐಸಿ, ಬ್ಯಾಂಕ್, ರಕ್ಷಣಾ ವಲಯ, ರೈಲ್ವೆ, ಬಿಎಸ್‌ಎನ್‌ಎಲ್, ಅಖಿಲ ಭಾರತ ಸಂಘಟನೆಗಳು, ಕಾರ್ಮಿಕರು, ನೌಕರರು, ಬೀದಿಬದಿ ವ್ಯಾಪಾರಸ್ಥರು, ಮನೆ ಕೆಲಸಗಾರರು, ಆಶಾ ನೌಕರರು, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

    10 ಕೆಜಿ ಉಚಿತ ಆಹಾರ ಧಾನ್ಯ ನೀಡಿ
    ಮುಷ್ಕರ ಬೆಂಬಲಿಸಿರುವ ಜನಾಂದೋಲನಗಳ ಮಹಾಮೈತ್ರಿಯು ಆದಾಯ ತೆರಿಗೆ ರಹಿತ ಕುಟುಂಬಗಳಿಗೆ 7500 ರೂ. ಪಾವತಿಸಬೇಕು. ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
    ಪ್ರತಿಯೊಬ್ಬರಿಗೂ ತಿಂಗಳಿಗೆ 10 ಕೆಜಿ ಉಚಿತ ಆಹಾರ ಧಾನ್ಯ ವಿತರಿಸಬೇಕು. ಎಂ-ನರೇಗಾ ಯೋಜನೆಯಡಿ ವರ್ಷಕ್ಕೆ 200 ಕೆಲಸದ ದಿನವನ್ನು ನೀಡಿ ಕೂಲಿ ದರವನ್ನು ದಿನಕ್ಕೆ 700 ರೂ. ನಿಗದಿ ಪಡಿಸಬೇಕು. ಈ ಯೋಜನೆಯನ್ನೂ ನಗರಕ್ಕೂ ವಿಸ್ತರಣೆ ಮಾಡಬೇಕು. ಸಾರ್ವಜನಿಕ ವಲಯ ಮತ್ತು ಸೇವಾ ಸಂಸ್ಥೆಗಳ ಖಾಸಗೀಕರಣವನ್ನು ಕೈಬಿಡಬೇಕು. ಎಲ್ಲ ಕಾರ್ಮಿಕರಿಗೂ 9 ಸಾವಿರ ರೂ. ಪಿಂಚಣಿ ನಿಗದಿ ಪಡಿಸಬೇಕು. ಎಂಪಿಎಸ್ ಅನ್ನು ರದ್ದುಗೊಳಿಸಬೇಕು. 21 ಸಾವಿರ ರೂ. ಕನಿಷ್ಠ ಕೂಲಿ ನಿಗದಿ ಮಾಡಬೇಕು. ಕಾರ್ಮಿಕ ಸಂಘದ ಮಾನ್ಯತೆಗೆ ಶಾಸನ ರೂಪಿಸಬೇಕು. ಗುತ್ತಿಗೆ ಕಾರ್ಮಿಕರಿಗೆ 180 ದಿನಗಳ ನಂತರ ಕಾಯಂ ಮಾಡಬೇಕು ಎಂದು ಮಹಾಮೈತ್ರಿ ಮುಖಂಡರಾದ ದೇವನೂರ ಮಹದೇವ, ಬಡಗಲಪುರ ನಾಗೇಂದ್ರ, ಅಭಿರುಚಿ ಗಣೇಶ್, ಚಂದ್ರಶೇಖರ್ ಮೇಟಿ ಆಗ್ರಹಿಸಿದ್ದಾರೆ.

    ಬ್ಯಾಂಕ್ ನೌಕರರ ಪ್ರತಿಭಟನೆ:
    ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ನಜರ್‌ಬಾದ್‌ನ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಯಿತು.
    90 ಕಾರ್ಮಿಕರ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ಪರಿವರ್ತಿಸಿ ಎಲ್ಲ ಕಾರ್ಮಿಕರ ವರ್ಗಗಳ ಹಕ್ಕುಗಳನ್ನು ಕೇಂದ್ರ ಸರ್ಕಾರವು ಕಸಿದುಕೊಂಡಿದೆ ಎಂದು ಪ್ರತಿಭಟನಾಕಾರರು ದೂರಿದರು.
    ಬ್ಯಾಂಕ್‌ಗಳ ಖಾಸಗೀಕರಣವನ್ನು ನಿಲ್ಲಿಸಬೇಕು. ಸಾರ್ವಜನಿಕ ಬ್ಯಾಂಕ್‌ಗಳನ್ನು ಬಲಗೊಳಿಸಲು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಯನ್ನು ಸ್ಥಗಿತಗೊಳಿಸಬೇಕು. ಹೊಸ ಪಿಂಚಣಿ ಪದ್ಧತಿ ವ್ಯವಸ್ಥೆಯನ್ನು ನಿಲ್ಲಿಸಬೇಕು. ಅನುತ್ಪಾದಕ ಸಾಲ ವಸೂಲಾತಿಗೆ ಬಿಗಿಯಾದ ಕ್ರಮ ಕೈಗೊಳ್ಳಬೇಕು. ಸಾಲ ಬಾಕಿ ಉಳಿಸಿಕೊಂಡಿರುವ ದೊಡ್ಡ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಠೇವಣಿ ಮೇಲಿನ ಹೆಚ್ಚಿನ ಬಡ್ಡಿದರ, ಹೆಚ್ಚಾದ ಸೇವಾ ಶುಲ್ಕಗಳನ್ನು ಇಳಿಸಬೇಕು ಎಂದು ಸಂಘದ ಕಾರ್ಯದರ್ಶಿ ಎಚ್.ಬಾಲಕೃಷ್ಣ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts