More

    ರಾಷ್ಟ್ರದ ಗಮನ ಸೆಳೆದ ಬೆಳಗಾವಿ ಜಿಲ್ಲಾಸ್ಪತ್ರೆ

    ಬೆಳಗಾವಿ: ರಾಜ್ಯದ ಗಡಿ ಭಾಗದ ಜನರಿಗೆ ಆರೋಗ್ಯ ಧಾಮವಾಗಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್)ಯು ಇದೀಗ ತನ್ನ ಗುಣಮಟ್ಟದ ಆರೋಗ್ಯ ಸೇವೆ, ಉತ್ತಮ ಆಡಳಿತದಿಂದಾಗಿ ದೇಶದ ಅತ್ಯುನ್ನತ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದುಕೊಂಡು ರಾಷ್ಟ್ರದ ಗಮನ ಸೆಳೆದಿದೆ. 1000 ಅಂಕಗಳ ಪೈಕಿ 540.34 ಅಂಕ ಪಡೆದುಕೊಂಡಿದೆ.

    ಹೌದು. ಕೇಂದ್ರ ಸರ್ಕಾರದ ಇಂಡಿಯ್ ಸೆಂಟರ್ ಫಾರ ಅಕಾಡೆಮಿಕ್ ರ‌್ಯಾಂಕಿಂಗ್ ಆ್ಯಂಡ್ ಎಕ್ಸ್‌ಲೆನ್ಸ್ (ಐಸಿಆರ್‌ಇ), ಖಾಸಗಿ ನಿಯತಕಾಲಿಕ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಮೌಲ್ಯಮಾಪನಕ್ಕಾಗಿ 2021-22ನೇ ಸಾಲಿನಲ್ಲಿ ದೇಶದಲ್ಲಿನ ಸುಮಾರು 270 ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕುರಿತು ಜಂಟಿ ಸಮೀಕ್ಷೆ ನಡೆಸಿದೆ. ಅದರಲ್ಲಿ ಉತ್ತಮ ಆಡಳಿತ, ಮೂಲಭೂತ ಸೌಕರ್ಯ, ಸಂಶೋಧನೆ, ಶೈಕ್ಷಣಿಕ ಮಟ್ಟ ಹಾಗೂ ಉತ್ತಮ ಆರೋಗ್ಯ ಸೇವೆಯಿಂದಾಗಿ ದೇಶದ 13 ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ದೆಹಲಿಯ ಏಮ್ಸ್ ಪ್ರಥಮ, ಉತ್ತರ ಪ್ರದೇಶದ ವಾರಣಾಸಿಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬನಾರಸ್ ಹಿಂದೂ ವಿವಿ ದ್ವಿತೀಯ ಸ್ಥಾನ ಪಡೆದಿವೆ. ಒಟ್ಟಾರೆ ಟಾಪ್ 13 ವ್ಯದ್ಯಕೀಯ ಸಂಸ್ಥೆಗಳಲ್ಲಿ ಬೆಳಗಾವಿ ಬಿಮ್ಸ್ 12ನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಬಿಮ್ಸ್ ಒಂದೇ ಸಂಸ್ಥೆಯು ಈ ಸ್ಥಾನ ಪಡೆದುಕೊಂಡಿರುವುದು ವಿಶೇಷ ಎನ್ನಲಾಗಿದೆ.

    ಭಾರತೀಯ ವೈದ್ಯ ಪರಿಷತ್ತಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಮ್ಸ್‌ನಲ್ಲಿ ನುರಿತ ತಜ್ಞರು ಹಾಗೂ ಪರಿಣಿತ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಅನೇಕ ಪದವಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆ ತೋರಿ 100ರ ಒಳಗಿನ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಅಲ್ಲದೆ, 2010 ರಿಂದ 2022ರ ನಡುವಿನ ಅವಧಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಸಂಶೋಧನೆಗಳಲ್ಲಿ ಬಿಮ್ಸ್ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ, ಈ ಸಂಸ್ಥೆಯಲ್ಲಿ ಕಲಿತಿರುವ ವಿದ್ಯಾರ್ಥಿಗಳೇ ರಾಷ್ಟ್ರ ಮಟ್ಟದ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ಜಿಲ್ಲಾಮಟ್ಟದಲ್ಲಿ 260ಕ್ಕೂ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಪೈಕಿ ಸುಮಾರು 120 ವೈದ್ಯಕೀಯ ಸಂಸ್ಥೆಗಳು ಮಾತ್ರ ಸಮೀಕ್ಷೆ ವೇಳೆ ಸರಿಯಾದ ಅಂಕಿ-ಸಂಖ್ಯೆಗಳು, ದಾಖಲೆಗಳನ್ನು ಒದಗಿಸಿವೆ. ಇನ್ನ್ನುಳಿದ ಸಂಸ್ಥೆಗಳು ಯಾವುದೇ ಮಾಹಿತಿ ಹಂಚಿಕೆ ಮಾಡಿಕೊಂಡಿಕೊಂಡಿಲ್ಲ. ಎಲ್ಲ ವೈದ್ಯಕೀಯ ಸಂಸ್ಥೆಗಳ ಸಮೀಕ್ಷೆ ನಡೆಸಿರುವ ಐಸಿಆರ್‌ಇ ಜಂಟಿ ತಂಡವು 2022 ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ಭೇಟಿ ನೀಡಿ ಅಂತಿಮ ರ‌್ಯಾಂಕಿಂಗ್ ಪಟ್ಟಿ ಪ್ರಕಟಿಸಲಿದೆ ಎಂದು ಬಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಬಿಮ್ಸ್ ಸ್ಥಾಪನೆ, ಸಾಧನೆ

    ಬೆಳಗಾವಿ ನಗರದ ಹೃದಯಭಾಗದ 33.25 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿ 2005ರಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್)ಯು ತಲೆಯೆತ್ತಿತು. ರಾಜೀವ ಗಾಂಧಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಹೊಂದಿರುವ ಬಿಮ್ಸ್ ಭಾರತೀಯ ವೈದ್ಯ ಪರಿಷತ್ತಿನ ಅನುಮತಿಗೆ ಒಳಪಟ್ಟಿದೆ. 100 ಎಂಬಿಬಿಎಸ್ ಪದವಿಗಳ ಪ್ರವೇಶ ಮಿತಿಯಲ್ಲಿ ಆರಂಭಗೊಂಡಿತ್ತು. 2017ರಲ್ಲಿ ಪ್ರವೇಶ ಮಿತಿಯು 100 ರಿಂದ 150ಕ್ಕೆ ಏರಿಕೆಯಾಯಿತು. ಈ ಸಂಸ್ಥೆಯು 2011-12ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರವೇಶಕ್ಕೆ (ಫ್ರಿ ಮತ್ತು ಪ್ಯಾರಾಕ್ಸಿನಿಕಲ್ ವಿಭಾಗಗಳು) ಮಾನ್ಯತೆ ಪಡೆದುಕೊಂಡಿದೆ. ಈ ಸಂಸ್ಥೆಯಲ್ಲಿ ಪ್ರತಿ ವರ್ಷ ಎಲ್ಲ ಪದವಿಗಳು ಸೇರಿದಂತೆ 1110 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಖಿಲ ಭಾರತ ಕೋಟಾದಡಿ ಹೊರ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯುತ್ತಾರೆ. ಅಲ್ಲದೆ, ಎಂಬಿಬಿಎಸ್ ಪದವಿ ಹೊಂದಿ 10 ತಂಡಗಳಲ್ಲಿ 833 ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಅದೇ ರೀತಿ ಸ್ನಾತಕೋತ್ತರ ಪದವಿ ಹೊಂದಿ ಒಟ್ಟು 7 ತಂಡಗಳಲ್ಲಿ 80 ವಿದ್ಯಾರ್ಥಿಗಳು ಹೊರಹೊಮ್ಮಿದ್ದಾರೆ. ಸದ್ಯ ವಿವಿಧ ಪದವಿ, ಕೋರ್ಸ್‌ಗಳಲ್ಲಿ 1,500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 550ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ ಎನ್ನಲಾಗಿದೆ. ಅಲ್ಲದೆ, ರಾಜ್ಯ ಸರ್ಕಾರವು 2017ರಲ್ಲಿಯೇ ಬಿಮ್ಸ್ ಆವರಣದಲ್ಲಿ 250 ಹಾಸಿಗೆಗಳ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಅನುಮತಿ ನೀಡಿದೆ. ಇದೀಗ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದೆ.

    ಶೈಕ್ಷಣಿ, ಸಂಶೋಧನೆ, ಮೂಲಭೂತ ಸೌಕರ್ಯ ಹಾಗೂ ಉತ್ತಮ ಆಡಳಿತದಿಂದಾಗಿ ಐಸಿಆರ್‌ಇ ಹಾಗೂ ಖಾಸಗಿ ನಿಯತಕಾಲಿಕ ನಡೆಸಿದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಮೌಲ್ಯಮಾಪನದ ಜಂಟಿ ಸಮೀಕ್ಷೆಯಲ್ಲಿ ಬಿಮ್ಸ್ 12ನೇ
    ಸ್ಥಾನ ಪಡೆದುಕೊಂಡಿದೆ. ಸಮೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಪ್ಲೇಸ್‌ಮೆಂಟ್, ಸಂಶೋಧನೆ ಸೇರಿದಂತೆ ವಿವಿಧ ವಿಭಾಗಗಳ ಸುಧಾರಣೆಗೆ ಕ್ರಮ ವಹಿಸಲಾಗುವುದು. 2022 ಅಕ್ಟೋಬರ್‌ನಲ್ಲಿ ಅಂತಿಮ ಸಮೀಕ್ಷಾ ವರದಿ ಬಳಿಕ ರ‌್ಯಾಂಕಿಂಗ್ ಪ್ರಕಟವಾಗಲಿದೆ.
    | ಆಮ್ಲಾನ್ ಆದಿತ್ಯ ಬಿಸ್ವಾಸ್ ಬಿಮ್ಸ್ ವಿಶೇಷ ಆಡಳಿತಾಧಿಕಾರಿ, ಪ್ರಾದೇಶಿಕ ಆಯುಕ್ತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts