More

    ರಾಮೇಶ್ವರದಲ್ಲಿ ಕಾಶಿ ಪೀಠದ ಶಾಖೆ: ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯರು

    ಶಿಕಾರಿಪುರ: ಭಕ್ತರ ಅನುಕೂಲಕ್ಕಾಗಿ ಕಾಶಿಪೀಠದ ಶಾಖಾಮಠವನ್ನು ರಾಮೇಶ್ವರದಲ್ಲಿ ಸ್ಥಾಪಿಸಲಾಗುವುದು ಎಂದು ಕಾಶಿ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
    ಗುರುವಾರ ಸಮೀಪದ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಏರ್ಪಡಿಸಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ರುದ್ರಾಕ್ಷಿ ಧಾರಣೆಯ ಧಾರ್ಮಿಕ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಕಾಶಿ ವಿಶ್ವನಾಥನ ದೇಗುಲ ಅಭಿವೃದ್ಧಿ ಮಾಡಿದ ಮೇಲೆ ಕಾಶಿಗೆ ಬರುವ ಯಾತ್ರಿಕರ ಸಂಖ್ಯೆ ಜಾಸ್ತಿಯಾಗಿದೆ. ಅಲ್ಲಿಗೆ ಬಂದ ಕನ್ನಡಿಗರು ಜಂಗಮವಾಡಿ ಮಠಕ್ಕೂ ಭೇಟಿ ನೀಡುತ್ತಾರೆ. ಕಾಶಿಗೆ ಬಂದವರು ರಾಮೇಶ್ವರಕ್ಕೆ ಹೋಗಬೇಕೆಂಬ ಪ್ರತೀತಿಯಿದೆ. ಈಗ ಪ್ರತಿದಿನ ಸಾವಿರಾರು ಭಕ್ತರು ಕಾಶಿಯ ಜಂಗಮವಾಡಿ ಮಠಕ್ಕೆ ಯಾವುದೇ ಜಾತಿ, ಮತ, ಧರ್ಮದ ಬೇಧವಿಲ್ಲದೆ ಬಂದು ಹೋಗುತ್ತಾರೆ. ಇನ್ನು ಮುಂದೆ ರಾಮೇಶ್ವರದ ಶಾಖಾ ಮಠಕ್ಕೂ ಬಂದು ಹೋಗಬಹುದು ಎಂದು ಹೇಳಿದರು.
    ಲೋಕ ಕಲ್ಯಾಣಕ್ಕಾಗಿ ಮಾಡುವ ಎಲ್ಲ ಕೆಲಸಗಳು ತಪಸ್ಸು, ಸಮಾಜಮುಖಿ ಬದುಕಿನಿಂದಲೇ ನಾವು ಸಾರ್ಥಕತೆ ಪಡೆಯುತ್ತೇವೆ. ಋಷಿಮುನಿಗಳು ಯಾವತ್ತೂ ತಮಗಾಗಿ ತಪಸ್ಸು ಮಾಡಲಿಲ್ಲ. ಅವರ ಸಂದೇಶ ಒಂದೇ. ಸರ್ವೇ ಜನಾ; ಸುಖಿನೋ ಭವಂತು ಎನ್ನುವುದು ಸಮಾಜೋನ್ನತಿ ನಮ್ಮ ಧ್ಯೇಯವಾಗಬೇಕು. ಇದೊಂದು ಐತಿಹಾಸಿಕವಾದ ದಿನ. ಸಿದ್ದಲಿಂಗ ಸ್ವಾಮಿಗಳ ತಪೋಬಲದಿಂದ ಇಲ್ಲಿ ಅಧ್ಯಾತ್ಮದ ತಂಗಾಳಿ ಬೀಸುತ್ತಿದೆ. ಶತಮಾನ ಕಂಡ ಹಾನಗಲ್ ಕುಮಾರಸ್ವಾಮಿಗಳ ಕನಸಿನ ಕೂಸು ಶಿವಯೋಗಾಶ್ರಮದಲ್ಲಿ ಹೊಸಬೆಳಕು ಮೂಡಿದೆ. ಇದಕ್ಕೆ ಅವರ ಸಂಕಲ್ಪ ಶಕ್ತಿಯೇ ಕಾರಣ. ಇದೊಂದು ಪುಣ್ಯದ ಮಣ್ಣು. ಶಿವಯೋಗಾಶ್ರಮದ ವಾತಾವರಣ ತುಂಬ ಪ್ರೇರಣಾದಾಯಕವಾಗಿದೆ. ನಾವು ಮುಂದಿನ ದಿನಗಳಲ್ಲಿ ಒಂದು ವಾರಗಳ ಕಾಲ ಇಲ್ಲಿ ತಂಗಿ ಇಷ್ಟಲಿಂಗ ಮಹಾಪೂಜೆ ಕೈಗೊಳ್ಳುವ ಮನಸ್ಸಾಗಿ. ಬಹುಶಃ ಈ ಕಾರಣದಿಂದಲೇ ನೂರು ವರ್ಷಗಳ ಹಿಂದೆ ಹಾನಗಲ್ ಕುಮಾರಸ್ವಾಮಿಗಳು ಈ ಜಾಗವನ್ನು ಆಯ್ಕೆ ಮಾಡಿಕೊಂಡಿರಬೇಕು ಎಂದು ಹೇಳಿದರು.
    ಯಡಿಯೂರಪ್ಪ ಅವರು ಕೂಡ ಕಳೆದ ಐದು ದಶಕಗಳಿಂದ ಜನಪರವಾದ ಹೋರಾಟದ ತಪಸ್ಸು ಮಾಡಿ ಬಿಜೆಪಿಗೆ ಅಧಿಕಾರ ತಂದುಕೊಟ್ಟಿದ್ದಲ್ಲದೇ ಜನರ ಹೃದಯದಲ್ಲಿ ಒಬ್ಬ ಅಪ್ರತಿಮ ಜನನಾಯಕನಾಗಿ ನೆಲೆ ನಿಂತಿದ್ದಾರೆ. ಅವರ ಮಕ್ಕಳು ಕೂಡ ತಂದೆಯಂತೆಯೇ ಸಂಸ್ಕಾರವಂತರಾಗಿದ್ದಾರೆ. ವಿಜಯೇಂದ್ರ ಅವರಿಗೆ ಈ ಬಾರಿ ತಾಲೂಕಿನಲ್ಲಿ ಜನಸೇವೆ ಮಾಡುವ ಅವಕಾಶ ಲಭ್ಯವಾಗಲಿದೆ ಎಂದರು.
    ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಮನಸ್ಸುಗಳು ನಿರ್ಮಲವಾಗಲು ನಮಗೆ ಆಧ್ಯಾತ್ಮಿಕ ಶಕ್ತಿಯ ಅಗತ್ಯವಿದೆ. ಭಾರತ ಜಗತ್ತಿಗೇ ಹಿರಿಯಣ್ಣ ಎನಿಸಿದ್ದು ಅಧ್ಯಾತ್ಮದ ಬಲ ನಮಗೆ ನಿತ್ಯ ಚೈತನ್ಯ ತಂದುಕೊಡುತ್ತಿದೆ. ಆಧುನಿಕತೆಯ ಭರದಲ್ಲಿ ನಾವು ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಆಚರಣೆಗಳನ್ನು ನಾವು ದೂರೀಕರಿಸಿ ಮುಂದೆ ಸಾಗುತ್ತಿದ್ದೇವೆ ಮಾನವೀಯ ಮೌಲ್ಯಗಳು ನಶಿಸುತ್ತಿವೆ. ಯುವ ಶಕ್ತಿದೇಶದ ನಿಜವಾದ ದೇಶ ಶಕ್ತಿ. ಆದರೆ ಯುವಪೀಳಿಗೆಗಳು ಇಂದು ವಿಭಿನ್ನ ದಿಕ್ಕುಗಳಲ್ಲಿ ಸಾಗುತ್ತಿವೆ. ನಾವು ಸಂಸ್ಕಾರದ ಕೊರತೆಯಿಂದ ನಾವು ಬಳಲುತ್ತಿದ್ದೇವೆ. ಆದರೆ ಧರ್ಮ ಮಾರ್ಗದಲ್ಲಿ ನಾವು ಸಾಗಿದಾಗ ನಮ್ಮ ಬದುಕಿನ ಶೈಲಿ ಬದಲಾಗುತ್ತದೆ ಎಂದು ತಿಳಿಸಿದರು.

    ಕಾಳೇನಹಳ್ಳಿಯಲ್ಲಿ ಸಂಭ್ರಮ: ಕಾಶಿ ಜಗದ್ಗುರುಗಳ ಆಗಮನದಿಂದ ಅನುಷ್ಠಾನದ ಮಣ್ಣಿನಲ್ಲಿ ಹೊಸ ಸಂಚಲನ ಉಂಟಾಗಿ ಊರಿಗೆ ಊರೇ ತಳಿರು, ತೋರಣ, ರಂಗೋಲಿಗಳಿಂದ ಅಲಂಕೃತವಾಗಿತ್ತು. ಸಾಂಪ್ರದಾಯಿಕ ವಾದ್ಯಗಳು, ವೇದ ಘೋಷಗಳು, ಜೈಕಾರಗಳು ಜತೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮಕ್ಕೆ ಸಾರೋಟಿನಲ್ಲಿ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಸಾಂಪ್ರದಾಯಿಕ ಉಡುಗೆಗಳಲ್ಲಿ ಜನರು ಕಂಡರು. ಕಾಶಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮತ್ತು ರುದ್ರಾಕ್ಷಿ ಧಾರಣ ಕಾರ್ಯಕ್ರಮದಿಂದ ಗುರು, ವಿರಕ್ತರ ಸಮಾಗಮವನ್ನು ಭಕ್ತರು ಕಣ್ತುಂಬಿಕೊಂಡರು. ನೇಪಾಳದ ಪಶುಪತಿನಾಥ ದೇವಾಲಯದಿಂದ ಮತ್ತು ಕಾಶಿ ವಿಶ್ವೇಶ್ವರನ ಸನ್ನಿಧಾನದಿಂದ ತಂದಂತಹ ರುದ್ರಾಕ್ಷಿ ಗಳನ್ನು ಜಗದ್ಗುರುಗಳ ಅಭಯಾನುಗ್ರಹದ ನೆರಳಿನಲ್ಲಿ ಭಕ್ತರಿಗೆ ಹಂಚಲಾಯಿತು. ಜಗದ್ಗುರುಗಳನ್ನು ಭೇಟಿ ಮಾಡಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಶೀರ್ವಾದ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts