More

    ರಾತ್ರಿ ಸಮಯದಲ್ಲಿ ಅನಗತ್ಯ ಸಂಚಾರ ನಿಲ್ಲಿಸಿ

    ತಿ. ನರಸೀಪುರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆ ಹಾವಳಿ ಇರುವುದರಿಂದ ಸಂಜೆ ಹಾಗೂ ರಾತ್ರಿ ವೇಳೆ ಅನಗತ್ಯ ಸಂಚಾರ ನಿಲ್ಲಿಸಬೇಕು ಎಂದು ಸಬ್‌ಇನ್ಸ್‌ಪೆಕ್ಟರ್ ತಿರುಮಲೇಶ್ ಹೇಳಿದ್ದಾರೆ.
    ಪಡಸಾಲೆಗಳಲ್ಲಿ ಮಲಗುವುದು, ಹೊರವಲಯದಲ್ಲಿ ಮದ್ಯಪಾನ ಮಾಡಿ ಗುಂಪು ಸೇರುವುದನ್ನು ನಿಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.


    ಈಗಾಗಲೇ ತಾಲೂಕಿನಲ್ಲಿ ಚಿರತೆ ದಾಳಿಯಿಂದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಸಾರ್ವಜನಿಕರು ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಅನಗತ್ಯ ಸಂಚಾರ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.


    ತಿ.ನರಸೀಪುರ ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳು, ತಳ್ಳುವ ಗಾಡಿ ವ್ಯಾಪಾರಸ್ಥರು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗದಂತೆ ವ್ಯಾಪಾರ ವಹಿವಾಟು ನಡೆಸಬೇಕು. ಆಟೋ, ಗೂಡ್ಸ್ ವಾಹನಗಳಿಗೆ ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಪರವಾನಗಿ ಹೊಂದಿರಬೇಕು. ನಿಗದಿತ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯಬೇಕು. ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು. ಗಾರ್ಮೆಂಟ್ಸ್‌ಗೆ ಕರೆತರುವ ಆಟೋಗಳಲ್ಲಿ ನಿಯಮಿತ ಸಂಖ್ಯೆಯಲ್ಲಿ ಪ್ರಯಾಣಿಕರಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.


    ಅಕ್ರಮ ಮರಳು ಸಾಗಣೆ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ, ಕೆಲ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೊರವಲಯದಲ್ಲಿ ನದಿ ದಂಡೆಯಲ್ಲಿ, ದೇವಾಲಯಗಳ ಬಳಿ ಅಸಭ್ಯ ವರ್ತನೆ ತೋರುತ್ತಿರುವ ದೂರುಗಳಿದ್ದು, ಅಂಥವರು ಕಂಡು ಬಂದಲ್ಲಿ ಪಾಲಕರು, ಕಾಲೇಜು ಮಂಡಳಿ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.


    ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಪ್ರಕರಣಗಳ ದೂರುಗಳಿದ್ದು, ಪಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ, ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಎಚ್ಚರ ವಹಿಸುವಂತೆ ಹಾಗೂ ಎಟಿಎಂಗಳಲ್ಲಿ ಹಣ ಡ್ರಾ ಮಾಡುವ ವೇಳೆ ಅಪರಿಚಿತರಿಗೆ ಮಾಹಿತಿ, ಪಿನ್ ಸಂಖ್ಯೆ ನೀಡದಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts