More

    ರಾಣಿ ಚನ್ನಮ್ಮ ವಿವಿ ಅಧಿಕಾರಿಗಳಿಗೆ ಡಿಸಿ ತರಾಟೆ

    ಹಿರೇಬಾಗೇವಾಡಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೂತನ ಕಟ್ಟಡ ಕಾಮಗಾರಿಗಳಿಂದ ರೈತರಿಗೆ ಸಮಸ್ಯೆ ಉಂಟಾಗಬಾರದು. ಕಾಮಗಾರಿ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡಿದರೆ ಮುಲಾಜಿಲ್ಲದೆ ಕ್ರಮ ವಹಿಸಬೇಕಾಗುತ್ತದೆ ಎಂದು ವಿವಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದರು.

    ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಣಿ ಚನ್ನಮ್ಮ ವಿವಿ ಕಟ್ಟಡ ಕಾಮಗಾರಿಗಳ ಸ್ಥಳಕ್ಕೆ ಸೋಮವಾರ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ರೈತರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಇಲ್ಲಿನ ರೈತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ವಿವಿ ಎಚ್ಚರಿಕೆಯಿಂದ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕಟ್ಟಡಕ್ಕಾಗಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯಿಂದಾಗಿ ಹೊಲಗಳಿಗೆ ಹೋಗಲು ದಾರಿ ಇಲ್ಲದಂತಾಗಿದೆ. ಗುಡ್ಡದ ಪಕ್ಕದಲ್ಲಿನ ಜಮೀನುಗಳ ರೈತರು ಅನಾದಿಕಾಲದಿಂದ ತಮ್ಮ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡಿದ್ದಾರೆ. ಆದರೆ, ಇದೀಗ ವಿವಿ ಅಧಿಕಾರಿಗಳು ಕೃಷಿ ಜಮೀನುಗಳಿಗೆ ಹೋಗುವ ದಾರಿಯನ್ನು ಬಂದ್ ಮಾಡಿದ್ದಾರೆ. ರೈತರ ಹೊಲಗಳ ವ್ಯಾಪ್ತಿ ಗುರುತಿಸಲು ಹಾಕಲಾದ ಹದ್ದು ಬಸ್ತಿನ ಕಲ್ಲುಗಳನ್ನು ಕಿತ್ತೆಸೆದು ರೈತರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಅಲ್ಲದೆ, ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ರೈತರು ಜಿಲ್ಲಾಧಿಕಾರಿಗೆ ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ರೈತರಿಗೆ ತೊಂದರೆಗಳಾಗದಂತೆ ಮತ್ತು ಅವರಿಂದ ತಕರಾರುಗಳು ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ವಿವಿಯವರದ್ದು.

    ರೈತರ ಜಮೀನುಗಳ ಹದ್ದುಬಸ್ತು ಕಲ್ಲುಗಳನ್ನು ಸರಿ ಮಾಡಲು ರೈತರು ತಮ್ಮ ಹೊಲಗಳ ದಾಖಲೆಗಳ ನಕಲು ಪ್ರತಿಗಳನ್ನು ತೆಗೆಯಿಸಲು ತಿಳಿಸಿ ಪರಿಸ್ಥಿತಿ ಸರಿಯಾಗುವವರೆಗೂ ಸಹಕರಿಸುವಂತೆ ರೈತರಲ್ಲಿ ಮನವಿ ಮಾಡಿದರು. ಡಿಸಿಪಿ ರವೀಂದ್ರ ಗಡಾದಿ, ಸಿಪಿಐ ವಿಜಯಕುಮಾರ ಸಿನ್ನೂರ, ಎಸಿ ಬಲರಾಮ ಚವಾಣ, ಡಾ ಬಸವರಾಜ ಪದ್ಮಸಾಲಿ, ಇಂಜಿನಿಯರ್ ವಾಲಿಕಾರ, ರೈತರಾದ ಉಳವಪ್ಪ ನಂದಿ, ಕೆಪಿಸಿಸಿ ಸದಸ್ಯ ಸುರೇಶ ಇಟಗಿ, ಶ್ರೀಕಾಂತ ಮಾಧುಭರಮಣ್ಣವರ, ವಿಲಾಸ ಜೋಶಿ, ಬಿ.ಎನ್. ಪಾಟೀಲ, ತಮ್ಮಣ್ಣ ಗಾಣಿಗೇರ, ಅಡಿವೇಶ ಇಟಗಿ, ಮಂಜುನಾಥ ಧರೆಣ್ಣವರ, ರಾಜು ರೊಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts