More

    ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ರೈತರು

    ಹಾವೇರಿ: ವಿದ್ಯುತ್ ಖಾಸಗೀಕರಣಕ್ಕೆ ವಿರೋಧ ಹಾಗೂ ಹಾವೇರಿಯನ್ನು ಅತಿವೃಷ್ಟಿ ಜಿಲ್ಲೆಯೆಂದು ಘೊಷಿಸಲು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

    ನಗರದ ಕಾಗಿನೆಲೆ ರಸ್ತೆಯ ಮುರುಘಾಮಠದಿಂದ ಆರಂಭಗೊಂಡ ಮೆರವಣಿಗೆ ಪಿಬಿ ರಸ್ತೆ ಮೂಲಕ ಸಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು. ನಂತರ ಕೆಲ ಹೊತ್ತು ರಸ್ತೆ ಸಂಚಾರ ತಡೆದು ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಂಜಿ ರೋಡ್, ಜೆಪಿ ಸರ್ಕಲ್, ಜೆಎಚ್ ಪಟೇಲ್ ಸರ್ಕಲ್, ಮುನ್ಸಿಪಲ್ ಹೈಸ್ಕೂಲ್ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

    ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಆರ್.ವಿ. ಕೆಂಚಳ್ಳೇರ ಮಾತನಾಡಿ, ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದರೂ ಅಧಿಕಾರಿಗಳು ಸರಿಯಾದ ಸಮೀಕ್ಷೆ ನಡೆಸಿಲ್ಲ. ಜಿಲ್ಲೆಯಲ್ಲಿ 3.30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿದ್ದು, ಮೆಕ್ಕೆಜೋಳ, ಹತ್ತಿ, ಸೋಯಾಬೀನ್, ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದೆ. ಆದರೆ, ಕೃಷಿ ಇಲಾಖೆ ಪಾರದರ್ಶಕತೆಯಿಂದ ಸಮೀಕ್ಷೆ ನಡೆಸದೇ ಕೇವಲ 66 ಸಾವಿರ ಹೆಕ್ಟೇರ್ ಪ್ರದೇಶ ನಷ್ಟವಾಗಿದೆ ಎಂದು ವರದಿ ಸಿದ್ಧಪಡಿಸಿರುವುದು ರೈತರಿಗೆ ಮಾಡಿರುವ ಅನ್ಯಾಯವಾಗಿದೆ. ಕೂಡಲೆ ಮರು ಸಮೀಕ್ಷೆ ಮಾಡಿ ಸರ್ಕಾರಕ್ಕೆ ಸರಿಯಾದ ವರದಿ ಸಲ್ಲಿಸಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸೇರಿ ಪ್ರತಿ ಹೆಕ್ಟೆರ್​ಗೆ 13,600 ಕೊಡುವುದಾಗಿ ನಿರ್ಧರಿಸಿದೆ. ಆದರೆ, ಈ ಹಣ ಬೀಜ ಗೊಬ್ಬರ ಖರೀದಿಗೂ ಸಾಲುವುದಿಲ್ಲ. ಆದ್ದರಿಂದ 1 ಎಕರೆಗೆ 25 ಸಾವಿರ ರೂ. ಹಾಗೂ ತೋಟಗಾರಿಕೆ ಬೆಳೆಗೆ ಎಕರೆಗೆ 50 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

    ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮಳೆಯಿಂದಾಗಿ ಜಿಲ್ಲೆಯಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಪ್ರದೇಶದ ಬೆಳೆ ಹಾನಿಯಾಗಿದೆ. ಬರಗಾಲ ಬಿದ್ದರೆ ಬಿತ್ತನೆ ಮಾಡುವುದಿಲ್ಲ. ಈಗ ಬಿತ್ತನೆ ಮಾಡಿರುವ ಬೀಜ, ಗೊಬ್ಬರವೂ ನೀರು ಪಾಲಾಗಿದೆ. ಬರಗಾಲ ಬಿದ್ದಾಗ ಹೇಗೆ ಸರ್ಕಾರ ಎಲ್ಲ ರೈತರಿಗೂ ಪರಿಹಾರ ಕೊಡುತ್ತೋ ಹಾಗೆಯೇ ಇದನ್ನು ‘ಹಸಿ ಬರಗಾಲ’ ಎಂದು ಘೊಷಿಸಿ ಎಲ್ಲ ರೈತರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ತುಂಗಾ ಮೇಲ್ದಂಡೆ ಯೋಜನೆಗೆ ರೈತರು ಜಮೀನು ಕಳೆದುಕೊಂಡು 20 ವರ್ಷ ಗತಿಸಿದರೂ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ನೀರಾವರಿ ಇಲಾಖೆಗೆ ಹೇಳಿ ಭೂ ಪರಿಹಾರ ಒದಗಿಸಬೇಕು.

    | ಆರ್.ವಿ. ಕೆಂಚಳ್ಳೇರ, ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts