More

    ರಾಜ್ಯ ರೈತ ಸಂಘದಿಂದ ಫೆ.16ಕ್ಕೆ ಬೆಂಗಳೂರು ಚಲೋ

    ದಾವಣಗೆರೆ: ರಾಜ್ಯ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಆಂಧ್ರ-ತೆಲಂಗಾಣ ಮಾದರಿಯಲ್ಲಿ 1 ಎಕರೆ ಹೊಂದಿರುವ ರೈತರಿಗೆ 10 ಸಾವಿರ ರೂ. ಇನ್‌ಸೆಂಟಿವ್ ಜಾರಿಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಫೆ.16ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದೆ.
    ಕೇವಲ ರೈತರಲ್ಲದೆ ದಲಿತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರು ಹಾಗೂ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಫೆ. 16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನ ಚಳವಳಿಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪ್ರತಿಭಟನೆಯಲ್ಲಿ 25 ಸಾವಿರ ಜನರು ಭಾಗವಹಿಸುವರು. ಅಂದಿನ ಸಭೆಗೆ ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಹಾಗೂ ಸಾಮಾಜಿಕ ಹೋರಾಟಗಾರ ಸಿ.ಎಂ. ಹಿರೇಮಠ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
    ಸಾಲ ಬಾಕಿ ತೀರುವಳಿಗೆ ರೈತರ ಮನೆ, ಜಮೀನು ಹರಾಜು ಮಾಡದಂತೆ ತಡೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಳಬಾಳು ಮಠದಲ್ಲಿ ನೀಡಿದ್ದ ಭರವಸೆ ಇದುವರೆಗೆ ಈಡೇರಿಲ್ಲ. ಮುಂಬರುವ ಬಜೆಟ್‌ಗೂ ಮುನ್ನ ಇದನ್ನು ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು.
    ಚಾಮರಾಜನಗರದಲ್ಲಿ ಫೆ.13ರಂದು, ರೈತರಿಗೆ ಧ್ವನಿ ನೀಡಿದ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತಿದೆ. ರಾಜ್ಯ ರೈತ ಸಂಘದಲ್ಲಿ ಯುವಕರನ್ನು ಚುರುಕಾಗಿಸುವ ಹಿನ್ನೆಲೆಯಲ್ಲಿ ಯುವ ರೈತ ಘಟಕಕ್ಕೆ ಅಂದು ಚಾಲನೆ ನೀಡಲಾಗುವುದು. ಇದಕ್ಕಾಗಿ ಜಿಲ್ಲಾವಾರು 100 ಜನ ಯುವಕರನ್ನು ಆಯ್ಕೆ ಮಾಡಲಾಗಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಎಂ. ಶಂಕರಪ್ಪ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಅಕ್ಕಿ, ರಾಜ್ಯ ವಿಭಾಗೀಯ ಕಾರ್ಯದರ್ಶಿ ಅರುಣ್‌ಕುಮಾರ್ ಕುರುಡಿ, ಬನ್ನೂರು ಕೃಷ್ಣಪ್ಪ, ಹಿರಿಯೂರು ಹೊರಕೇರಪ್ಪ, ಬುಳ್ಳಾಪುರ ಹನುಮಂತಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts