More

    ರಾಜ್ಯ ನದಾಫ್-ಪಿಂಜಾರ ಸಂಘದಿಂದ ಧರಣಿ; ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

    ವಿಜಯಪುರ: ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದ ನದಾಫ್ ಹಾಗೂ ಪಿಂಜಾರ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಆಗ್ರಹಿಸಿ ರಾಜ್ಯ ನದಾಫ್-ಪಿಂಜಾರ್ ಸಂಘದಿಂದ ಒಂದು ದಿನದ ಧರಣಿ ನಡೆಯಿತು.
    ಇಲ್ಲಿನ ಜಿಲ್ಲಾಡಳಿತ ಕಚೇರಿ ಮುಂಭಾಗ ಬುಧವಾರ ಧರಣಿ ನಡೆಸಿದ ಸಂಘದ ಪದಾಧಿಕಾರಿಗಳು, ಪ್ರತ್ಯೇಕ ನಿಗಮಕ್ಕೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
    ಕೇಂದ್ರ ಸರ್ಕಾರ ನದಾಫ್ ಮತ್ತು ಪಿಂಜಾರ ಸಮುದಾಯವನ್ನು ‘ಒಬಿಸಿ’ ಪಟ್ಟಿಗೆ ಸೇರ್ಪಡೆ ಮಾಡಿದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಕಾಯ್ದೆಯಲ್ಲಿಯೂ ಪಿಂಜಾರ ಮತ್ತು ನದಾಫ್ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯ ಎಂದು ಗುರುತಿಸಲಾಗಿದೆ. ಸದರಿ ಸಮುದಾಯ ಔದ್ಯೋಗಿಕವಾಗಿಯೂ ಸಾಕಷ್ಟು ಹಿಂದುಳಿದಿದೆ. ಸಮುದಾಯದವರು ಸಣ್ಣಪುಟ್ಟ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಸಮಗ್ರ ಅಭಿವೃದ್ಧಿಗೆ ನಿಗಮದ ಅವಶ್ಯಕತೆ ಇದೆ ಎಂದು ಧರಣಿ ನಿರತರು ತಿಳಿಸಿದರು.
    ಕಳೆದ ಹಲವು ವರ್ಷಗಳಿಂದ ಪ್ರತ್ಯೇಕ ನಿಗಮಕ್ಕಾಗಿ ಹೋರಾಟ ನಡೆಯುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಹಲವು ನಿಗಮ ಸ್ಥಾಪನೆ ಮಾಡಿದೆ. ಅದೇ ರೀತಿ ನದಾಫ್ ಮತ್ತು ಪಿಂಜಾರ ಸಮುದಾಯಕ್ಕೂ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಈ ಬಗ್ಗೆ ಸಾಕಷ್ಟು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಲಾಗಿದೆ. ಆದರೂ ಈವರೆಗೆ ಬೇಡಿಕೆ ಈಡೇರಿಲ್ಲ. ಹೀಗಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನದ ಧರಣಿ ನಡೆಸಲಾಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಇಲ್ಲವಾದಲ್ಲಿ ಹೋರಾಟ ನಿರಂತರವಾಗಿರಲಿದೆ ಎಂದು ಮನವಿ ಪತ್ರದ ಮೂಲಕ ಮನವರಿಕೆ ಮಾಡಿದರು.
    ಪ್ರಮುಖ ಬೇಡಿಕೆಗಳು:
    ನದಾಫ್-ಪಿಂಜಾರ ಜನಾಂಗ ಎಲ್ಲ ಹಂತದಲ್ಲೂ ಹಿಂದುಳಿದಿದ್ದು ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಸದರಿ ಸಮುದಾಯ ಪ್ರವರ್ಗ-1 ರಲ್ಲಿ ಸೇರ್ಪಡೆಯಾಗಿದ್ದರೂ ದೃಢೀಕರಣ ಪತ್ರ ಪಡೆದುಕೊಳ್ಳುವಲ್ಲಿ ಅಧಿಕಾರಿಗಳಿಂದ ಉಂಟಾಗುತ್ತಿರುವ ತೊಂದರೆ ಬಗೆ ಹರಿಸಬೇಕು. ವಿವಿಧ ತರಬೇತಿ ಕೇಂದ್ರಗಳಿಗೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಜಿಲ್ಲಾ ಕೇಂದ್ರಗಳಲ್ಲಿ ಜಾಗೆ ನೀಡಿ ಸಮುದಾಯ ಭವನ ನಿರ್ಮಿಸಿಕೊಡಬೇಕು. ಜಿಲ್ಲಾ ಮಟ್ಟದಲ್ಲಿ ವಕ್ಫ್ ಕಮೀಟಿಗಳು ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಸಮಿತಿಗಳಲ್ಲಿ ಜನಾಂಗದವರಿಗೂ ಸದಸ್ಯರನ್ನಾಗಿ ನೇಮಕ ಮಾಡುವುದರ ಮೂಲಕ ಜನಾಂಗದವರಿಗೆ ಅವಕಾಶ ನೀಡಬೇಕೆಂದು ಸಂಘದ ಸದಸ್ಯರು ಒತ್ತಾಯಿಸಿದರು.
    ಅಧ್ಯಕ್ಷ ಎಂ.ಕೆ. ನದಾಫ್, ಅಯುಬ್‌ಖಾನ ಡಿ.ನದಾಫ್, ಡಾ.ಬಂದೇನಮಾಜ್ ಕೋರಬು, ಫರೀದಮೌಲಾಸಾಬ ನದಾಫ್, ಪೀರಸಾಬ ಅಮೀನಸಾಬ ನದಾಫ್, ಮಹಿಬೂಬ ರುಕಮುದ್ದೀನ ಹತ್ತಳ್ಳಿ, ಮೌಲಾಸಾಬ ಡೊಂಗ್ರಿಸಾಬ ಬಡೇಘರ, ಮೌಲಾಸಾಬ ಲಾಲಸಾಬ ನದಾಫ್, ಮಕ್ತುಮಸಾಬ ಖಾಜಿಸಾಬ ನದಾಫ್, ದಾವಲಮಲಿಕ ಹು.ನದಾಫ್, ರಾಜಾಭಕ್ಷ ಲಾ.ನದಾಫ್, ಅಲ್ಲಿಸಾಬ ಹು.ನದಾಫ್, ಇಸ್ಮಾಯಿಲಸಾಬ ನದಾಫ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts