More

    ರಾಜ್ಯಮಟ್ಟದಲ್ಲಿ ಕಿತ್ತೂರು ಉತ್ಸವ ಸಂಭ್ರಮ

    ಚನ್ನಮ್ಮನ ಕಿತ್ತೂರು, ಬೆಳಗಾವಿ: ಈ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದಲ್ಲಿ ಆಚರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದರಿಂದ ಚನ್ನಮ್ಮಾಜಿಯ ವೀರಜ್ಯೋತಿ ರಾಜ್ಯದ ಮೂಲೆ ಮೂಲೆಗೂ ಸಂಚರಿಸಲಿದ್ದು, ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ.
    ಅಕ್ಟೋಬರ್ 2ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗಿದ್ದು, ಅದು ರಾಜ್ಯಾದ್ಯಂತ ಸಂಚರಿಸಿ ಅ. 23ರಂದು ಕಿತ್ತೂರು ಪ್ರವೇಶಿಸಲಿದೆ. ಅಂದಿನಿಂದ (ಅ. 23, 24, 25) ಮೂರು ದಿನಗಳ ಕಾಲ ಐತಿಹಾಸಿಕ ಕಿತ್ತೂರು ಉತ್ಸವವು ಸಂಭ್ರಮದಿಂದ ಜರುಗಲಿದೆ.

    ಯುದ್ಧದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟಿಷರನ್ನು ಸೋಲಿಸಿ ವಿಜಯೋತ್ಸವ ಆಚರಿಸಿದ ಸವಿನೆನಪಿಗಾಗಿ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವಾಗಿಸಿ ಕಿತ್ತೂರು ನಾಡಿನ ಮೇಲೆ ಅಪಾರ ಅಭಿಮಾನ ಮೆರೆದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಐತಿಹಾಸಿಕ ಕಿತ್ತೂರಿನ ಚಿತ್ರಣವನ್ನೇ ಬದಲಿಸಿ ರಾಷ್ಟ್ರಮಟ್ಟದ ಪ್ರವಾಸ ತಾಣವನ್ನಾಗಿ ಮಾಡಲು ಸಾಕಷ್ಟು ಅನುದಾನ ನೀಡುವ ಮೂಲಕ ಮತ್ತೆ ಕಿತ್ತೂರಿನ ಗತವೈಭವ ಮರುಕಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

    ದೊಡಗೌಡರ ಕಾರ್ಯಕ್ಕೆ ಶ್ಲಾಘನೆ: ಕಿತ್ತೂರು ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಕೋಟೆ ಸುತ್ತಮುತ್ತ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಈ ಬಾರಿ ರಾಜ್ಯಮಟ್ಟದ ಉತ್ಸವ ಇರುವುದರಿಂದ ಮೊದಲ ಬಾರಿಗೆ ಮೂರು ವೇದಿಕೆ ನಿರ್ಮಿಸಲಾಗುತ್ತಿದೆ. ಜನರಿಗೆ ತೊಂದರೆ ಉಂಟಾಗದಂತೆ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶಾಸಕ ದೊಡಗೌಡರ ಹಾಗೂ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಕೇವಲ ಜಿಲ್ಲೆಗೆ ಸೀಮಿತವಾಗಿದ್ದ ಕಿತ್ತೂರು ಉತ್ಸವವನ್ನು ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯಮಟ್ಟದಲ್ಲಿ ಆಚರಿಸುವಂತೆ ಮಾಡಿದ ಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಅವರ ಸತತ ಪ್ರಯತ್ನಕ್ಕೆ ಈ ಭಾಗದ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕಿತ್ತೂರು ಜ್ಯೋತಿಗೆ ಅದ್ದೂರಿ ಸ್ವಾಗತ: ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವಾಗಿ ಸರ್ಕಾರ ಆಚರಿಸಲು ನಿರ್ಧರಿಸಿದ್ದು, ರಾಜ್ಯಾದ್ಯಂತ ಕಿತ್ತೂರು ವಿಜಯ ಜ್ಯೋತಿಯಾತ್ರೆ ಸಂಚಾರ ಮಾಡುತ್ತಿದೆ. ಈ ಜ್ಯೋತಿಯು ರಾಮದುರ್ಗ ಪಟ್ಟಣಕ್ಕೆ ಅ. 15ರಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದ್ದು, ತಾಲೂಕಾಡಳಿತ, ಸಮುದಾಯದವರು ಹಾಗೂ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಭವ್ಯ ಸ್ವಾಗತ ಮಾಡಿಕೊಳ್ಳಲಾಗುವುದು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.
    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಕಿತ್ತೂರು ಜ್ಯೋತಿ ಉತ್ಸವ ಸ್ವಾಗತ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜ್ಯೋತಿಯನ್ನು ಶಿಶು ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರ ಕುಂಭಮೇಳ, ಕಲಾ ತಂಡಗಳು ಹಾಗೂ ಕಿತ್ತೂರು ಚನ್ನಮ್ಮಾಜಿ ಸಂಸ್ಥಾನದ ರೂಪಕಗಳೊಂದಿಗೆ ವಿದ್ಯಾರ್ಥಿಗಳ ಜತೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಮೆರವಣಿಗೆ ಮಾಡಲಾಗುವುದು. ಪಟ್ಟಣದ ತಾಪಂ ಸಭಾಭವನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

    ವಿವಿಧ ಸಂಘ-ಸಂಸ್ಥೆಗಳು, ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು ಹಾಗೂ ಪಂಚಮಸಾಲಿ ಸಮುದಾಯದವರು ಪಾಲ್ಗೊಳ್ಳಲಿ ದ್ದಾರೆ. ಎಲ್ಲ ಅಧಿಕಾರಿಗಳು ಕಡ್ಡಾಯ ವಾಗಿ ಪಾಲ್ಗೊಳ್ಳಬೇಕು ಎಂದರು.

    ತಾಪಂ ಇಒ ಪ್ರವೀಣಕುಮಾರ ಸಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ.ಎಸ್.ಯಾದವಾಡ, ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್.ಬೆಳವಟಗಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಕುಂಬಾರ, ಶ್ರೀದೇವಿ ಮಾದನ್ನವರ, ಮಹಾದೇವಪ್ಪ ಮದಕಟ್ಟಿ, ಗೌಡಪ್ಪಗೌಡ ಪಾಟೀಲ, ಉಮೇಶ ಬಳಿಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts