More

    ರಾಜ್ಯದಲ್ಲಿ ಎಂಇಎಸ್, ಶಿವಸೇನೆ ಸಂಘಟನೆ ನಿಷೇಧಿಸಿ

    ಬೆಳಗಾವಿ: ಎಂಇಎಸ್, ಶಿವಸೇನೆ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ರವಾನಿಸಿದರು. ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ಮಾಡಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಲೇ ಇದ್ದಾರೆ. ರಾಜ್ಯದ ಆಸ್ತಿ ಹಾನಿ ಮಾಡಿ ಪದೇ ಪದೆ ಬಾಲ ಬಿಚ್ಚುತ್ತಿರುವ ಎಂಇಎಸ್, ಶಿವಸೇನೆಯನ್ನು ನಿಷೇಧಿಸಿ, ಪುಂಡರನ್ನು ತಕ್ಷಣ ಬಂಧಿಸಿ ಸರ್ಕಾರದ ಶಕ್ತಿ ತೋರಿಸಬೇಕಿದೆ ಎಂದು ಒತ್ತಾಯಿಸಿದರು.
    ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಧ್ಯೆ 18 ವರ್ಷಗಳಿಂದ ಗಡಿ ವಿವಾದ ಇದೆ. ಮಹಾಜನ ಆಯೋಗದ ವರದಿಯನ್ನು ಧಿಕ್ಕರಿಸಿ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಜಿಲ್ಲೆಗೆ ಸೇರಿದ 885 ಪಟ್ಟಣ ಪ್ರದೇಶ, ಗ್ರಾಮಗಳು ತಮಗೆ ಸೇರಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿ, ವಾದ ಮಂಡಿಸುತ್ತ ಬಂದಿದೆ. ಈ ವಿವಾದ ಈತ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿರುವ ಈ ಸಂದರ್ಭದಲ್ಲಿ ಪ್ರಕರಣದ ಜವಾಬ್ದಾರಿ ವಹಿಸಬೇಕಾಗಿದ್ದ ಕರ್ನಾಟಕ ಗಡಿ ಸಂರಕ್ಷಣಾ ಆಯೋಗವು ನಿಷ್ಕ್ರಿಯವಾಗಿದೆ. 2018ರಿಂದ ಗಡಿ ಉಸ್ತುವಾರಿ ಸಚಿವರ ನೇಮಕವೇ ಆಗಿಲ್ಲ. ಆದರೆ, ಮಹಾರಾಷ್ಟ್ರ ಸರ್ಕಾರ ದಾವೆ ಹೂಡಿ ಅದರ ಮೇಲೂ ಉಸ್ತುವಾರಿ ನೋಡಿಕೊಳ್ಳಲು ಸಚಿವರನ್ನು ನೇಮಿಸಿದೆ. ಇದನ್ನು ನೋಡಿದರೆ ನಮ್ಮ ರಾಜ್ಯ ಸರ್ಕಾರದ ನಿರ್ಲಕ್ಷೃ ಮನೋಭಾವ ಎದ್ದು ಕಾಣುತ್ತದೆ.
    ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಕ್ರಿಯಗೊಂಡಿರುವ ಗಡಿ ಸಂರಕ್ಷಣಾ ಆಯೋಗಕ್ಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಆದೇಶಿಸಬೇಕು. ಗಡಿ ಉಸ್ತುವಾರಿ ಸಚಿವರನ್ನು ಕೂಡಲೇ ನೇಮಿಸಿ, ಕನ್ನಡಿಗರಿಗೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ದಯಾನಂದ ಪವಾರ, ಬಾಬು ಹುಳವಿ, ಗುರುನಾಥ ಕುರಣೆ, ಸಂತೋಷ ಹುದಲಿ, ಈಶ್ವರಗೌಡ ಪಾಟೀಲ, ರವಿ ಜಗ್ಗಮ್ಮನವರ, ಸುರೇಖಾ ಅಳವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts