More

    ರಾಜಕಾರಣಿಗಳ ಹಿಂಬಾಲಕರಾಗದಿರಿ: ರೈತ ದಿನಾಚರಣೆಯಲ್ಲಿ ಜೆಡಿಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ಕರೆ

    ಮುಳಬಾಗಿಲು: ರೈತರು ರಾಜಕಾರಣಿಗಳ ಹಿಂಬಾಲಕರಾಗದೆ ಪ್ರಶ್ನೆ ಮಾಡುವುದನ್ನು ಕಲಿತು ಸಂಘಟಿತರಾದರೆ ರೈತರು ಬೆಳೆದ ಉತ್ಪನ್ನಗಳು ಮೌಲ್ಯವರ್ಧನಗೊಳ್ಳಲು ಸಾಧ್ಯವಾಗುತ್ತದೆ ಎಂದು ಜೆಡಿಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ಹೇಳಿದರು.

    ತಾಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಉಪಮಾರುಕಟ್ಟೆಯಲ್ಲಿ ರೈತ ಸಂಘದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆಯಲ್ಲಿ ಮಾತನಾಡಿ, ರೈತರು ಶ್ರಮಜೀವಿಗಳಾಗಿದ್ದು, ಬೆಳೆಗಳಿಗೆ ಹಾಕಿದ ಬಂಡವಾಳವೂ ಕೈ ಸೇರದೆ ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದರು.

    ರಾಜಕಾರಣಿಗಳನ್ನು ಎಲ್ಲರೂ ಬೈಯುತ್ತಾರೆ, ಭ್ರಷ್ಟರೆನ್ನುತ್ತಾರೆ. ಆದರೆ ಸಭೆ-ಸಮಾರಂಭಗಳಿಗೆ ಅವರನ್ನೇ ಆಹ್ವಾನಿಸುತ್ತಾರೆ. ಈ ರೀತಿ ಪ್ರವೃತ್ತಿ ಬದಲಾಗಬೇಕು. ಚುನಾವಣೆ ಬಂದಾಗ ಅರ್ಹರನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಭ್ರಷ್ಟಾಚಾರ ತುಂಬಿ ತುಳುಕುತ್ತದೆ. ತಾಲೂಕು ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಶ್ನಿಸುವವರೇ ಇಲ್ಲವಾಗಿದ್ದಾರೆ. ಅಧಿಕಾರಿಗಳೂ ರಾಜಕಾರಣ ಮಾಡುತ್ತಾರೆ. ಇಲ್ಲಿ ಅಧಿಕಾರಿಗಳು ಯಾರು, ರಾಜಕಾರಣಿಗಳು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದರು.

    ತಹಸೀಲ್ದಾರ್ ಆರ್.ಶೋಭಿತಾ ಮಾತನಾಡಿ, ರೈತರ ಯಾವುದೇ ಸಮಸ್ಯೆಗಳಿದ್ದರೂ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಲಾಗುವುದು. ಕೆಲವರು ಪಿ-ನಂಬರ್‌ಗಳನ್ನು ತೆಗೆಯಬೇಕೆಂದು ಹೇಳುತ್ತಾರೆ ಆದರೆ ಪಿ-ನಂಬರ್ ಯಾವ ಹಂತದಲ್ಲಿ ತೆಗೆಯಬಹುದು ಎಂಬುದಕ್ಕೆ ಸರ್ಕಾರದ ನಿಯಮ ನಿಬಂಧನೆ ಪರಿಶೀಲಿಸಬೇಕಾಗುತ್ತದೆ. ಅದನ್ನು ಮಾತ್ರ ತೆಗೆದು ಪ್ರತ್ಯೇಕ ಪಹಣಿ ಮಾಡಬಹುದು. ಉಳಿದಂತೆ ಕಾನೂನಿನ ವಿರುದ್ಧ ಪಿ ನಂಬರ್ ತೆಗೆಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿಯಬೇಕು. ಎಲ್ಲವನ್ನು ಒಂದೇ ಮಾನದಂಡದಲ್ಲಿ ಪರಿಗಣಿಸಲು ಕಾನೂನು ಒಪ್ಪುವುದಿಲ್ಲ ಎಂದರು.

    ಎಪಿಎಂಸಿ ನಿರ್ದೇಶಕ ನಗವಾರ ಎನ್.ಆರ್.ಸತ್ಯಣ್ಣ ಮಾತನಾಡಿ, ಲಾಕ್‌ಡೌನ್ ಅವಧಿಯಲ್ಲಿ ಟೊಮ್ಯಾಟೊಗೆ ಬೆಲೆ ಇಲ್ಲದೆ ಎಸೆಯುವ ಪರಿಸ್ಥಿತಿ ಉಂಟಾಗಿತ್ತು. ಆಗ ಕ್ಷೇತ್ರದ ಶಾಸಕರಾಗಿದ್ದ ಸಚಿವ ಎಚ್.ನಾಗೇಶ್ ಸೇರಿ ಸಂಸದರು, ಸಚಿವರಿಗೆ ಮನವಿ ಸಲ್ಲಿಸಿ 15 ಕೆಜಿ ಟೊಮ್ಯಾಟೊ ಬಾಕ್ಸ್‌ನ್ನು ಕನಿಷ್ಠ 30 ರೂ. ಬೆಂಬಲ ಬೆಲೆಗೆ ಖರೀದಿಸಿ ಎಂದು ಮನವಿ ನೀಡಲಾಗಿತ್ತು. ಆದರೆ ಅದನ್ನು ಕಸದ ಬುಟ್ಟಿಗೆ ಎಸೆದು ರೈತ ವಿರೋಧಿ ಧೋರಣೆ ತಾಳಿದರು. ಇದು ರೈತರ ಬಗ್ಗೆ ರಾಜಕಾರಣಿಗಳಿಗೆ ಇರುವ ಪ್ರೀತಿ ಎಂದರು.

    ಎಪಿಎಂಸಿ ಅಧ್ಯಕ್ಷ ಹೈದ್ಲಾಪುರ ಜಯರಾಮರೆಡ್ಡಿ, ಮಾಜಿ ಅಧ್ಯಕ್ಷ ಗೊಲ್ಲಹಳ್ಳಿ ಪಿ.ವೆಂಕಟೇಶ್, ನಿರ್ದೇಶಕ ಮರಹೇರು ವೆಂಕಟರವಣಪ್ಪ, ಬಿಇಒ ಡಿ.ಗಿರಿಜೇಶ್ವರಿದೇವಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಸ್.ಶಿವಕುಮಾರಿ, ರೇಷ್ಮೆ ಇಲಾಖೆಯ ಹನುಮಂತು, ಕೃಷಿ ಇಲಾಖೆಯ ಆರ್.ರವಿಕುಮಾರ್, ಎನ್.ವಡ್ಡಹಳ್ಳಿ ಟೊಮ್ಯಾಟೋ ಮಂಡಿ ಮಾಲೀಕರ ಸಂಘದ ಅಧ್ಯಕ್ಷ ಟಿ.ವೆಂಕಟರವಣಪ್ಪ, ಕಾರ್ಯದರ್ಶಿ ಕೆ.ಎಸ್.ಪ್ರಭಾಕರ್, ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹಾಗೂ ರೈತ ಸಂಘದ ಪದಾಧಿಕಾರಿಗಳು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts