More

    ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಿ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಆಗ್ರಹ

    ಮಂಡ್ಯ: ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಸರ್ಕಾರ ಬಗೆಹರಿಸಲಿ. ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆತರೆ ಅವರು ಏಕೆ ಆತ್ಮಹತ್ಯೆ ದಾರಿ ಹಿಡಿಯುತ್ತಾರೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಪ್ರಶ್ನಿಸಿದರು.
    ನಗರದ ತೋಟಗಾರಿಕೆ ಇಲಾಖೆ ಕಚೇರಿ ಎದುರು ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ಮತ್ತು ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರೀಯ ರೈತರ ದಿನ ಅಂಗವಾಗಿ ಆಯೋಜಿಸಿದ್ದ ಸಾವಯವ ಕೃಷಿಕರಿಗೆ ಅಭಿನಂದನೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಆರ್ಥಿಕ ಬದುಕು ಸುಧಾರಣೆಯಾಗಿ ಆತ್ಮಹತ್ಯೆ ಸಂಪೂರ್ಣ ಇಲ್ಲದಂತಾಗಲಿ ಎನ್ನುವುದೇ ನಮ್ಮೆಲ್ಲರ ಆಶಯ ಎಂದರು.
    ಭಾರತದ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್‌ಸಿಂಗ್ ಅವರ ಸ್ಮರಣಾರ್ಥ ಡಿ.23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ಕೃಷಿ ಆರ್ಥಿಕತೆಯ ಮಹತ್ವವನ್ನು ಅವರು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು. ರೈತರ ಆರ್ಥಿಕ ಸುಧಾರಣೆಯಾಗಬೇಕಾದರೆ ಹಸಿರು ಕ್ರಾಂತಿಯ ನೇತಾರ ಪ್ರೊ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಯಾಗಬೇಕು. 2004ರಲ್ಲಿ ನಿಯೋಜನೆಗೊಂಡ ಸಮಿತಿ 5 ಹಂತದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಅದು ಜಾರಿಯಾಗಿದ್ದರೆ ರೈತರ ಬದುಕು ಹಸನುಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
    ಸ್ವಾಮಿನಾಥನ್ ವರದಿಯಲ್ಲಿ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಕೃಷಿಯನ್ನು ಸೇರಿಸಬೇಕು ಎಂದಿದೆ. ಅದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಮಾನ ಹಕ್ಕು ಸಿಗುತ್ತದೆ. ವ್ಯವಸ್ಥಿತ ಭೂ ಹಂಚಿಕೆ ಹಾಗೂ ನಿರ್ವಹಣೆಗಾಗಿ ’ರಾಷ್ಟ್ರೀಯ ಭೂ ಬಳಕೆ ಸಲಹಾ ಸೇವೆ’ಯನ್ನು ಆರಂಭಿಸಬೇಕು. ಉತ್ತಮ ಇಳುವರಿಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆ ಮಾಡುವ ಕ್ರಮ ಕೈ ಬಿಡಬೇಕು ಎನ್ನುವ ಅಂಶಗಳು ವರದಿಯಲ್ಲಿವೆ. ಭೂ ಅಭಿವೃದ್ಧಿ, ನಾಲೆ ವ್ಯವಸ್ಥೆ, ನೀರನ್ನು ಸಂರಕ್ಷಣೆ, ಕೃಷಿ ಸಂಶೋಧನೆ ಹಾಗೂ ಗ್ರಾಮೀಣ ರಸ್ತೆ ಸುಧಾರಣಗೆ ಆದ್ಯತೆ, ಸರ್ಕಾರದಿಂದಲೇ ಕೃಷಿ ಕ್ಷೇತ್ರದಲ್ಲಿ ಹೂಡಿಕೆ, ಕೃಷಿ ವಿಪತ್ತು ನಿಧಿ ಸ್ಥಾಪನೆಯಾಗಬೇಕು, ಮಹಿಳೆಯರಿಗೆ ಕಿಸಾನ್ ಕಾರ್ಡ್, ತಳಿ ಅಭಿವೃದ್ಧಿಗೆ ಉತ್ತೇಜನ ನೀಡುವ ಯೋಜನೆಗಳ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
    ಇಂದಿನ ಜನತೆ ರಾಸಾಯನಿಕ ಮುಕ್ತ ಆಹಾರ, ಸೊಪ್ಪು ಪದಾರ್ಥಗಳನ್ನು ಬಳಸುವುದು ಉತ್ತಮ. ರೋಗಯುಕ್ತ ಜೀವನ ನಡೆಸಲು ಸಾವಯವ ಪದಾರ್ಥಗಳ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು. ದಿನನಿತ್ಯದ ಬದುಕಿನಲ್ಲಿ ಸಿರಿಧಾನ್ಯ ಆಹಾರಪದಾರ್ಥಗಳ ಬಳಕೆ ಅವಶ್ಯವಿದೆ. ಸಾವಯವ ಸಂತೆಗಳಲ್ಲಿ ಪ್ರಗತಿಪರ ರೈತರು ಬೆಳೆದು ತಂದು ಮಾರುತ್ತಾರೆ. ಕೊಂಡುಕೊಳ್ಳುವ ಮನಸ್ಥಿತಿ ಅವಶ್ಯಕ ಎಂದು ಸಲಹೆ ನೀಡಿದರು.
    ಸಾವಯವ ಕೃಷಿಕ ಬೆಟ್ಟೆತಿಮ್ಮನಕೊಪ್ಪಲು ಸೋಮೇಗೌಡ ಮಾತನಾಡಿ, ಪೂರ್ವಿಕರಂತೆ ಬೆಳೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಯುವುದು ಅವಶ್ಯಕ. ಇಂದಿನ ದಿನಗಳಲ್ಲಿ ಮಾರುಕಟ್ಟೆಯದ್ದೇ ಸಮಸ್ಯೆ. ದಲ್ಲಾಳಿಗಳಿಲ್ಲದೆ ಬೆಳೆ ಮಾರಾಟವೇ ಆಗದ ಸ್ಥಿತಿಯಲ್ಲಿದ್ದೇವೆ. ಇದು ಮೊದಲು ತಪ್ಪಬೇಕಿದೆ. ಬದಲಿಗೆ ನೇರವಾಗಿ ಕೃಷಿಕನಿಂದ ಗ್ರಾಹಕರಿಗೆ ವಸ್ತುಗಳು, ಆಹಾರ ಪದಾರ್ಥಗಳು ಲಭ್ಯವಾಗಬೇಕು. ಆರ್ಥಿಕ ಪ್ರಗತಿಗಾಗಿ ಮಿಶ್ರಬೇಸಾಯ, ಮಿಶ್ರಬೆಳೆ, ಮನೆ ಬಳಕೆಗೆ ಅನುಕೂಲಕವಾಗುವ ಪದಾರ್ಥಗಳನ್ನು ನಾವೇ ಬೆಳೆಯಬೇಕು. ತಯಾರಿಸಿಕೊಳ್ಳುವ ಕೌಶಲಜ್ಞಾನ, ಕೃಷಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
    ಕೃಷಿಕ ಲಯನ್ಸ್ ಸಂಸ್ಥೆ ಖಜಾಂಚಿ ರಮೇಶ್, ನಿರ್ದೇಶಕಿ ನೀನಾ ಪಟೇಲ್, ಪ್ರತಿಭಾಂಜಲಿ ಪ್ರೊ.ಡೇವಿಡ್ ಇತರರಿದ್ದರು.
    ಇದೇ ಸಂದರ್ಭದಲ್ಲಿ ಸಾವಯವ ಕೃಷಿಕರಾದ ಎಂ.ಸಿ.ಕಾಂತರಾಜು, ಬನ್ನಹಳ್ಳಿ ಶಿವಣ್ಣ, ಬೆಟ್ಟೆತಿಮ್ಮನಕೊಪ್ಪಲು ಸೋಮೇಗೌಡ, ಪುರುಷೋತ್ತಮ್, ಮಾರಗೌಡನಹಳ್ಳಿ ದರ್ಶನ್‌ಗೌಡ ಅವರನ್ನು ಗಣ್ಯರು ಅಭಿನಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts